bantwalnews.com ವರದಿ
ಬಿ.ಸಿ.ರೋಡಿನ ಜನವಸತಿ ಬಡಾವಣೆಯಾಗಿರುವ ಹಾಗೂ ಜನಸಂಚಾರ ಇರುವ ಕೈಕುಂಜೆ ಪೂರ್ವ ಬಡಾವಣೆಯಲ್ಲಿ ಹಾಡುಹಗಲೇ ಕಳ್ಳತನ ನಡೆದಿದೆ. ಸಂಜೆ 6 ಗಂಟೆ ವೇಳೆಗೆ ಕೃತ್ಯ ನಡೆದಿದೆ ಎಂದು bantwalnews.com ಗೆ ಪೊಲೀಸರು ತಿಳಿಸಿದ್ದಾರೆ.
ಸಂಜೆ ವೇಳೆಗೆ ಕಚೇರಿ ಕರ್ತವ್ಯ ಮುಗಿಸಿ ಕೈಕುಂಜೆಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಬರುತ್ತಿದ್ದ ಬಿ.ಎಸ್.ಎನ್.ಎಲ್. ಉದ್ಯೋಗಿ ಕಮಲಾಕ್ಷಿ ಮಯ್ಯ ಅವರು ಬಿ.ಸಿ.ರೋಡಿನ ಕೈಕುಂಜೆ ಪೂರ್ವ ಬಡಾವಣೆಯ ಚಿತ್ರಾ ಎಂಬ ಮನೆಯ ಎದುರು ಬಂದ ಸಂದರ್ಭ, ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ದಿಢೀರನೆ ಬಂದು ಕುತ್ತಿಗೆಯಲ್ಲಿದ್ದ 7 ಪವನ್ ಬಂಗಾರದ ಮಂಗಳಸೂತ್ರವನ್ನು ಸೆಳೆದೊಯ್ದಿದ್ದಾರೆ. ಕೂಡಲೇ ಕಮಲಾಕ್ಷಿ ಅವರು ಅವರನ್ನು ಸ್ವಲ್ಪ ದೂರ ಹಿಂಬಾಲಿಸಲು ಯತ್ನಿಸಿದರಾದರೂ ಅಪರಿಚಿತರು ಪರಾರಿಯಾಗಿದ್ದಾರೆ. ಪರಾರಿಯಾಗುವ ವೇಳೆ ಕೈಕುಂಜ ಜಂಕ್ಷನ್ ನಲ್ಲಿ ಮತ್ತೋರ್ವ ಬೈಕಿನಲ್ಲಿ ಕುಳಿತುಕೊಂಡಿದ್ದಾನೆ. ಆರೋಪಿಗಳಲ್ಲಿ ಓರ್ವ ಹೆಲ್ಮೆಟ್ ಧರಿಸಿದ್ದ ಎಂದು bantwalnews.com ಗೆ ಪೊಲೀಸರು ತಿಳಿಸಿದ್ದಾರೆ.
ಚಿನ್ನಾಭರಣದ ಮೌಲ್ಯ ಸುಮಾರು 1 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದ್ದು, ಜನವಸತಿ ಇರುವ ಬಡಾವಣೆಯಲ್ಲಿ ಹಾಡುಹಗಲೇ ಈ ಕೃತ್ಯ ನಡೆದಿರುವುದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳು ಬೈಕಿನಲ್ಲಿ ಬೆಳಗ್ಗಿನಿಂದಲೇ ಸುತ್ತಾಡುತ್ತಿದ್ದರು ಎಂದು ಹೇಳಲಾಗಿದ್ದು, ಈ ಪರಿಸರದಲ್ಲಿ ಅಪರಿಚಿತರ ಸಂಚಾರ ನಿತ್ಯವೂ ಇರುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ. ಆರೋಪಿಗಳು ಕೈಕುಂಜ ಜಂಕ್ಷನ್ ನಿಂದ ಬಿ.ಇ.ಓ ಕಚೇರಿ ಸಮೀಪದ ಮಾರ್ಗದಲ್ಲಿ ರಕ್ತೇಶ್ವರಿ ಕಡೆಗೆ ಹೋಗುವ ದಾರಿಯಲ್ಲಿ ಪರಾರಿಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರತಿ ದಿನವೂ ಕಮಲಾಕ್ಷಿ ಅವರು ನಡೆದುಕೊಂಡೇ ಬರುತ್ತಿದ್ದು, ಮೂವರು ಆರೋಪಿಗಳಲ್ಲಿ ಓರ್ವ ಕೈಕುಂಜೆ ಜಂಕ್ಷನ್ ನಿಂದ ಇಬ್ಬರು ಆರೋಪಿಗಳಿಗೆ ಬರುತ್ತಿರುವ ಬಗ್ಗೆ ಸಂದೇಶ ನೀಡಿರುವ ಸಾಧ್ಯತೆ ಇದೆ ಎಂದು bantwalnews.com ಗೆ ಸ್ಥಳೀಯರು ತಿಳಿಸಿದ್ದಾರೆ.
ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ .ಐ. ನಂದಕುಮಾರ್, ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ತನಿಖೆ ನಡೆಸಿದರು.