ಕೆಲ ದಿನಗಳ ಹಿಂದೆಯಷ್ಟೇ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಡೀಲರ್ ಗಳನ್ನು ಮಟ್ಟ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿರುವ ಸುದ್ದಿ ಗೊತ್ತೇ ಇದೆ. ಇದೀಗ ಬಂಟ್ವಾಳದ ಸರದಿ. ಬಂಟ್ವಾಳ ತಾಲೂಕಿನ ಪುಂಚಮೆ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಊರು ಆಂಧ್ರಪ್ರದೇಶದ ಚಿತ್ತೂರು. ಹೆಸರು : ಅಬ್ದುಲ್ ಲತೀಫ್. ವಯಸ್ಸು 22.
ಮನೆ ಮನೆಗಳಿಗೆ ಕತ್ತರಿ ಸಾಣೆ ಮಾಡುತ್ತೇನೆ ಎಂದು ತೆರಳುತ್ತಿದ್ದ ಈತ ಯಾರಿಗೂ ಅನುಮಾನ ಬಾರದಂತೆ ಗಾಂಜಾ ಮಾರುತ್ತಿದ್ದ. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪುಂಚಮೆ ಎಂಬಲ್ಲಿ ಈಗಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ರಕ್ಷಿತ್ ಗೌಡ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.
ಜಗದೀಶ್, ಸುರೇಶ್, ಮಾಧವ, ಜನಾರ್ದನ್, ಪ್ರವೀಣ್, ಪುನೀತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಅನುಮಾನದ ಮೇರೆಗೆ ಈತನನ್ನು ಬಂಧಿಸಿದಾಗ ಗಾಂಜಾ ಮಾರುತ್ತಿದ್ದುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಈತನಿಂದ 140 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧನ ವೇಳೆಗೆ ಆರೋಪಿಯ ತಂದೆ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.