ಅಡ್ಯನಡ್ಕ ಸಮೀಪ ಮರಕ್ಕಿಣಿ ಎಂಬಲ್ಲಿ ಬೃಹತ್ ಮರಗಳ ಸಾಲಿನ ಮರವೊಂದಕ್ಕೆ ಬೆಂಕಿ ತಗಲಿ ಕೆಲ ಕ್ಷಣ ಆತಂಕದ ಪರಿಸ್ಥಿತಿ ಸೋಮವಾರ ತಡರಾತ್ರಿ ನಿರ್ಮಾಣವಾಯಿತು. ಸ್ಥಳೀಯರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿಹೋಗಿದೆ.
ಕಾರ್ಯಕ್ರಮವೊಂದರಿಂದ ಹಿಂದಿರುಗುತ್ತಿದ್ದ ಅಫ್ವಾನ್ ಎಂಬವರಿಗೆ ಮರದ ತುದಿಯಲ್ಲಿ ಬೆಂಕಿಯ ಜ್ವಾಲೆ ಕಾಣಿಸಿತು. ತಕ್ಷಣ ವಾಟ್ಸಪ್ ಹಾಗೂ ದೂರವಾಣಿ ಮೂಲಕ ಸುತ್ತಮುತ್ತಲಿನವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಸ್ಥಳೀಯ ಮನೆಯಿಂದ ಪಂಪ್ ಮೂಲಕ ನೀರಾಯಿಸುವ ಪ್ರಯತ್ನ ನಡೆಸಿದರು.
ಬೃಹತ್ ಮರಗಳ ಸಾಲಿನ ನಡುವೆ ಈ ಮರಕ್ಕೆ ಬೆಂಕಿ ತಗುಲಿತ್ತು. ಮೆಸ್ಕಾಂ ವಿದ್ಯುತ್ ತಂತಿ ಈಮರಕ್ಕೆ ತಾಗಿ ಕೊಂಡು ಹೋಗಿದ್ದು, ಇದರಿಂದ ಬೆಂಕಿ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಕೇಪು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಕರೀಂ ಕುದ್ದುಪದವು ಈ ತಂಡಕ್ಕೆ ಸಾಥ್ ನೀಡಿ ಅಗ್ನಿಶಾಮಕ ದಳ, ಮೆಸ್ಕಾಂಗೆ ಕರೆ ಮಾಡುವ ಮೂಲಕ ಹೆಚ್ಚಿನ ಅವಗಡವನ್ನು ತಡೆದಿದ್ದಾರೆ. ಬಂಟ್ವಾಳ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.