ಗುಣಾತ್ಮಕ ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಶುಕ್ರವಾರ ಅಳಿಕೆ ಸತ್ಯಸಾಯಿ ವಿಹಾರದಲ್ಲಿ ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಜಗತ್ತನ್ನು ಪ್ರೀತಿಸಲು ಕಲಿಸುವ ಶಿಕ್ಷಣ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಸಂಸ್ಕಾರವನ್ನು ಕಲಿಸುವ ಶಿಕ್ಷಕರು ಸಮಾಜದಲ್ಲಿ ಹೆಚ್ಚಾಗಬೇಕಾಗಿದೆ ಎಂದು ತಿಳಿಸಿದರು.
ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್ ಸಮಾರೋಪ ಭಾಷಣ ಮಾಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ತಾಲೂಕು ಪಂಚಾಯಿತಿ ಸದಸ್ಯ ಪದ್ಮನಾಭ ಪೂಜಾರಿ ಎನ್., ವಿದ್ಯಾ ಸಂಸ್ಥೆಗಳ ಸಂಚಾಲಕ ಕೆ. ಎಸ್. ಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಸದಸ್ಯ ಕೆ ಸಂಜೀವ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ಭಟ್ ಎಸ್. ವರದಿ ವಾಚಿಸಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಘು ಟಿ. ವೈ. ವಂದಿಸಿದರು. ಪದವಿ ಪೂರ್ವ ಕಾಲೇಜು ಅರ್ಥಶಾಸ್ತ್ರ ಉಪಸ್ಯಾಸಕ ಪೂವಪ್ಪ ಶೆಟ್ಟಿ ಪಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಕೇಂದ್ರ ಉಪನ್ಯಾಸಕ ಯಾದವ ಎನ್ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಿಸಿದರು.
ಕುಡಿಯುವ ನೀರಿನ ಯೋಜನೆ ಉದ್ಘಾಟನೆ:
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೊದಲ ಹಂತದ ಕಾಮಗಾರಿ ಈಗಾಗಲೇ ಮುಗಿದಿದೆ. ನೇತ್ರಾವತಿಯ ಶುದ್ದೀಕರಣ ಘಟಕದಿಂದ ಕರೋಪಾಡಿಯವರೆಗೆ ನೀರು ಹರಿಯುವ ಬಗ್ಗೆ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಯೋಜನೆಯ ಉದ್ಘಾಟನೆ ನಡೆದು ನಾಗರೀಕರ ಬಳಕೆಗೆ ಲಭವಾಗಲಿದೆ. ಅಳಿಕೆ ಗ್ರಾಮಕ್ಕೆ ಯೋಜನೆಯನ್ನು ವಿಸ್ತರಿಸಲು ಬೇಕಾದ ಪ್ರಯತ್ನವನ್ನು ಸರ್ಕಾರದ ಮಟ್ಟದಲ್ಲಿ ನಡೆಸಲಾಗುವುದು ಎಂದು ರೈ ಇದೇ ಸಂದರ್ಭ ಹೇಳಿದರು.