ಬಂಟ್ವಾಳ: ತುಂಬೆ ಅಣೆಕಟ್ಟುವಿಗೆ ಸಂಬಂಧಿಸಿ ಕೃಷಿಕರನ್ನು ಪೂರ್ಣವಾಗಿ ಕತ್ತಲಲ್ಲಿಟ್ಟು ಮೋಸ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಮನಪಾ ನೀತಿ ಖಂಡನೀಯ ಎಂದು ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಬ್ಬರನ್ನು ಕೊಂದು ಮತ್ತೊಬ್ಬರಿಗೆ ಲಾಭ ಮಾಡಿಕೊಡುವುದಲ್ಲ. ಮುಳುಗಡೆ ಪ್ರದೇಶದ ಸಂತ್ರಸ್ತ ರೈತರಿಗೆ ಮಾಹಿತಿ ನೀಡದೆ ಐದೂವರೆ ಅಡಿ ನೀರು ಸಂಗ್ರಹ ಸರಿಯಲ್ಲ. ಕೃಷಿಕರು ಬಹಳಷ್ಟು ಕಷ್ಟಪಟ್ಟು ಬೆಳೆ ಬೆಳೆಸಿ ಜೀವಿಸುತ್ತಿದ್ದಾರೆ. ರೈತರಿಗೆ ಮಾಹಿತಿ ಕೊಡಲಿ, ಮುಳುಗಡೆ ಪ್ರದೇಶದ ರೈತರಿಗೆ ಏಕಗಂಟಿನಲ್ಲಿ ಪರಿಹಾರ ನೀಡಬೇಕು ಎಂದರು. ಜನವರಿಯಿಂದ ನದಿ ತೀರದ ಕೃಷಿಕರು ನೀರು ತೆಗೆಯದಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದು, ರೈತರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತ ರೈತರನ್ನು ಮುಗಿಸುವತ್ತ ಹೊರಟಿದೆ ಎಂದು ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಈ ವಿಚಾರದ ಬಗ್ಗೆ ಮಾತುಕತೆ ನಡೆಸಲಾಗಿದೆ. ಜನವರಿ 18ರಂದು ಅವರು ಜಿಲ್ಲೆಗೆ ಆಗಮಿಸಲಿದ್ದು ಅಂದು ಈ ಭಾಗದ ಸಂತ್ರಸ್ತ ರೈತರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ ಹಾಗೂ ಸ್ಥಳ ಪರಿಶೀಲನೆಯನ್ನೂ ನಡೆಸಲಿದ್ದಾರೆ. ಬಳಿಕ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.