ಬಂಟ್ವಾಳ

ಅಭಿವೃದ್ಧಿ ಅನುಷ್ಠಾನ ಸಂದರ್ಭ ಜನಪ್ರತಿನಿಧಿಗಳ ಕಡೆಗಣನೆ ಸಲ್ಲದು

ಪುರಸಭಾ ವ್ಯಾಪ್ತಿಯಲ್ಲಿ ನಾಲ್ಕು ದಿನ ನೀರು ಪೂರೈಕೆ ಸ್ಥಗಿತಗೊಂಡ ಸಂದರ್ಭ ಹಾಗೂ ಬಂಟ್ವಾಳ ಪೇಟೆ ರಸ್ತೆ ಅಗಲೀಕರಣ ಸಂಬಂಧಿಸಿದಂತೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಗೆ ಕನಿಷ್ಠ ಸೌಜನ್ಯಕ್ಕಾದರೂ ಜನಪ್ರತಿನಿಧಿಗಳಾದ ನಮ್ಮನ್ನು ಆಹ್ವಾನಿಸದೆ ಕಡೆಗಣಿಸಿರುವುದು ಅಕ್ಷಮ್ಯ ಎಂದು ಶನಿವಾರ ನಡೆದ ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷ ರಾಮಕೃಷ್ಣ ಆಳ್ವ ಸಭಾಧ್ಯಕ್ಷತೆ ವಹಿಸಿದ್ದು, ಅಧ್ಯಕ್ಷರ ಅನುಮತಿ ಮೇರೆಯ ಚರ್ಚೆಯ ವೇಳೆಗೆ ಸದಸ್ಯ ಗೋವಿಂದ ಪ್ರಭು ಅವರು ವಿಷಯ ಪ್ರಸ್ತಾಪಿಸಿದರು. ಪುರಸಭಾ ಮುಖ್ಯಾಧಿಕಾರಿ ಸಹಿತ ಅಧ್ಯಕ್ಷರು ಸದಸ್ಯರಿಗೆ ಕನಿಷ್ಠ ಗೌರವ ಕೊಡುವ ಸೌಜನ್ಯವನ್ನು ನಡೆಸುತ್ತಿಲ್ಲ.ಕೆಲ ವಿಚಾರಗಳಿಗೆ ಗುತ್ತಿಗೆ ಸಿಬ್ಬಂದಿಗಳಿಂದ ತಮಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಸದಸ್ಯ ವಾಸು ಪೂಜಾರಿ ದನಿಗೂಡಿಸಿ, ತನಗೂ ಇಂಥ ಅನುಭವ ಆಗಿದೆ ಎಂದು ಸಭೆ ಗಮನ ಸೆಳೆದರು.

ಪೈಪ್ ಲೈನ್ ಅಳವಡಿಕೆ ಕಾಮಗಾರಿ ಸಂದರ್ಭ ನಾಲ್ಕು ದಿನ ಪುರಸಭಾ ವ್ಯಾಪ್ತಿಯಲ್ಲಿ ನೀರು ಪೂರೈಕೆ ಸ್ಥಗಿತಗೊಂಡು ಪುರವಾಸಿಗಳಿಂದ ಬೈಗುಳ ಕೇಳಬೇಕಾಗಿ ಬಂತು. ಈ ವಿಚಾರದಲ್ಲಿ ಆಡಳಿತ ಹಾಗೂ ಮುಖ್ಯಾಧಿಕಾರಿ ಎಡವಟ್ಟು ಮಾಡಿಕೊಂಡಿದ್ದು, ಈ ಸಂದರ್ಭದಲ್ಲೂ ಕೂಡ ತಾವು ಸದಸ್ಯರೊಂದಿಗೆ ಚರ್ಚಿಸದೇ ಇರುವುದು ಸರಿಯಾದ ಕ್ರಮವಲ್ಲ. ಹಾಗೆಯೇ ನಮ್ಮ ಕ್ಷೇತ್ರದವರೇ ಆಗಿರುವ ಸಚಿವ ಬಿ.ರಮಾನಾಥ ರೈ ಅವರು ಕೂಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೇಟೆ ಅಗಲೀಕರಣಕ್ಕೆ ಸಂಬಂಧಿಸಿ ಸಭೆ ನಡೆಸಿದಾಗಲೂ ತಮಗೆ ಮಾಹಿತಿ ನೀಡಲಿಲ್ಲ. ಎರಡು ದಿನಗಳ ಹಿಂದೆ ಪ್ರವಾಸಿ ಮಂದಿರದಲ್ಲಿ ಬಂಟ್ವಾಳ ಪೇಟೆ ಅಗಲೀಕರಣಕ್ಕೆ ಸಂಬಂಧಿಸಿ ಸಹಾಯಕ ಕಮೀಷನರ್ ಅಧ್ಯಕ್ಷತೆಯಲ್ಲಿ ತಮಗೆ ಬೇಕಾದ ಬೆರಳೆಣಿಕೆ ವರ್ತಕರನ್ನು ಮಾತ್ರ ಕೂರಿಸಿಕೊಂಡು ಸಭೆ ನಡೆಸಿದ್ದೀರಿ. ಆಗಲೂ ಈ ಭಾಗದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡದೆ ಕಡೆಗಣಿಸಿದ್ದೀರಿ. ಅಭಿವೃದ್ಧಿ ವಿಚಾರದಲ್ಲಿ ನಾವೂ ಬದ್ಧರಾಗಿದ್ದೇವೆ. ಎಂದು ಮುಖ್ಯಾಧಿಕಾರಿ ಕೆ.ಸುಧಾಕರ್ ಹಾಗೂ ಅಧ್ಯಕ್ಷ ರಾಮಕೃಷ್ಣ ಆಳ್ವ ವಿರುದ್ಧ ಸದಸ್ಯ ಗೋವಿಂದ ಪ್ರಭು ಹರಿಹಾಯ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ನೀರಿನ ವಿಚಾರದಲ್ಲಿ ತಮ್ಮಿಂದ ಪ್ರಮಾದವಾಗಿದೆ ಎಂದು ಒಪ್ಪಿಕೊಂಡು ಭವಿಷ್ಯದಲ್ಲಿ ಇಂಥ ಸಮಸ್ಯೆ ಎದುರಾದಾಗ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಪ್ರವೃತ್ತರಾಗುತ್ತೇವೆ ಎಂದು ಸಮಜಾಯಿಷಿ ನೀಡಿದರು. ಪೇಟೆ ಅಗಲೀಕರಣಕ್ಕೆ ಸಂಬಂಧಿಸಿದ ಸಭೆಯನ್ನು ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಅವರೇ ಆಯೋಜಿಸಿರುವುದು ಜ.17ರಂದು ಮತ್ತೆ ಸಭೆ ನಡೆಯಲಿದ್ದು, ಅಂದು ತಮ್ಮನ್ನು ಆಹ್ವಾನಿಸಲಾಗುವುದು ಎಂದು ಅಧ್ಯಕ್ಷ ಭರವಸೆ ನೀಡಿದರು. ಆದರೆ ಇನ್ನು ನಾವು ಈ ವಿಚಾರದಲ್ಲಿ ಪಾಲ್ಗೊಳ್ಳುವುದಿಲ್ಲ, ಬಾಕಿ ಉಳಿದಿರುವ ನನ್ನ ಅನುದಾನದಲ್ಲಿ ಬಂಟ್ವಾಳ ಪೇಟೆ ಒಳಚರಂಡಿ ಕಾಮಗಾರ ತಕ್ಷಣ ಆರಂಭಿಸುವಂತೆ ಪ್ರಭು ಸೂಚಿಸಿದರು.

ಉದ್ಯಾನವನ ಖರ್ಚಿನ ಲೆಕ್ಕಾಚಾರ

ಜೋಡುಮಾರ್ಗ ಉದ್ಯಾನವನಕ್ಕೆ ಪುರಸಭೆ ಅನುದಾನದಿಂದ ಖರ್ಚು ಮಾಡಿದ ವಿವರವನ್ನು ಕಳೆದ ಸಭೆಯಲ್ಲಿ ಕೇಳಿದಾಗ, ವಿವರ ದೊರಕಿಲ್ಲ ಎಂದು ಮುಖ್ಯಾಧಿಕಾರಿ ಹೇಳಿದ್ದರು. ಆದರೆ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ, ಉದ್ಯಾನವನಕ್ಕೆ ಮಾಡಲಾದ ಖರ್ಚು ವೆಚ್ಚಗಳ ಪಟ್ಟಿ ಪುರಸಭೆಗೆ ಅಕ್ಟೋಬರ್ 21ರಂದೇ ಕೊಡಲಾಗಿತ್ತುಈ ವಿಚಾರದಲ್ಲಿ ನನಗೆ ತಪ್ಪು ಮಾಹಿತಿ ನೀಡಿದ್ದು ಯಾಕೆ ಎಂದು ಸದಸ್ಯ ದೇವದಾಸ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ಸಮಜಾಯಿಸಿ ನೀಡಲು ಮುಖ್ಯಾಧಿಕಾರಿ ಮುಂದಾದಾಗ, ಈ ವಿಚಾರದಲ್ಲಿ ನಿಮ್ಮ ಉತ್ತರ ನನಗೆ ಇನ್ನು ಬೇಡ, ಮಾಹಿತಿ ಹಕ್ಕಿನಲ್ಲಿ ಎಲ್ಲ ಲೆಕ್ಕಪತ್ರವನ್ನೂ ಸಂಬಂಧಿಸಿದ ಇಲಾಖೆಯಿಂದಲೇ ಪಡೆದುಕೊಂಡಿದ್ದೇನೆ ಎಂದು ದೇವದಾಸ ಶೆಟ್ಟಿ ಹೇಳಿದರು. ಉದ್ಯಾನವನ ನಮಗೆ ಸಂಬಂಧಿಸಿದ್ದಲ್ಲ ಎಂದು ಮುಖ್ಯಾಧಿಕಾರಿ ಹೇಳಿದಾಗ ಮಧ್ಯ ಪ್ರವೇಶಿಸಿದ ಗೋವಿಂದ ಪ್ರಭು, ಪುರಸಭೆಯ ಪಾಲೂ ಇದರಲ್ಲಿದೆ. ಹಾಗಾಗಿ ನಾವು ಲೆಕ್ಕಪತ್ರ ಕೇಳಿದ್ದೇವೆ ಎಂದು ಸಮರ್ಥಿಸಿಕೊಂಡರು.

ಸೆಟ್ ಬ್ಯಾಕ್ ನಿಯಮ ಉಲ್ಲಂಘನೆ

ಸೆಟ್ ಬ್ಯಾಕ್ ನಿಯಮ ಉಲ್ಲಂಘಿಸಿ ಶಾಂತಿಯಂಗಡಿಯಲ್ಲಿ ಕೆರೆಯೊಂದನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ರಾಜಾರೋಷವಾಗಿ ನಡೆಯುತ್ತಿದೆ, ಇಂಥ ಹಲವು ಕಟ್ಟಡಗಳು ಕಾನೂನು ನಿಯಮ ಉಲ್ಲಂಘಿಸಿದ್ದರೂ ಪುರಸಭೆ ಕಣ್ಣುಮುಚ್ಚಿ ಕುಳಿತಿದೆ. ಲಿಖಿತ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಗೋವಿಂದ ಪ್ರಭು ಆರೋಪಿಸಿದರು. ಇದೇ ವೇಳೆ ಬಿ.ಮೋಹನ್ ದನಿಗೂಡಿಸಿ, ಇಂಥ ಹಲವು ಕಟ್ಟಡಗಳು ನಿಯಮ ಉಲ್ಲಂಘಿಸಿವೆ. ಎಂದು ಗಮನ ಸೆಳೆದರು.

 ಈ ಸಂದರ್ಭ ಮುಖ್ಯಾಧಿಕಾರಿ ಉತ್ತರಿಸಿ, ಈ ಸಂಬಂಧ 25 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಉತ್ತರಿಸಿದರೆ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಮಾತನಾಡಿ, ಶಾಂತಿಯಂಗಡಿಯಲ್ಲಿ ಕೆರೆ ಒತ್ತುವರಿಯಾಗಿಲ್ಲ ಎಂದರು. ಬಂಟ್ವಾಳ ಪಟ್ಟಣ ಸಮಗ್ರ ನೀರು ಸರಬರಾಜು ಯೋಜನೆಯ ಪರಿಷ್ಕೃತ ಅಂದಾಜುಪಟ್ಟಿ ಮೊತ್ತ 66 ಕೋಟಿ ರೂ ಮಂಜೂರಾತಿ ನೀಡಲಾಯಿತು.

ನೀರಿನ ಶುಲ್ಕವೂ ಮೋದಿ ಎಫೆಕ್ಟೂ….

ನೀರಿನ ಶುಲ್ಕ ವಸೂಲಾತಿಯಲ್ಲಿ ಪುರಸಭೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಶುಲ್ಕ ವಸೂಲಾತಿಗಿಂತ ಹೆಚ್ಚಾಗಿ ಖರ್ಚು ಆಗುತ್ತಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಅಧ್ಯಕ್ಷ ರಾಮಕೃಷ್ಣ ಆಳ್ವ ಇದು ಮೋದಿ ಎಫೆಕ್ಟ್ ಎಂದು ಪ್ರತಿಕ್ರಿಯಿಸಿದರು. ಇದಕ್ಕೆ ಗರಂ ಆದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ನವೆಂಬರ್ ಗಿಂತ ಮೊದಲೇ ಏನಾಗಿತ್ತು, ಆಗಲೂ ಇದೇ ಸ್ಥಿತಿ ಇತ್ತು ಎಂದರು. ಬಿಲ್ ಕಲೆಕ್ಷನ್ ಗೆ ಯಾರೂ ಬರುವುದಿಲ್ಲ ಎಂದು ಚಂಚಲಾಕ್ಷಿ ಹೇಳಿದರೆ, ನೀರಿನ ಬಿಲ್ ಬರುವುದೇ ಇಲ್ಲ, ನೀರಿನ ಬಿಲ್ ತೆಗೆದುಕೊಂಡು ಹೋಗಲು ಪ್ರತ್ಯೇಕ ವ್ಯವಸ್ಥೆ ಯಾಕೆ ಎಂದು ದೇವದಾಸ ಶೆಟ್ಟಿ ಪ್ರಶ್ನಿಸಿದರು.

ಬಿಲ್ಲಿಂಗ್ ಮೆಷಿನ್ ಏನಾಯ್ತು?

ನೀರಿನ ಬಿಲ್ ಪಾವತಿಗೆ ಬಿಲ್ಲಿಂಗ್ ಮೆಷಿನ್ ಹಿಂದೆ ಇತ್ತು. ಅದು ಎಲ್ಲಿಗೆ ಮಾಯವಾಗಿದೆ, ಏನಾಯಿತು, ಅದು ಎಲ್ಲಿ ಉಂಟು? ನೀವು ಮೋದಿ ಎಫೆಕ್ಟ್ ಎಂದು ಹೇಳುತ್ತೀರಿ, ಕ್ಯಾಶ್ ಲೆಸ್ ವ್ಯವಹಾರಕ್ಕೆ ಬಿಲ್ಲಿಂಗ್ ಯಂತ್ರ ಪೂರಕವಲ್ಲವೇ ಎಂದು ಗೋವಿಂದ ಪ್ರಭು ನೆನಪಿಸಿದರು.

ಆಡಿಟ್ ತೊಂದರೆಯಾದ ಕಾರಣ ಬಿಲ್ಲಿಂಗ್ ಮೆಷಿನ್ ಬಳಕೆ ನಿಲ್ಲಿಸಲಾಯಿತು ಎಂದು ಸಿಬ್ಬಂದಿ ರಜಾಕ್ ಹೇಳಿದಾಗ, ಸಭೆಯ ಗಮನಕ್ಕೆ ತಂದು ಮಂಜೂರಾತಿ ಪಡೆದುಕೊಳ್ಳಬಹುದಿತ್ತಲ್ಲ ಎಂದು ಪ್ರಭು ಸಲಹೆ ನೀಡಿದರು. ಕಸ ವಿಲೇವಾರಿಗೆ 44 ಲಕ್ಷ ರೂಪಾಯಿಯನ್ನು ವರ್ಷಕ್ಕೆ ಸುರಿಯಲಾಗುತ್ತಿದೆ ಎಂದು ದೇವದಾಸ ಶೆಟ್ಟಿ ಕಳವಳ ವ್ಯಕ್ತಪಡಿಸಿದರು. ಕೈಕುಂಜೆಯಲ್ಲಿ ಬಕೆಟ್ ವಿತರಣೆ ಸಂದರ್ಭ ನನಗೆ ಮಾಹಿತಿಯನ್ನೇ ನೀಡಲಿಲ್ಲ ಎಂದು ನಾಮನಿರ್ದೇಶನ ಸದಸ್ಯ ಲೋಕೇಶ ಸುವರ್ಣ ದೂರಿದರು. ನಮಗೆ ಯಾವುದೇ ಅನುದಾನ ಸಿಗುವುದಿಲ್ಲ, ಕನಿಷ್ಠ  ಈ ಬಗ್ಗೆಯಾದರೂ ಮಾಹಿತಿ ನೀಡಿ, ಪುರಸಭೆ ನೀಡಿದ ಬಕೆಟ್ ಗಳು ಬಟ್ಟೆ ಒಗೆಯಲು ದುರ್ಬಳಕೆಯಾಗುತ್ತಿವೆ, ಈ ಬಗ್ಗೆ ತನಿಖೆ ನಡೆಸಿ ಎಂದು ಒತ್ತಾಯಿಸಿದರು.

ಬಿ.ಸಿ.ರೋಡಿಗೆ ಶನಿವಾರವೂ ನೀರಿಲ್ಲ

ಬಂಟ್ವಾಳದಲ್ಲಿ ಕುಡಿಯುವ ನೀರಿನ ಎರಡನೇ ಹಂತದ ಯೋಜನೆಗೆ ಸಂಬಂಧಿಸಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದರಿಂದ ಪುರಸಭೆ ಹಾಗೂ ಕೆಯುಡಬ್ಲುಸಿ ಇಲಾಖೆ 27ರಿಂದ 29ವರೆಗೆ ನೀರಿನ ವ್ಯತ್ಯಯ ಉಂಟಾಗುವ ಬಗ್ಗೆ ಪ್ರಕಟಣೆ ನೀಡಿತ್ತು. ಆದರೆ ಬಂಟ್ವಾಳ ಪರಿಸರಕ್ಕೆ ನಾಲ್ಕನೇ ದಿನದಂದು ಶುಕ್ರವಾರವೂ ನೀರು ಹರಿಯಲಿಲ್ಲ. ಐದನೇ ದಿನವಾದ ಶನಿವಾರ ಬಂಟ್ವಾಳಕ್ಕೆ ನೀರು ಬಂದರೂ ಬಿ.ಸಿ.ರೋಡಿನ ಜನತೆಗೆ ನೀರಿನ ಭಾಗ್ಯ ಸಿಕ್ಕಿಲ್ಲ. ಹೋಟೆಲ್, ಶೌಚಾಲಯಗಳು ನೀರಿಲ್ಲದೆ ತೊಂದರೆ ಅನುಭವಿಸಬೇಕಾಯಿತು.

ತ್ಯಾಜ್ಯ ವಿಲೇವಾರಿ ಟೆಂಡರ್

ಬಂಟ್ವಾಳ ಪುರಸಭೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಡಿ.31ರಂದು ವಾರ್ಷಿಕ ಗುತ್ತಿಗೆ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸ ಟೆಂಡರ್ ಪ್ರಕ್ರಿಯೆ ನಡೆಯುವ ತನಕ ಮತ್ತೆ ಈ ಹಿಂದಿನ ಗುತ್ತಿಗೆದಾರರನ್ನೇ ಮುಂದುವರಿಸಲು ಪುರಸಭೆ ತೀರ್ಮಾನಿಸಿತು. ಬಿ.ದೇವದಾಸ ಶೆಟ್ಟಿ ವಿಷಯ ಪ್ರಸ್ತಾಪಿಸಿದರು. ಇಲ್ಲಿನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮಾಸಿಕ ರೂ 3.40 ಲಕ್ಷ ಮೊತ್ತ ಪಾವತಿಸಲಾಗುತ್ತಿದೆ. ಈಗಾಗಲೇ ಅಸಮರ್ಪಕ ತ್ಯಾಜ್ಯ ವಿಲೇವಾರಿ ಆರೋಪ ಹೊತ್ತಿರುವ ಗುತ್ತಿಗೆದಾರ ಅಬ್ದುಲ್ ಸಲಾಂ ಅವರನ್ನು ಬದಲಾಯಿಸುವಂತೆ ಕಳೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಮತ್ತೆ ಅವರನ್ನೇ ಏಕೆ ಮುಂದುವರಿಸುತ್ತಿದ್ದೀರಿ…? ಎಂದು ಪ್ರಶ್ನಿಸಿದರು. ಇದಕ್ಕೆ ವಿರೋಧ ಪಕ್ಷ ನಾಯಕ ಎ.ಗೋವಿಂದ ಪ್ರಭು ದನಿಗೂಡಿಸಿದರು. ಇದೀಗ ಮುಂದಿನ ಟೆಂಡರ್ ಪ್ರಕ್ರಿಯೆ ನಡೆಯುವ ತನಕ ಅವರನ್ನು ಮುಂದುವರಿಸಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಸ್ಪಷ್ಟಪಡಿಸಿದರು.

ಉದ್ಯಾನವನ ಜನವರಿಯಲ್ಲಿ ಜನರಿಗೆ

ಬಿ.ಸಿ.ರೋಡ್ ಮುಖ್ಯವೃತ್ತ ಬಳಿ ರೂ 1.40ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಿದ್ದರೂ ಬಳಿಕ ಪ್ರವೇಶ ನಿರ್ಬಂಧಿಸಲಾಗಿದ್ದ ಜೋಡುಮಾರ್ಗ ಉದ್ಯಾನವನವನ್ನು ಮಂಗಳೂರಿನ ಪ್ರಮೋದ್ ನರ್ಸರಿ ಸಂಸ್ಥೆಗೆ ಮಾಸಿಕ ರೂ 60 ಸಾವಿರದಂತೆ ನಿರ್ವಹಣೆಗೆ ನೀಡಲು ಸಭೆ ನಿರ್ಣಯಿಸಿತು.  ಈ ಹಿಂದಿನ ಸಭೆಯಲ್ಲಿ ನಿಗದಿಪಡಿಸಿದಂತೆ ಹಿರಿಯರಿಗೆ ರೂ 10 ಮತ್ತು ಮಕ್ಕಳಿಗೆ ರೂ 5ರಂತೆ ಪ್ರವೇಶ ದರ ವಸೂಲಿಗೆ ಪುರಸಭೆ ವತಿಯಿಂದಲೇ ನಿರ್ವಹಿಸಲು ನಿರ್ಣಯಿಸಲಾಯಿತು.

ಉಪಾಧ್ಯಕ್ಷ ಮಹಮ್ಮದ್ ನಂದರ ಬೆಟ್ಟು, ಸದಸ್ಯರಾದ ವಾಸು ಪೂಜಾರಿ, ಪ್ರವೀಣ್ ಬಿ, ಗಂಗಾಧರ, ಸುಗುಣ ಕಿಣಿ, ವಸಂತಿ, ಭಾಸ್ಕರ, ಜಗದೀಶ ಕುಂದರ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

ಮುಖ್ಯಾಧಿಕಾರಿ ಕೆ.ಸುಧಾಕರ್, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಅಧಿಕಾರಿಗಳಾದ ಲೀಲಾವತಿ, ಅಬ್ದುಲ್ ರಝಾಕ್, ರತ್ನಪ್ರಸಾದ್ ಹೆಗ್ಡೆ, ಉಮಾವತಿ, ಮೀನಾಕ್ಷಿ ಮತ್ತಿತರರು ಇದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts