ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರವಿಂದು ದೇಶಿ- ವಿದೇಶಿ ಸಂಶೋಧಕರ ಆಕರ್ಷಣೆಯ ಕೇಂದ್ರವಾಗಿ ಬೆಳೆಯುತ್ತಿದ್ದು, ವಿದೇಶಿಯರ ತಂಡವೊಂದು ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿರುವ ವಸ್ತು ಸಂಗ್ರಹವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿತು.
ಜರ್ಮನಿಯ ಸಂಶೋಧಕಿ ಡಾ. ಹೆಚ್ ಬ್ರೂಕ್‌ನರ್ , ಅಮೇರಿಕಾದ ಪ್ರೊ ಸ್ಟೀಫನ್ ಮೆಕೆನನ್ನ್ ಮತ್ತು ಪ್ರೊ ಆನ್ ಫಿಲ್ಡಾಸ್ ಹಂಪಿ ವಿ.ವಿಯ ಮಾಜಿ ಕುಲಪತಿ ಪ್ರೊ. ಬಿ.ಎ ವಿವೇಕ ರೈ ಜತೆಗೂಡಿ ಬಂದ ತಂಡ ಕೇಂದ್ರದ ತುಳು ಬದುಕು ವಸ್ತು ಸಂಗ್ರಹಾಲಯ ಮತ್ತು ರಾಣಿ ಅಬ್ಬಕ್ಕನ ಬದುಕನ್ನು ಪ್ರತಿಬಿಂಬಿಸುವ ಕಲಾ ಗ್ಯಾಲಾರಿಯನ್ನು ವೀಕ್ಷಿಸಿ ಮಾಹಿತಿ ಸಂಗ್ರಹಿಸಿಕೊಂಡರು.
ಕೇಂದ್ರದ ಸಂಗ್ರಹಾಲಯದ ಚತುರ್ಮುಖ ನಾಗಬಿಂಬದ ಕುರಿತ ಐತಿಹ್ಯ ಮತ್ತು ಇತಿಹಾಸ, ಕೋಟಿ ಚೆನ್ನಯರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ನೀಡುವುದಲ್ಲದೆ, ತುಳುನಾಡಿನ ಬೆಮ್ಮೆರ್ ಮತ್ತು ನಾಗಬೆಮ್ಮರ ಕುರಿತ ಜಿಜ್ನಾಸೆಗೆ ಇದೊಂದು ಪ್ರಮುಖ ಆಕರವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕೇಂದ್ರವು ಸ್ಥಾಪಿತ ಇತಿಹಾಸ ಶಾಸ್ತ್ರಕ್ಕೆ ಸಮಾನಾಂತರವಾಗಿ ಭೌತಿಕ ವಸ್ತು ಪರಿಕರಗಳು ಮತ್ತು ಮೌಖಿಕ ಇತಿಹಾಸ ಇತಿಹಾಸ ರಚನೆಗೆ ಸಹಕಾರಿ ಎಂದು ಪ್ರತಿಪಾದಿಸುತ್ತಾ ಬಂದಿದೆ. ಕೆಳಸ್ತರದ ಜನರ ಬದುಕನ್ನು ತೆರೆದಿಡುವ ಈ ವಸ್ತು ಸಂಗ್ರಹಾಲಯ ತುಳುನಾಡಿನ ಸಮಗ್ರ ಪರಂಪರೆ ಮತ್ತು ಇತಿಹಾಸದ ಮುಖವಾಣಿಯಾಗಿ ಬೆಳೆಯುತ್ತಿದೆ ಎಂದು ಹರ್ಷ ವ್ಯಕ್ತ ಪಡಿಸಿದರು. ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಂ ಪೂಜಾರಿ ಹಾಗೂ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಸಂಶೋದಕರಿಗೆ ಮಾಹಿತಿ ಒದಗಿಸಿದರು.