ಈ ವರ್ಷಾಂತ್ಯಕ್ಕೆ ಇಡೀ ಬಂಟ್ವಾಳ ಪುರಸಭಾ ವ್ಯಾಪ್ತಿಯ ರಚನಾತ್ಮಕ ಬದಲಾವಣೆ ಆಗುತ್ತದೆ ಎಂಬ ನಿರೀಕ್ಷೆ ಹುಟ್ಟಿತ್ತು. ಮೀಟಿಂಗ್ ನಲ್ಲಿ ಘೋಷಿಸುವುದಕ್ಕೂ ಪ್ರಾಕ್ಟಿಕಲ್ಗೂ ವ್ಯತ್ಯಾಸವಿದೆ. 2017 ಬಂಟ್ವಾಳಕ್ಕೆ ಅಭಿವೃದ್ಧಿಯ ವರ್ಷವಾಗುವುದೇ?
bantwalnews.com special
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂಬ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರು ಈ ಕುರಿತು ಹೆಚ್ಚಿನ ಆಸೆ ಇಟ್ಟುಕೊಳ್ಳುವ ಅಗತ್ಯ ಇಲ್ಲವೇ?
ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ಈ ಸಂಶಯ ಮೂಡುತ್ತದೆ. ಕಾರಣ ಕೆಲಸ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಯಾವುದಕ್ಕೂ 2017 ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಯಾಗುತ್ತದೆಯೋ ಎಂಬುದು ಕುತೂಹಲದ ವಿಷಯ.
ಏನೇನಾಯಿತು:
ಜಿಲ್ಲಾಧಿಕಾರಿ ಡಾ. ಜಗದೀಶ್ ನವೆಂಬರ್ ತಿಂಗಳಲ್ಲಿ ಎರಡೆರಡು ಮೀಟಿಂಗ್ ನಡೆಸಿ, ಭಾರೀ ಅಭಿವೃದ್ಧಿ ನಿರೀಕ್ಷೆ ಹುಟ್ಟಿಸಿದ್ದರು. ಅವರೊಂದಿಗೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಜವಾಬ್ದಾರಿ ವಹಿಸಿಕೊಂಡು ಜಿಲ್ಲಾಧಿಕಾರಿ ಆದೇಶ ಪಾಲನೆಗೆ ಕಾರ್ಯೋನ್ಮುಖರಾಗಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದರೆ, ಬಂಟ್ವಾಳ ಪುರಸಭೆಯ ಚಿತ್ರಣವೇ ಬದಲಾಗಬೇಕಿತ್ತು. ಆದರೆ ಇಡೀ ವಿದ್ಯಮಾನ ಗಮನಿಸುತ್ತಿದ್ದವರು ಹಾಗೂ ಬಂಟ್ವಾಳ ಪುರಸಭಾ ವ್ಯಾಪ್ತಿಯ ಹಿಂದಿನ ಚರಿತ್ರೆ ಗೊತ್ತಿದ್ದವರು ಇಂಥದ್ದೆಲ್ಲ ಬದಲಾವಣೆ ಖಂಡಿತಾ ಸಾಧ್ಯವಿಲ್ಲ, ನೋಡ್ತಾ ಇರಿ, ಬಿ.ಸಿ.ರೋಡ್, ಬಂಟ್ವಾಳ ಹಾಗೇ ಇರುತ್ತೆ, ಯಾವ ಬದಲಾವಣೆಯೂ ನಡೆಯೋದಿಲ್ಲ ಎನ್ನುತ್ತಲೇ ಇದ್ದರು. ಕೊನೆಗೆ ಹಾಗೆಯೇ ಆಗುತ್ತದಾ ಎಂಬುದು ಈ ವರ್ಷಾಂತ್ಯದ ಮಿಲಿಯನ್ ಡಾಲರ್ ಪ್ರಶ್ನೆ.
ಬಂಟ್ವಾಳ ಪೇಟೆ ನೋಡಿದವರೆಲ್ಲ ಅಗಲ ಕಿರಿದಾದ ರಸ್ತೆಯಲ್ಲಿ ಸಂಕಷ್ಟ ಅನುಭವಿಸಿದವರೆಲ್ಲ ರಸ್ತೆ ಸ್ವಲ್ಪವಾದರೂ ಅಗಲಗೊಂಡರೆ ಒಳ್ಳೇದಿತ್ತು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದರು. ಭರತ್ ಲಾಲ್ ಮೀನಾ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಈ ಪ್ರಕ್ರಿಯೆಗೆ ಮುನ್ನುಡಿ ಬರೆದಿದ್ದರು.
ಆದರೆ ಮೀನಾ ವರ್ಗಾವಣೆ ಹೊಂದಿದರು. ಅದಾದ ಬಳಿಕ ಬಂದ ಜಿಲ್ಲಾಧಿಕಾರಿಗಳೆಲ್ಲ ಬಂಟ್ವಾಳ ಪುರಸಭಾ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒಲವು ತೋರಲಿಲ್ಲ. ಪೊನ್ನುರಾಜ್ ಆಸಕ್ತಿ ವಹಿಸಿದ್ದರಾದರೂ ಯಾವ ಪ್ರಗತಿಯೂ ಆಗಲಿಲ್ಲ.
ಆದರೆ ಡಾ. ಜಗದೀಶ್ ಜಿಲ್ಲಾಧಿಕಾರಿಯಾದ ಸಂದರ್ಭ ಮತ್ತೆ ಆಸೆ ಚಿಗುರಿತು. ಲೋಕೋಪಯೋಗಿ, ಸರ್ವೆ ಇಲಾಖೆ ಸರಕಾರಿ ಸ್ಥಳ ಅತಿಕ್ರಮಣದ ಗುರುತು ಹಾಕಿತ್ತು.
ಸ್ವಯಂಪ್ರೇರಿತರಾಗಿ ಅತಿಕ್ರಮಿತ ಸ್ಥಳ ತೆರವುಗೊಳಿಸಲು ಗಡುವನ್ನು ನೀಡಿತ್ತು. ಈ ಪ್ರಕ್ರಿಯೆ ನಡೆಯುತ್ತಿದ್ದಂತೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವರ ಸಭೆ ನಡೆಯಿತು. ಇದರಲ್ಲಿ ಬಂಟ್ವಾಳ ಪೇಟೆಯ ಅಗಲೀಕರಣಕ್ಕೆ ಮುನ್ನ ಇಲ್ಲಿನ ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಚರ್ಚಿಸಿ ಮುಂದುವರಿಯುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದರು.
ಈಗ ಏನಾಗಿದೆ:
ಬಸ್ ಬೇ ನಿರ್ಮಿಸಲು ಅಗೆಯಲಾದ ಹೊಂಡ ಹಾಗೆಯೇ ಉಳಿದಿದೆ. ಹೊಂಡ ಮಾಡಿ ಎಂದು ಹೇಳಿದ್ದೇ ತಡ, ಹಿಂದೆ ಮುಂದೆ ನೋಡದೆ ಅತ್ಯುತ್ಸಾಹದಿಂದ ಜೆಸಿಬಿ ತಂದು ಅಗೆದದ್ದೇ ಬಂತು. ಹೊಂಡ ಹಾಗೇ ಉಳಿಯಿತು. ಅದನ್ನು ದಾಟಲು ಹೋಗಿ ಬಿದ್ದವರೆಷ್ಟೋ, ಬಸ್ ಬೇ ಹೋಗಿ ಕೆಸರುಗುಂಡಿಯಾಗಿದೆ ಬಿ.ಸಿ.ರೋಡಿನ ಕೈಕಂಬ ಪರಿಸರ. ಇದೆಲ್ಲ ಕ್ಷಣಿಕ ಮಾತ್ರ, ಯಾವ ಕ್ಷಣದಲ್ಲಾದರೂ ಸರಿ ಮಾಡುತ್ತೇವೆ, ನೋಡ್ತಾ ಇರಿ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಹಾಗೆಯೇ ಬಿ.ಸಿ.ರೋಡಿನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಿ ಕೈಕುಂಜದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಮಾಡಲಾಗುವುದು, ಎಲ್ಲ ಸರಿ ಹೋಗುತ್ತೆ ಎಂದು ಅಧಿಕಾರಿಗಳು ಹೇಳಿದರು. ಬಂಟ್ವಾಳ ಪೇಟೆ ಅಗಲಗೊಳ್ಳುತ್ತದೆ, ಯಾವ ಹಸ್ತಕ್ಷೇಪಕ್ಕೂ ಮಣಿಯದೆ, ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು. ಆಗುತ್ತಾ, ಇಲ್ಲವಾ ಎಂಬುದನ್ನು ಕಾದು ನೋಡಬೇಕು.
ಇದೆಲ್ಲದರ ನಡುವೆ ಶುಕ್ರವಾರ ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್, ಬಂಟ್ವಾಳದ ಕೆಲ ವರ್ತಕರ ಸಭೆ ನಡೆಸಿದರು. ಇದರಲ್ಲಿ ಪುರಸಭಾ ಸದಸ್ಯರನ್ನು ಆಹ್ವಾನಿಸಿಲ್ಲ ಎಂಬ ದೂರು ಕೇಳಿಬಂತು. ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮಂಗಳೂರು ಯೋಜನಾ ನಿರ್ದೇಶಕ ಪ್ರಸನ್ನ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಮುಖ್ಯಾಧಿಕಾರಿ ಸುಧಾಕರ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅರುಣ್ ಪ್ರಕಾಶ್, ಸರ್ವೇ ಇಲಾಖೆಯ ಸೂಪರ್‌ವೈಸರ್ ಅಹ್ಮದ್, ಕಂದಾಯ ಇಲಾಖೆಯ ಗ್ರಾಮ ಕರಣಿಕರಾದ ಜನಾರ್ದನ್, ಯೋಗಾನಂದ, ತೌಫಿಕ್ ಅವರು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಹಾಜರಿದ್ದ ವರ್ತಕರ ಸಂಘದ ಕೆಲವು ಪ್ರಮುಖರು ತಾವು ಎಲ್ಲ ವರ್ತಕರನ್ನು ಸೇರಿಸಿ ಸಭೆ ನಡೆಸುವ ಮೂಲಕ ಒಂದು ತೀರ್ಮಾನಕ್ಕೆ ಬಂದು ಬಳಿಕ ಮುಂದಿನ ಸಭೆಯಲ್ಲಿ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದರು ಎಂದು ಖುದ್ದು ರೇಣುಕಾ ಪ್ರಸಾದ್, ಸುದ್ದಿಗಾರರಿಗೆ ತಿಳಿಸಿದರು. ಜನವರಿ 17 ರಂದು ಮತ್ತೆ ಸಭೆಯನ್ನು ನಡೆಸಲು ನಿರ್ಧರಿಸಲಾಗಿದ್ದು ಅಂದು ವರ್ತಕರು ತಮ್ಮ ಅಭಿಪ್ರಾಯವನ್ನು ಮಂಡಿಸಲಿದ್ದಾರೆ ಎಂದು ರೇಣುಕಾ ಪ್ರಸಾದ್ ಹೇಳಿದರು.
ಹಾಗೂ ಹೀಗೂ ಡಿಸೆಂಬರ್ 31 ಬಂದಿದೆ. 2016 ಕೊನೆಗೊಂಡಿದೆ. ಬಂಟ್ವಾಳ ವ್ಯಾಪ್ತಿಯನ್ನು ಸರ್ವಾಂಗಸುಂದರವನ್ನಾಗಿಸಬೇಕು ಎಂಬುದು ಎಲ್ಲರ ಆಸೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಅಡ್ಡಿ ಇಲ್ಲ ಎಂದು ವಿಟ್ಲದಲ್ಲಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಮಂಗಳೂರಿನಿಂದ ಬಿ.ಸಿ.ರೋಡ್ ಪ್ರವೇಶಿಸುತ್ತಿದ್ದಂತೆ ಈಗ ಬಸ್ ಬೇ ಗೆಂದು ಅಗೆದ ಹೊಂಡ ಸ್ವಾಗತಿಸುತ್ತದೆ.
ಜನವರಿಯಲ್ಲಿ ಬಸ್ ಬೇ ಆಗುತ್ತದಾ, ಬಿ.ಸಿ.ರೋಡ್ ಮಲ್ಟಿಲೆವೆಲ್ ಪಾರ್ಕಿಂಗ್ ಆಗುತ್ತದಾ, ಬಂಟ್ವಾಳ ಪೇಟೆ ಸ್ಥಿತಿ ಏನಾಗುತ್ತದೆ, ಜೋಡುಮಾರ್ಗದಲ್ಲಿ ನಿರ್ಮಿಸಲಾದ ಕೋಟಿ ವೆಚ್ಚದ ಉದ್ಯಾನವನ ತೆರೆಯಲ್ಪಡುತ್ತದಾ, ಹೆದ್ದಾರಿ ವಿಸ್ತರಣೆ ವೇಳೆ ಅದೂ ಹೋಗುತ್ತದಾ, ಇಂಥ ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿವೆ. ಜನರಿಂದ ಆಯ್ಕೆಯಾದವರು, ಅಧಿಕಾರಿಗಳು ಸಕಾರಾತ್ಮಕವಾಗಿ ಬಂಟ್ವಾಳ ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಾರೆ ಎಂಬ ನಂಬಿಕೆ ಸಾರ್ವಜನಿಕರದ್ದು.