bantwalnews.com report
ವಿಟ್ಲದ ಪೆಟೋಲ್ ಪಂಪ್ ಹಾಗೂ ಕೆ.ಎಸ್.ಆರ್.ಟಿ ಬಸ್ ನಿಲ್ದಾಣದ ಹಿಂಬದಿಯ ಬಾಕಿಮಾರ್ ಗದ್ದೆಗೆ ಕಿಡಿಗೇಡಿಗಳ ಬೇಜವಾಬ್ದಾರಿಯಿಂದ ಬೆಂಕಿ ತಗುಲಿದ್ದು, ಸ್ಥಳೀಯರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಶುಕ್ರವಾರ ಮಧ್ಯಾಹ್ನ ಸುಮಾರಿಗೆ ವಿಟ್ಲ-ಕಾಸರಗೋಡು ರಸ್ತೆಯ ಅರಮನೆಗೆ ಸಂಬಂಧಿಸಿದ ಬಾಕಿಮಾರ್ ಗದ್ದೆಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿತು. ಬೆಂಕಿಯ ಕೆನ್ನಾಲೆ ಸುಮಾರು ಎರಡು ಎಕರೆ ಜಾಗದಷ್ಟು ವ್ಯಾಪಿಸಿ ಒಣ ಹುಲ್ಲು ಧಗಧಗ ಉರಿಯುತ್ತಿತ್ತು. ಬಳಿಕ ಸ್ಥಳೀಯರು ನಂದಿಸಲು ಪ್ರಾರಂಭಿಸಿದರು. ಪೆಟ್ರೋಲ್ ಪಂಪ್ ವರೆಗೆ ವ್ಯಾಪಿಸಲು ಆರಂಭಿಸಿದಾಗ, ಪಂಪ್ ಸಿಬ್ಬಂದಿ ನಂದಿಸಿದರು. ಬಳಿಕ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣವರೆಗೆ ಹರಡಲು ಆರಂಭಿಸಿತು. ಈ ಸಂದರ್ಭ ಮೆಸ್ಕಾಂ ಶಾಖಾಧಿಕಾರಿ ವಸಂತ, ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್, ವಿಟ್ಲ ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಮೊದಲಾದವರು ಸೇರಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೆಂಟ್ರೋಲ್ ಪಂಪ್‌ನ ಸಿಬ್ಬಂದಿಗಳು ಹಾಗೂ ಸ್ಥಳೀಯರು ಜಾಗೃತ ವಹಿಸದಿದ್ದಲ್ಲಿ ಇನ್ನಷ್ಟು ಅನಾಹುತಕ್ಕೆ ಕಾರಣವಾಗುತ್ತಿತ್ತು.
ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಬೆಂಕಿ ಆರಿ ಹೋಗಿತ್ತು. ದಾರಿಯಲ್ಲಿ ನಡೆದುಕೊಂಡು ಹೋಗುವವರು ಬೀಡಿ ಸೇದಿದ ಬೆಂಕಿಯಿಂದ ಅಥವಾ ವಿದ್ಯುತ್ ತಂತಿಯ ಶಾರ್ಟ್ ಸರ್ಕಿಟ್‌ನಿಂದ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ