ದುರ್ಗ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ 1.6 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದಡ್ಡಲಕಾಡು ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಎ.29 ಹಾಗೂ ಎ. 30 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ದತ್ತು ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಲಬ್‌ನ ಸದಸ್ಯರ ಆಶಯದಂತೆ ಕೇಂದ್ರ ಶಿಕ್ಷಣ ಸಚಿವರನ್ನು ಕರೆ ತರವ ಪ್ರಯತ್ನ ಮಾಡುತ್ತೇನೆ, ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿರುವುದಾಗಿ ಅವರು ತಿಳಿಸಿದರು.
ಖಾಸಗಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ರ್ಯಾಂಗಕ್ ಗಳಿಕೆಯನ್ನಷ್ಟೇ ಉದ್ದೇಶವನ್ನಾಗುಟ್ಟುಕೊಂಡು ಟ್ಯುಷನ್ ಮತ್ತು ಟೆನ್ಷನ್‌ನೊಂದಿಗೆ ಬೆಳೆಯುತ್ತಾರೆ. ಆದರೆ ಸರಕಾರಿ ಶಾಲೆಯ ಮಕ್ಕಳು ಸೃಜನ ಶೀಲತೆ ಹಾಗೂ ಆತ್ಮಸ್ಥೈರ್ಯದ ಜಾಗೃತಿಯೊಂದಿಗೆ ಬೆಳೆಯುತ್ತಾರೆ. ಆತ್ಮಸೈರ್ಯ ವೃದ್ದಿಯಾಗದೆ ಕೇವಲ ಜ್ಞಾನ ವೃದ್ದಿಯಾದರೆ ಪ್ರಯೋಜನವಿಲ್ಲ ಖಾಸಗಿ ಶಾಲೆಗಳಲ್ಲಿ ಕಲಿತರೆ ಉನ್ನತ ಮಟ್ಟಕ್ಕೇರಲು ಸಾಧ್ಯ ಎನ್ನುವ ಪೋಷಕರ ಮಾನಸಿಕತೆಯೇ ಇಂದು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಗೆ ಕಾರಣವಾಗಿದೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಖ್ಯಾತ ವಿಜ್ಞಾನಿ ಸರ್.ಎಂ.ವಿಶ್ವೇಶ್ವರಯ್ಯ ಸರಕಾರಿ ಶಾಲೆಗಳಲ್ಲಿ ಕಲಿತು ಸಾಧನೆ ಮಾಡಿದವರು. ಸರಕಾರಿ ಶಾಲೆಗಳಲ್ಲಿನ ಮಕ್ಕಳು ಸಾಧಕರಾಗಿದ್ದಾರೆ ಎನ್ನುವ ಪೋಷಕರ ಮರೆವು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹಕ್ಕೆ ಕಾರಣವಾಗಿದೆ ಎಂದರು.
ಯುವಕ ಸಂಘವೊಂದು ಶಾಲೆಯನ್ನು ದತ್ತು ಸ್ವೀಕರಿಸಿ ನೂತನ ಕಟ್ಟಡವನ್ನು ನಿರ್ಮಿಸಿ ಕೊಡುತ್ತಿರುವುದು ಮಾದರಿ ಕಾರ್ಯ. ಈ ಮೂಲಕ ಕ್ಲಬ್ ಸರಕಾರದ ಕಣ್ತೆರೆಸುವ ಕೆಲಸ ಮಾಡಿದೆ. ಒಂದು ಶಾಲೆ ನಿರ್ಮಿಸಿದರೆ ಸಾವಿರ ದೇವಸ್ಥಾನಗಳನ್ನು ನಿರ್ಮಿಸಿದ ಪುಣ್ಯ ಸಿಗುತ್ತದೆ ಎಂದರು. ಜಿಲ್ಲೆಯ ಮಾದರಿ ಶಾಲೆ ಯಾವುದೆಂದರೆ ದಡ್ಡಲಕಾಡು ಎನ್ನುವ ರೀತಿಯಲ್ಲಿ ಶಾಲೆ ಅಭಿವೃದ್ದಿಗೊಳುತ್ತಿರುವುದು ಅಭಿನಂದನೀಯ ಎಂದರು. ತನ್ನ ಸಂಸದ ನಿಧಿಯಿಂದ ೫ ಲಕ್ಷ ರುಪಾಯಿ ಅನುದಾನ ನೀಡುವುದಾಗಿ ಅವರು ಘೋಷಿಸಿದರು.
ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಮಾತನಾಡಿ ಸರಕಾರಿ ಶಾಲೆಗಳಲ್ಲಿ ಕಲಿತವರು ಪುಣ್ಯವಂತರು. ಎಲ್ಲಾ ಸೃಜನಶೀಲ ಕಲಿಕೆಗಳು ಅಲ್ಲಿನ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಪ್ರೇರಣೆ ಪಡೆದು ಎಲ್ಲಾ ಗ್ರಾಮಗಳಲ್ಲೂ ಸರಕಾರಿ ಶಾಲೆಗಳು ನಿರ್ಮಾಣವಾಗಲಿ ಎಂದು ಆಶಿಸಿದರು.
ಜಿ.ಪಂ.ಸದಸ್ಯ ತುಂಗಪ್ಪ ಬಂಗೇರಾ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಮಾನವೀಯ ಮೌಲ್ಯವನ್ನು ಮೈಗೂಡಿಸಿಕೊಂಡಿರುತ್ತಾರೆ ಎಂದರು. ಶಾಲೆಯ ರಸ್ತೆ ಕಾಮಗಾರಿಗೆ ಅನುದಾನದ ಸಹಕಾರ ನೀಡುವುದಾಗಿ ತಿಳಿಸಿದರು.
ಗ್ರಾ.ಪಂ.ಸದಸ್ಯ ಪೂವಪ್ಪ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಸಂಜೀವ ಪೂಜಾರಿ, ಲಕ್ಷ್ಮೀನಾರಾಯಣ, ರೂಪಶ್ರೀ, ಆಕಾಶವಾಣಿ ಕಲಾವಿದೆ ಮಲ್ಲಿಕಾ, ಎಸ್‌ಡಿಎಂಸಿ ಅಧ್ಯಕ್ಷ ಕೇಶವ ಗೌಡ ಹಾಜರಿದ್ದರು.
ಪ್ರಕಾಶ್ ಅಂಚನ್ ಪ್ರಾಸ್ತವಿಕ ಮಾತುಗಳೊಂದಿಗೆ ಕ್ಲಬ್‌ನ ಕಾರ್ಯಚಟುವಟಿಕೆಯ ಮಾಹಿತಿ ನೀಡಿದರು. ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ಸ್ವಾಗತಿಸಿದರು, ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ ವಂದಿಸಿದರು. ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ತರಗತಿಯಲ್ಲಿ ಸಂವಾದ ನಡೆಸಿದ ಸಂಸದರು, ರಾಷ್ಟ್ರದ ಗಡಿ ಕಾಯುವ ಸೈನಿಕರಿಗೆ ಹೇಗೆ ಗೌರವ ಕೊಡಲಾಗುತ್ತದೋ ಹಾಗೆಯೇ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರಿಗೂ ಅಷ್ಟೇ ಗೌರವ ನೀಡಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳ ಸ್ಥಿತಿಗತಿಗಳ ಕುರಿತು ಪ್ರಶ್ನೆ ಕೇಳಿದ ಅವರು, ಬಳಿಕ ಜ್ಞಾನಮತ್ತೆಯನ್ನೂ ಪರೀಕ್ಷಿಸಿದರು. ಮೋದಿ ಅವರ ಪೂರ್ಣ ಹೆಸರು ಕೇಳಿದ ಅವರು, ಚಹ ಮಾರುವ ಮೂಲಕ ಮೇಲೆ ಬಂದ ನರೇಂದ್ರ ಮೋದಿ ಇಂದು ಪ್ರಧಾನಿಯಾಗಿದ್ದಾರೆ. ಹಾಗೆಯೇ ನೀವೂ ಉನ್ನತ ಸ್ಥಾನಕ್ಕೇರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.