ಬಂಟ್ವಾಳ

ಅರ್ಧಕ್ಕೆ ನಿಂತ ಕಾಮಗಾರಿ ವಿರೋಧಿಸಿ, ರಸ್ತೆ ತಡೆ ಪ್ರತಿಭಟನೆ, ಅಂಗಡಿ ಬಂದ್

  • ಸಾಲುಗಟ್ಟಿ ನಿಂತ ವಾಹನಗಳು
  • ಜನಪ್ರತಿನಿಧಿಗಳ ವರ್ತನೆ ವಿರುದ್ಧ ಆಕ್ರೋಶ
  • ಟ್ರಾಫಿಕ್ ಎಸ್ ಐ, ಹೆದ್ದಾರಿ ಇಲಾಖೆ ವಿರುದ್ಧ ಘೋಷಣೆ
  • ಅಂಗಡಿ ಮುಂಗಟ್ಟು ಬಂದ್

www.bantwalnews.com report

ಜಾಹೀರಾತು

ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಸಮೀಪ ರಸ್ತೆಯ ಎರಡೂ ಬದಿಯನ್ನು ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ರಸ್ತೆ ಅಗೆದು ಒಂದೂವರೆ ತಿಂಗಳು ಕಳೆದೂ ಇನ್ನೂ ಕೂಡ ಸುಸ್ಥಿತಿಗೆ ತಾರದಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ಸೋಮವಾರ ಹೆದ್ದಾರಿ ತಡೆಗೊಳಿಸಿ ಬೃಹತ್ ಪ್ರತಿಭಟನೆ ನಡೆಯಿತು.

ಸುಮಾರು 9.30ಕ್ಕೆ ಆರಂಭವಾದ ಪ್ರತಿಭಟನೆ 10.30 ಆದಂತೆ ತೀವ್ರಗೊಂಡಿತು. ಒಂದು ಹಂತದಲ್ಲಿ ಹೆದ್ದಾರಿಯನ್ನು ಸಂಪೂರ್ಣ ತಡೆಗಟ್ಟಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್, ಸರ್ಕಲ್ ಇನ್ಸ್ ಪೆಕ್ಟರ್ ಮಂಜಯ್ಯ, ಎಸ್ ಐ ನಂದಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪ್ರತಿಭಟನಾನಿರತರ ಮನವೊಲಿಸಲು ಯತ್ನಿಸಿದರು. ರಾ.ಹೆ.ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದಾಗ, ಹೆದ್ದಾರಿ ತಡೆಗೊಳಿಸುವ ಬದಲು ಹೆದ್ದಾರಿ ಪಕ್ಕದಲ್ಲಿ ಪ್ರತಿಭಟನೆ ನಡೆಸಲು ಡಿವೈಎಸ್ಪಿ ಮನವಿ ಮಾಡಿದರು. ಅದರಂತೆ ಹೆದ್ದಾರಿಯ ಒಂದು ಬದಿ ಪ್ರತಿಭಟನಾಕಾರರು ಕುಳಿತು ಘೋಷಣೆ ಕೂಗಲಾರಂಭಿಸಿದರು.

ಪಕ್ಕದಲ್ಲೇ ಸಾಗಿದ ಸಚಿವರ ವಾಹನ

ಒಂದು ಬದಿಯಲ್ಲಿ ಪ್ರತಿಭಟನಾಕಾರರು ಸಂಸದ ನಳಿನ್, ಸಚಿವ ರೈ, ಮೆಸ್ಕಾಂ, ಟ್ರಾಫಿಕ್, ತಹಸೀಲ್ದಾರ್, ಪುರಸಭೆ ಹೀಗೆ ವಿವಿಧ ಇಲಾಖೆಗಳ ವಿರುದ್ಧ ಘೋಷಣೆ ಕೂಗುತ್ತಿದ್ದರೆ, ರಸ್ತೆಯ ಇನ್ನೊಂದು ಬದಿಯಲ್ಲಿ ಸಚಿವ ರಮಾನಾಥ ರೈ ಅವರು ಮಂಗಳೂರಿನಿಂದ ಬಿ.ಸಿ.ರೋಡ್ ಕಡೆಗೆ ಸಾಗಿದರು.

ಅಂಗಡಿ, ಮುಂಗಟ್ಟು ಬಂದ್

ಪ್ರತಿಭಟನೆ ಸಂದರ್ಭ ಕೈಕಂಬ ಕ್ರಾಸ್ ನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಯಿತು.

ಹತ್ತು ದಿನಗಳ ಹಿಂದೆಯಷ್ಟೇ ಸ್ಥಳೀಯ ಅಂಗಡಿ ಮಾಲಕರು ಹಾಗೂ ರಿಕ್ಷಾ ಚಾಲಕರು ಅಗೆದು ಹಾಕಿರುವ ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಅವರು ಎರಡು ಮೂರು ದಿನಗಳ ಒಳಗಾಗಿ ಸರಿಪಡಿಸುವ ಭರವಸೆ ನೀಡಿದ್ದರು, ಆದರೆ ಅದು ಈವರೆಗೂ ಈಡೇರದ ಹಿನ್ನೆಲೆಯಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು, ರಿಕ್ಷಾಚಾಲಕರ ಸಹಕಾರದೊಂದಿಗೆ ರಸ್ತೆತಡೆ  ನಡೆಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸಾಮಾಜಿಕ ಕಾರ್ಯಕರ್ತ ಪಿ.ಎ.ರಹೀಂ ಈ ಸಂದರ್ಭ ಹೇಳಿದರು.

ಅಗೆದ ರಸ್ತೆಯನ್ನು ಸುಸ್ಥಿತಿಗೆ ತರುವ ವಿಚಾರದಲ್ಲಿ ಇಲಾಖೆಗಳ ನಡುವೆ ಸಮನ್ವತೆಯ ಕೊರತೆ ಇದ್ದು, ಸಾರ್ವಜನಿಕರು ಇದರಿಂದ ತೊಂದರೆ ಅನುಭವಿಸಬೇಕಾಗಿದೆ. ಸಚಿವರ ಸಹಿತ ವಿವಿಧ ಜನಪ್ರತಿನಿಧಿಗಳು ಇದೇ ದಾರಿಯಾಗಿ ಓಡಾಡುತ್ತಿದ್ದರೂ, ಈ ರಸ್ತೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಕಿವಿ ಹಿಂಡುವ ಕೆಸಲ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ತಹಶೀಲ್ದಾರರು ಪುರಸಭೆಯತ್ತ ಬೊಟ್ಟು ಮಾಡಿದರೆ, ಪುರಸಭೆ ಟ್ರಾಫಿಕ್  ಎಸೈ ಚಂದ್ರಶೇಖರಯ್ಯ ರವರೆ ಮೇಲೆ ಬೆರಳು ತೋರಿಸುತ್ತಿದ್ದು, ಪ್ರಮುಖವಾಗಿ ಇದರ ಕಾರ್ಯನಿರ್ವಹಿಸಬೇಕಾಗಿದ್ದ ಹೆದ್ದಾರಿ ಇಲಾಖೆ ಇತ್ತ ತಲೆಹಾಕಿ ಮಲಗುತ್ತಿಲ್ಲ ಎಂದು ಆರೋಪಿಸಿದರು.  ಕೈಕಂಬ ರಿಕ್ಷಾಚಾಲಕ ಸಂಘದ ಅಧ್ಯಕ್ಷ ಯಾಕೂಬು, ಪ್ರಮುಖರಾದ ಶಾಹುಲ್ ಹಮೀದ್, ಕೆ.ಹೆಚ್.ಅಬೂಬಕರ್, ಮಚ್ಚೇಂದ್ರನಾಥ ಸಾಲಿಯಾನ್, ಸುರೇಶ್ ಟೈಲರ್, ಅಜರುದ್ದೀನ್ ಸಹಿತ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಹೆದ್ದಾರಿ ಬ್ಲಾಕ್

ಒಂದೆಡೆ ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೊಂದೆಡೆ ಹೆದ್ದಾರಿ ಬಿ.ಸಿ.ರೋಡಿನ ನಾರಾಯಣಗುರು ವೃತ್ತದವರೆಗೂ ಬ್ಲಾಕ್ ಆಯಿತು. ಸುಮಾರು ಎರಡು ಗಂಟೆ ಹೆದ್ದಾರಿ ಬ್ಲಾಕ್ ಆಗಿದ್ದು, ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸಪಟ್ಟರು.

ಟ್ರಾಫಿಕ್ ಎಸ್ ಐ ವಿರುದ್ಧ ಆಕ್ರೋಶ

ಇಷ್ಟು ಆವಾಂತರಕ್ಕೆ ಕಾರಣ ಟ್ರಾಫಿಕ್ ಎಸ್ ಐ ಎಂದು ಪ್ರತಿಭಟನಾಕಾರರು ದೂರಿದರು. ಜಿಲ್ಲಾಧಿಕಾರಿ ಸೂಚನೆ ಕೊಟ್ಟ ಕೂಡಲೇ ಹಿಂದೆಮುಂದೆ ನೋಡದೆ ರಸ್ತೆ ಅಗೆದು ಹೊಂಡ ಮಾಡಿ ಹಾಕಿ ಮತ್ತೆ ಬೇರೆ ಇಲಾಖೆಗಳತ್ತ ಬೆರಳು ಮಾಡುತ್ತಿದ್ದಾರೆ ಎಂದು ಟ್ರಾಫಿಕ್ ಎಸ್ ಐ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts