ನಾವು ಗುಲಾಮರು ಹೌದೋ, ಅಲ್ವೋ ಎಂಬ ಅರಿವು ಮೂಡಬೇಕಾದರೆ, ಎಷ್ಟು ಹೆಚ್ಚು ಯಂತ್ರಗಳನ್ನು ಹೊಂದಿದ್ದೇವೆ ಎಂಬುದನ್ನು ಪರಿಶೀಲಿಸಬೇಕು.

ಡಾ. ಅಜಕ್ಕಳ ಗಿರೀಶ ಭಟ್ www.bantwalnews.com ಅಂಕಣಗಿರಿಲಹರಿ

ಮಾನವ ಎಷ್ಟೋ ವರ್ಷಗಳಿಂದ ಬೇರೆ ಬೇರೆ ನಮೂನೆಗಳ ಯಂತ್ರಗಳನ್ನು ತಯಾರಿಸಿ ಅವುಗಳನ್ನು ತನ್ನ ಗುಲಾಮರನ್ನಾಗಿ ಮಾಡಿಕೊಂಡು ತನ್ನಿಷ್ಟದಂತೆ ಬಳಸುತ್ತಲೇ ಬಂದಿದ್ದಾನೆ ಅಥವಾ ಬಂದಿದ್ದಾಳೆ. ಬಂದಿದ್ದಾನೆ ಅನ್ನುವುದೇ ಹೆಚ್ಚು ಸರಿಯಾದೀತೇನೋ.

ಯಾಕೆಂದರೆ ನನಗೆ ತಿಳಿದಂತೆ ಯಂತ್ರಗಳನ್ನು ಕಂಡುಹಿಡಿದವರಲ್ಲಿ ಮತ್ತು ತೀರ ಈಚಿನವರೆಗೂ ಯಂತ್ರಗಳನ್ನು ಬಳಕೆ ಮಾಡುತ್ತಿದ್ದವರ ಪ್ರಮಾಣದಲ್ಲಿ ಗಂಡಸರದ್ದೇ ದೊಡ್ಡ ಪಾಲು.

ಹೆಂಗಸರನ್ನೂ ಗಂಡಸರು ಯಂತ್ರಗಳೆಂದು ಬಗೆದು ಬಳಸಿಕೊಳ್ಳುತ್ತಾರೆ ಅಂತಲೂ ಹೆಣ್ಣುವಾದಿಗಳಾದ ಹೆಂಗಸರು ಮತ್ತು ಗಂಡಸರು ಹೇಳುತ್ತಿರುವುದನ್ನೂ ನೀವು ಕೇಳಿರುತ್ತೀರಿ.  ಈಗ ಮನೆಯೊಳಗಿನ ಯಂತ್ರಗಳನ್ನು ಬಳಸುವವರಲ್ಲಿ ಹೆಂಗಸರ ಪ್ರಮಾಣ ದೊಡ್ಡದು ಅಂತ ಅನಿಸಬಹುದು. ಸಾಮಾನ್ಯವಾಗಿ ನಾವು ಕಾಣುವಂತೆ, ಮನೆಯೊಳಗಿನ ಯಂತ್ರಗಳಿಗೆ ಬೇಡಿಕೆ ಸಲ್ಲಿಸುವವರು ಹೆಂಗಸರೇ. ಹಾಗಿದ್ದರೂ ಇದು ಪೂರ್ತಿ ಸತ್ಯವೋ ಎಂದು ತಿಳಿದುಕೊಳ್ಳುವುದು ಅಷ್ಟು ಸುಲಭವಲ್ಲ.

ಅಂಗನವಾಡಿ ಟೀಚರುಗಳಿಂದ ಹಿಡಿದು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನು ನೇಮಿಸಿ ಸರ್ವೇಕ್ಷಣೆ ಮಾಡಿದರೂ ಈ ಬಗ್ಗೆ ಪೂರ್ಣ ಸತ್ಯವನ್ನು ಕಂಡುಹಿಡಿಯುವುದು ಸಾಧ್ಯ ಎನ್ನಲಾರೆ. ಯಾಕೆಂದರೆ ಮನೆಯಲ್ಲಿ ನಿಷ್ಠಾವಂತ ಗಂಡನಿರುವವರೆಗೆ ಮಡದಿ ಬಟ್ಟೆ ಒಗೆಯುವ ಯಂತ್ರವನ್ನಾಗಲೀ ರುಬ್ಬುಯಂತ್ರವನ್ನಾಗಲೀ ಕೇಳುವುದೇ ಇಲ್ಲ ಎಂಬುದು ಬಹಳ ಗಂಡಂದಿರ ಅನುಭವ. ಅದನ್ನೇ ಕವಿಯೊಬ್ಬರು ಚುಟುಕಿಸಿದ್ದೂ ಉಂಟು. ಬಹುಶಃ ಡುಂಢಿರಾಜರೇ ಇರಬಹುದು. ಈಗ ಯುದ್ಧವಿಮಾನಗಳನ್ನು ಚಲಾಯಿಸಲು ಕೂಡ ಮಹಿಳೆಯರು ತಯಾರಾಗುತ್ತಿದ್ದಾರೆ ಅಂದಮೇಲೆ, ಮನೆಯಲ್ಲಾಗಲೀ ಹೊರಗಾಗಲೀ ಯಂತ್ರಗಳ ಬಳಕೆಯಲ್ಲಿ ಹೆಂಗಸರು ಗಂಡಸರಿಗಿಂತ ಹಿಂದಿಲ್ಲ ಅಂತ ಒಪ್ಪಿಕೊಳ್ಳಬೇಕು. ಹಲವು ಮನೆಗಳಲ್ಲಿ ಪಾತ್ರಗಳು ಮುರುವು ತಿರುವು ಆಗಿ, ಗಂಡಂದಿರೇ ಯಂತ್ರಗಳಾಗಿ ಪಾತ್ರೆಗಳಿಗೆ ಗಂಡುಕೈಗಳಿಂದ ತಿಕ್ಕಿಸಿಕೊಳ್ಳುವ ದುರದೃಷ್ಟ ಪ್ರಾಪ್ತವಾದದ್ದುಂಟು.

ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ತಮ್ಮ ಶರೀರದ ಅವಯವಗಳನ್ನು ಎಲ್ಲ ಪ್ರಾಣಿ ಪಕ್ಷಿಗಳು ಬಳಸಿಕೊಳ್ಳುತ್ತವೆ. ತಮ್ಮ ಅಂಗಗಳಿಗೆ ಹೊರತಾಗಿ ಇತರ ಉಪಕರಣಗಳನ್ನು ಯಾವುದೇ ಪ್ರಾಣಿ ಬಳಸಿದರೆ ಅದು ಅಷ್ಟರಮಟ್ಟಿಗೆ ಮುಂದುವರಿದ ಪ್ರಾಣಿ ಎನಿಸಿಕೊಳ್ಳುತ್ತದೆ. ಉದಾಹರಣೆಗೆ, ಒಂದು ಪ್ಲಾಸ್ಟಿಕ್ ಡಬ್ಬದ ಒಳಗೆ ತಿಂಡಿ ಹಾಕಿ ಅದರ ಪರಿಮಳ ಬರುವಂತೆ ಕಿರುತೆರಪನ್ನು ಬಿಟ್ಟು ಅದನ್ನು ನೀವು ನಿಮ್ಮ ನಾಯಿಯ ಎದುರು ಇಟ್ಟಾಗ ಅದು ಸಾಮಾನ್ಯವಾಗಿ ತನ್ನ ಕೈ, ಕಾಲು, ಬಾಯಿಯಿಂದ ಆ ಡಬ್ಬವನ್ನು ತೆರೆಯಲು ಯತ್ನಿಸುತ್ತದೆ. ಇದರ ಬದಲು ಅದು ಒಂದು ಕಲ್ಲನ್ನು ಕಚ್ಚಿ ತಂದು ಆ ಡಬ್ಬದ ಮೇಲೆ ಹಾಕಿ ತೆರೆಯಲು ಯತ್ನಿಸಿದರೆ? ಆಗ ಅದು ಒಂದು ಸಾಧನವನ್ನು ಬಳಸಿದಂತಾಯಿತು. ಮಾನವ ಸಂತತಿಯಂತೂ ಇಂಥ ಸಾಧನಗಳನ್ನು ಬಳಸಲು ಯಾವಾಗ ಆರಂಭಿಸಿತೋ ಗೊತ್ತಿಲ್ಲ. ಕಲ್ಲಿನಂಥ ಉಪಕರಣಗಳನ್ನು ಆರಂಭದಿಂದಲೇ ಬಳಸುತ್ತಿದ್ದಿರಬಹುದು.  ಮನುಷ್ಯ ಬೇರೆ ಬೇರೆ ಸಾಧನಗಳನ್ನು ಉಪಯೋಗಿಸುವ ಕಲೆಯನ್ನು ಕೈಗೂಡಿಸಿಕೊಳ್ಳುತ್ತಾ ಬಂದಂತೆ ಹೆಚ್ಚು ಹೆಚು ಸಂಕೀರ್ಣ ಯಂತ್ರಗಳನ್ನು ಕಂಡುಕೊಳ್ಳುತ್ತಲೇ ಬಂದ.

ನಾವು ತೀರಾ ಸಾಮಾನ್ಯವಾಗಿ ಬಳಸುವ ಸಾಧನಗಳನ್ನು ಕೂಡ ಸರಿಯಾಗಿ ಬಳಸುತ್ತೇವೆಂದರೆ ಅದರ ಹಿಂದೆ ಒಂದು ಕಲಿಕೆ ಇರುತ್ತದೆ. ಉದಾಹರಣೆಗೆ ನೋಡಿ: ಕೆಲವರು ಸಾಂಬಾರು ಬಡಿಸುವಾಗ ಅವರು ಇದೇ ಮೊದಲ ಬಾರಿ ಸೌಟನ್ನು ಬಳಸುತ್ತಿದ್ದಾರೆ ಅಂತ ನಿಮಗೆ ಗೊತ್ತಾಗುತ್ತದೆ. ಅದು ಸೌಟನ್ನು ಹಿಡಿಯುವ ಕ್ರಮ ಇರಬಹುದು, ಪಾತ್ರೆಯಿಂದ ಸಾಂಬಾರನ್ನು ತೋಡುವ ಕ್ರಮದಲ್ಲಿರಬಹುದು ಅಥವಾ ಸೌಟಿನ ಯಾವ ಬದಿಯಿಂದ ಸಾಂಬಾರು ನಿಮ್ಮ ತಟ್ಟೆಗೆ ಅಥವಾ ಎಲೆಗೆ ಅಥವಾ ಹೊರಗೆ ಸುರಿಯುತ್ತದೆ ಎಂಬುದರಲ್ಲಿ ಇರಬಹುದು, ಅಂತೂ ಗೊತ್ತಾಗಿಯೇ ಆಗುತ್ತದೆ.

ಇಷ್ಟು ಸರಳ ಸಾಧನವನ್ನು ಬಳಸಬೇಕಾದರೂ ಏನೋ ಒಂದು ಕಲಿಕೆಯ ಪ್ರಕ್ರಿಯೆ ಇದೆ ಅಂದ ಬಳಿಕ ಇನ್ನು ಹೆಚ್ಚು ಸಂಕೀರ್ಣವಾದ ಯಂತ್ರಗಳನ್ನು ಬಳಸಲು ಕಲಿಕೆ ಬೇಕೇ ಬೇಕು ಅಂತ ಬೇರೆ ಹೇಳಬೇಕಿಲ್ಲ. ಮನೆಯೊಳಗಿನ ಯಂತ್ರಗಳಿಗೆ ಕೊಡಬೇಕಾದ ಮರ್ಯಾದೆಯನ್ನು ಕೊಡದಿದ್ದರೆ ಅವುಗಳು ಕೈಕೊಡುವುದು ಸರ್ವೇಸಾಮಾನ್ಯ. ಸರಿಯಾಗಿ ನೋಡಿಕೊಳ್ಳದಿದ್ದರೆ ನಮ್ಮನ್ನು ಮೆಂಟಲ್ ಮಾಡುವ ಅವುಗಳು, ಸರಿಯಾಗಿ ನೋಡಿಕೊಂಡರೆ ನಮ್ಮನ್ನೇ ಸೆಂಟಿಮೆಂಟಲ್ ಮಾಡುತ್ತವೆ! ನಮ್ಮಲ್ಲಿದ್ದ ಒಂದು ಮಿಕ್ಸರ್ ಗ್ರೈಂಡರ್ ಹದಿನೈದು ವರ್ಷಗಳಿಗಿಂತಲೂ ಹೆಚ್ಚು ಸೇವೆ ಮಾಡಿದ ನಂತರ ಗುಜರಿಗೆ ಹೊರಟು ನಿಂತಾಗ ನಮಗೆ ಕಣ್ಣೀರು ಬರುವಂತಾಗಿತ್ತು!ಸಾಕಷ್ಟು ಆದಾಯವಿರುವ ನನ್ನ ಸ್ನೇಹಿತರೊಬ್ಬರು ತಮ್ಮ ಮನೆಗೆ ಸ್ವಯಂಚಾಲಿತ ಬಟ್ಟೆ ಒಗೆಯುವ ಯಂತ್ರ ಕೊಳ್ಳಲು ಸ್ವಲ್ಪ ತಡವಾಗಲು ಕಾರಣ ಏನು ಗೊತ್ತೇ? ಅಂಥ ಯಂತ್ರದ ಸ್ವಿಚ್ಚುಗಳನ್ನೆಲ್ಲ ಬಳಸಲು ಭಾರೀ ಕಷ್ಟ ಉಂಟು ಅಂತ ಅವರು ಹೆಂಡತಿಯನ್ನು ಹೆದರಿಸಿಬಿಟ್ಟಿದ್ದರು.ಅವರ ಉಪಾಯ ಬಹಳ ದಿನ ನಡೆಯಲಿಲ್ಲ ಬಿಡಿ. ಆ ಹೆಂಡತಿಯ ತಂಗಿ ಬಂದವಳು ಧೈರ್‍ಯ ಹೇಳಿ ಅಕ್ಕನನ್ನು ಅಂಗಡಿಗೆ ಹೊರಡಿಸಿದಾಗ ಈ ಗಂಡ ಹಿಂದೆಯೇ ಹೋಗಬೇಕಾಯಿತು.

ನಾನು ಈವರೆಗೆ ಯಂತ್ರಗಳನ್ನು ನಾವು ಬಳಸುವ ಬಗ್ಗೆ ಹೇಳಿದೆ. ಸ್ವಲ್ಪ ತತ್ವಜ್ಞಾನ ಮಾತಾಡುವವರನ್ನು ಕೇಳಿ ನೋಡಿ. ನಮ್ಮನ್ನೇ ಯಂತ್ರಗಳು ಬಳಸುತ್ತಿವೆ ಎಂದೇ ಅವರು ಹೇಳುತ್ತಾರೆ. ನಾವೇ ಯಂತ್ರಗಳ ಗುಲಾಮರು ಅಂತನ್ನುವ ಅವರ ಮಾತನ್ನು ತಪ್ಪೆಂದು ಹೇಳುವುದು ಹೇಗೆ? ಆದರೆ ನಮ್ಮ ಹೆಮ್ಮೆ ಯಾವುದರಲ್ಲಿದೆ? ಹೆಚ್ಚು ಹೆಚ್ಚು ಯಂತ್ರಗಳ ಗುಲಾಮರಾಗುವುದರಲ್ಲಿ. ನಿಮ್ಮಲ್ಲಿ ಎಷ್ಟೆಷ್ಟು ಹೊಸ ಹೊಸ ಯಂತ್ರಗಳಿವೆಯೋ ಅಷ್ಟಷ್ಟು ನೀವು ಗೌರವಾರ್ಹರಾಗುತ್ತೀರಿ! ಹೀಗೆ ಹೆಚ್ಚು ಹೆಚ್ಚು ಯಂತ್ರಗಳ ಗುಲಾಮನಾದವನು ಹೆಚ್ಚು ಹೆಚ್ಚು ಮನುಷ್ಯರ ಒಡೆಯ ಎನಿಸಿಕೊಳ್ಳುತ್ತಾನಲ್ಲವೇ? ಮನುಷ್ಯರನ್ನು ಆಳುವುದೇ ನಮ್ಮ ಅಂತಿಮ ಆಸೆಯಲ್ಲವೇ?

…………………………………………………..

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com

ಕಳೆದ ಬಾರಿಯ ಗಿರಿಲಹರಿಗೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಅವುಗಳಲ್ಲಿ ಆಯ್ದ ಎರಡನ್ನು ಇಲ್ಲಿ ಪ್ರಕಟಿಸಲಾಗಿದೆ.

ಓದುಗರ ನೆನಪನ್ನು ಕೆಣಕಿದ್ದೀರಿ

ಎಸೆತ, ನೆಗೆತ, ಜಿಗಿತ, ಒಂಟಿ ಓಟ, ಸವರು, ತಿರುವು, ಜೀವದಾನ, ಕರತಾಡನ, ಮೋಡ ಕವಿದ ವಾತಾವರಣ, ನೆಲಕಚ್ಚಿದ ರಾತ್ರಿ ಕಾವಲುಗಾರ, ಅಭಿರಾಮ, ರಘುರಾಮರನ್ನ ನೆನಪಿಸುವ ಕಿರಿ”ಕಿಟ್ಟ”ನ್ನ

ಲೀಲಾಜಾಲವಾಗಿ ಬಿಚ್ಚಿ ಕೈಚಳಕ ತೋರಿಸಿದ ಗಿರಿ SIRಗೆ ವಂದನೆ…ಇಂದಿನ ಲೋಕಲ್ ಕೊರೆಮೆಂಟ್ರಿ

ಕನ್ನಡತನ ಕಳೆದುಕೊಂಡು ಇಂಗ್ಲೀಸನ್ನು ಢಿಂಢಿಂ ಬಾರಿಸುತ್ತಲೇ ” ಅರಚುವರ್ಧಕ” ಪ್ರಶಸ್ತಿಗಾಗಿ ಸೆಣಸಾಡುತ್ತಿದೆ…ಓದುಗರ ನೆನಪನ್ನ ಕೆದಕಿ ರಂಜಿಸಿದ್ದಿರಿ..How’sthat!!!!! ಎಂದು ಬರೆದವರು ಬಂಟ್ವಾಳ ಸುರೇಶ್ ಬಾಳಿಗಾ.

ಇನ್ನೂ ಬೇಕಿತ್ತು ಮಾರ್ರೇ…

ಡಾ. ಅಜಕ್ಕಳ ಗಿರೀಶ್ ಭಟ್ ಅವರ ಚೆಂಡು ದಾಂಡು ವೀಕ್ಷಕ ವಿವರಣೆ ರಸವತ್ತಾಗಿತ್ತು. ಆದರೆ ಕೇವಲ ಎರಡು ಚೆಂಡುಗಳ ಎಸೆತಕ್ಕೇ ಮುಗಿದು ಹೋದದ್ದರಿಂದ ಪೀಠಿಕೆಗೇ ಪ್ರಸಂಗ ಮುಗಿದಷ್ಟು ರಸಭಂಗವಾಯಿತು. ಇನ್ನೂ ವಿನೂತನ ಎಸೆತಗಳ , ಓಟಗಳ, ನೋಟಗಳ ವರ್ಣನೆಗಳಿಂದ ಕೂಡಿದ ಒಂದು ದೀರ್ಘ ರಸಾಯನದ ಓದಿಗೆ ಮನದಲ್ಲಿ ಭೂಮಿಕೆ ಸಿದ್ಧಗೊಂಡಿತ್ತಷ್ಟೇ…  ಇನ್ನೂ ಫೋರ್ ಸಿಕ್ಸ್ ಗಳ ಸಂಭ್ರಮ, ಬೌಲ್ಡ್ ರನ್ನೌಟ್ ಗಳ ಕನ್ನಡೀಕರಣ, ಟ್ರೋಫಿ ಎತ್ತುವವರ ಗತ್ತು ಗೈರತ್ತು… ಎಲ್ಲವೂ ಬೇಕಿತ್ತು ಮಾರ್ರೇ…ಎಂದು ಬರೆದವರು ಪ್ರತಿಭಾ ಕುಡ್ತಡ್ಕ.

 

 

Dr. Ajakkala Girish Bhat

ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Share
Published by
Dr. Ajakkala Girish Bhat

Recent Posts