ಸಂಸ್ಕಾರವನ್ನು ಬೆಳೆಸಿಕೊಂಡು ಹೋಗದಿದ್ದರೆ ಸಮುದಾಯದ ಶಕ್ತಿ ವ್ಯರ್ಥವಾಗುತ್ತದೆ. ಎಲ್ಲ ಸಮುದಾಯವನ್ನು ಉತ್ತಮವಾಗಿ ಕಾಣುವ ಜತೆಗೆ ಆದರ್ಶನದ ಹಾದಿಯಲ್ಲಿ ನಡೆಯುವ ಕಾರ್ಯನಡೆಯಬೇಕು. ಭೂಮಿಯಲ್ಲಿ ಯಾವುದೂ ಶಾಶ್ವತವಾದ್ದಲ್ಲ, ನದಿಗಳಿಗೆ – ಪರಿಸರಕ್ಕೆ ಸೇರಿ ಎಲ್ಲಾ ವಸ್ತುವಿಗೂ ಸಾವಿದೆ ಎಂದು ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.
ವಿಟ್ಲ ಶಾಂತಿನಗರ ಅಕ್ಷಯ ಶ್ರೀಮತಿ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ವತಿಯಿಂದ ನಡೆದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬನ ಬದುಕಿನಲ್ಲಿ ತಾತ್ವಿಕ ಆಧ್ಯಾತ್ಮಿಕ ಬೌದ್ಧಿಕ ಪಾರಮಾರ್ಥಿಕವಾಗಿ ಮಾರ್ಗದರ್ಶನ ನೀಡಲು ಗುರುವಿನಿಂದ ಮಾತ್ರ ಸಾಧ್ಯ ಎಂದು ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ ಸಾಧು ಸಂತರ ಸತ್ಸಂಗ ದರ್ಶನ ಜೀವನದ ಶ್ರೇಷ್ಠ ಕ್ಷಣಗಲಾಗಿದೆ. ಧರ್ಮ ಪೀಠದ ಸಂದೇಶಗಳ ಅನುಕರಣೆಯಿಂದ ಶಿಷ್ಯರ ಉದ್ಧಾರವಾಗುತ್ತದೆ. ಗುರು ವಂದನೆಯಿಂದ ಧನ್ಯತಾಭಾವ ಪ್ರಾಪ್ತಿಯಾಗುತ್ತದೆ. ಪ್ರೀತಿ ಭಕ್ತಿ ಶ್ರದ್ಧೆ ವಿಶಾಲತೆ ಉನ್ನತ ಸಂಪತ್ತಾಗಿದೆ ಎಂದು ಹೇಳಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶೃಂಗೇರಿ ಶಾಖಾ ಮಠದ ಶ್ರೀ ಗುಣಾನಾಥ ಸ್ವಾಮೀಜಿ ಉಪಸ್ಥಿತರಿದ್ದರು.
ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರಿಗೆ ಗೌರವಾರ್ಪಣೆ ಮಾಡಲಾಯಿತು. ಪಿ. ಎಚ್. ಆನಂದ ಗೌಡ, ರಾಮದಾಸ ಗೌಡ, ಮೋಹನ ಗೌಡ ಕಾಯರ್‌ಮಾರ್ ದಂಪತಿಗಳನ್ನು ಸನ್ಮಾನಿಸಲಾಯಿತು.ರೂಪಾಲತಾ ತೀರ್ಥಪ್ರಸಾದ್ ಕೊಂಗಲಾಯಿ, ನಿತ್ಯಾನಂದ ಮುಂಡೋಡಿ, ಗಿರಿಯಪ್ಪ ಗೌಡ ಗಿರಿನಿವಾಸ, ಲಿಂಗಪ್ಪ ಗೌಡ ಅವರನ್ನು ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಬಂಟ್ವಾಳ ತಾಲ್ಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಲಿಂಗಪ್ಪ ಗೌಡ ಅಳಿಕೆ ವಹಿಸಿದರು. ದಕ್ಷಿಣ ಕನ್ನಡ ಹಾಗೂ ಕೊಡಗು ಗೌಡ ಅಭಿವೃದ್ಧಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸಂಘದ ಅಧ್ಯಕ್ಷ ವಾಸುದೇವ ಗೌಡ, ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ವಿಟ್ಲ ಸಂಘದ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ಕೆ. ದೇವರ ಮನೆ ಮತ್ತಿತರರು ಉಪಸ್ಥಿತರಿದ್ದರು.
ಜನ್ಯ ಪ್ರಸಾದ್ ಪ್ರಾರ್ಥಿಸಿದರು. ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಕಾರ್ಯದರ್ಶಿ ಬಿ. ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಜಲಜಾಕ್ಷಿ ಪೊನ್ನೆತ್ತಡಿ ವಂದಿಸಿದರು. ನಾರಾಯಣ ಗೌಡ, ಗಿರಿಯಪ್ಪ ಗೌಡ ಶಾಂತಿಲ, ಯತೀಶ್ ಪಾದೆ ಕಾರ್ಯಕ್ರಮ ನಿರೂಪಿಸಿದರು.