ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸ್ವಚ್ಛಭಾರತ ನಿರ್ಮಲ ಶ್ರದ್ಧಾಕೇಂದ್ರಗಳ ಪರಿಕಲ್ಪನೆಯಡಿ ಬಂಟ್ವಾಳ ತಾಲೂಕಿನ ಸುಮಾರು 90 ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ ಜ.13 ರ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಮಾಜಿ ಶಾಸಕ, ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎ.ರುಕ್ಮಯ ಪೂಜಾರಿ ಹೇಳಿದರು.
ಬಂಟ್ವಾಳ ಶ್ರೀ ಧರ್ಮಸ್ಥಳ ಕಲ್ಯಾಣಮಂಟಪದಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಉಪಸ್ಥಿತಿಯಲ್ಲಿ ತಾಲೂಕಿನ ವಿವಿಧ ಶ್ರದ್ದಾ ಕೇಂದ್ರಗಳ ಪ್ರಮುಖರ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯದಾದ್ಯಂತ ಈ ಕಾಐಕ್ರಮವನ್ನು ಅಭಿಯಾನ ರೂಪದಲ್ಲಿ ಆರಂಭಿಸಲಾಗಿದ್ದು, ತಾಲೂಕಿನಲ್ಲೂ ಈಗಾಗಲೇ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತಾಕಾರ್ಯ ಆರಂಭಗೊಂಡಿದೆ ಎಂದರು.
ಜನವರಿ 14 ಮಕರ ಸಂಕ್ರಾಂತಿಯ ಒಳಗಾಗಿ ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಕಾರ್ಯ ನಡೆಸುವ ಕುರಿತಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಂಕಲ್ಪ ಹೊಂದಿದ್ದು, ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆಯು ಈ ಕಾರ್ಯಕ್ಕೆ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದ ಅವರು, ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಿರುವ ಪರಿಕರಗಳನ್ನು ಸ್ಥಳೀಯ ಸಂಘ ಸಂಸ್ಥೆಗಳು, ದಾಣಿಗಳ ನೆರವಿನೊಂದಿಗೆ ಪಡೆದುಕೊಳ್ಳುವ ಮೂಲಕ ಅವರನ್ನೂ ಸಹಭಾಗಿಗಳನ್ನಾಗಿಸುವುದು ಇದರ ಉದ್ದೇಶ ಎಂದರು.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛತಾಕಾರ್ಯಕ್ಕೆ ಪೂರಕವಾಗಿ , ಈ ಅಭಿಯಾನವೂ ನಡೆಯುತ್ತಿದೆ ಎಂದರು.
ಇದೇ ವೇಳೆ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಮಾತನಾಡಿ, ಅಭಿಯಾನದ ಮೂಲಕ ದೇವಸ್ಥಾನದ ಗರ್ಭಗುಡಿ, ಒಳಾಂಗಣ ಮತ್ತು ಹೊರಾಂಗಣವನ್ನು ಸ್ವಯಂ ಸೇವಕರ ಮೂಲಕ ಶುಚಿಗೊಳಿಸಲಾಗುವುದು, ಮುಂದಿನ ದಿನಗಳಲ್ಲಿ ಇದನ್ನು ನಿರಂತರವಾಗಿ ಮುನ್ನಡೆಸಲಾಗುವುದು ಎಂದರು.
ದ.ಕ ಉಡುಪಿ ಯೋಜನಾ ನಿರ್ದೇಶಕ ಚಂದ್ರಶೇಖರ್, ತಾಲೂಕು ಯೋಜನಾಧಿಕಾರಿ ಸುನಿತಾ ನಾಯಕ್, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕಿರಣ್ ಹೆಗ್ಡೆ, ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ನಾವೂರ, ಪ್ರಕಾಶ್ ಶೆಟ್ಟಿ ತುಂಬೆ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳ ಪ್ರಮುಖರು ಹಾಜರಿದ್ದರು.