ಮಾರುಕಟ್ಟೆಗೆ ಎಂದು ಕಾದಿರಿಸಿದ್ದ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ವಿಟ್ಲ ಬೊಬ್ಬೆಕೇರಿಯಲ್ಲಿ ಮಂಗಳವಾರ ನಡೆಯಿತು.
ಒತ್ತುವರಿ ತೆರವು ಕಾರ್ಯ ಆರಂಭವಾಗುತ್ತಿದ್ದಂತೆ ಒತ್ತುವರಿ ಸ್ಥಳದಲ್ಲಿ ವಾಸವಾಗಿರುವ ಇಬ್ಬರು ತೆರವು ವಾಹನಕ್ಕೆ ಅಡ್ಡಿ ಪಡಿಸಿದರು. ತಹಸೀಲ್ದಾರ್ ಪುರಂದರ ಹೆಗ್ಡೆ ಅವರು ಹಲವು ಬಾರಿ ಈ ಕುರಿತು ನಿಮಗೆ ತಿಳಿಸಲಾಗಿದೆ, ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ತೆರವು ಮಾಡಲಾಗುತ್ತಿದೆ ಎಂದು ಹೇಳಿ ಮನವೊಲಿಸಲು ಪ್ರಯತ್ನಿಸಿದರು. ಆದರೂ ವಾಹನವನ್ನು ಮುಂದೆ ಹೋಗಲು ಬಿಡದಿದ್ದಾಗ ಪೊಲೀಸರು ಅವರನ್ನು ಸ್ಥಳದಿಂದ ಕರೆದೊಯ್ದರು.
ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂಬರ್ 459/11ಬಿಯಲ್ಲಿ 0.08 ಎಕರೆ ಪಂಚಾಯಿತಿಯ ಮೀನು ಮಾರುಕಟ್ಟೆ ಹೆಸರಿನಲ್ಲಿದೆ. ಸದ್ಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಸಜ್ಜಿತ ಮೀನು ಮಾರುಕಟ್ಟೆ ಸಮುಚ್ಚಯ ನಿರ್ಮಾಣಕ್ಕೆಂದು ಸುಮಾರು 25 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿ ಶಿಲಾನ್ಯಾಸವನ್ನೂ ನೆರವೇರಿಸಲಾಗಿತ್ತು. ಹಳೆ ಕಟ್ಟಡದ ಒಂದು ಭಾಗ ತೆರವು ಮಾಡಿ ಅಳತೆ ಮಾಡುವ ಸಮಯದಲ್ಲಿ 3.75 ಸೆಂಟ್ಸ್ ಮಾತ್ರ ದೊರಕಿದ್ದು, ಉಳಿದ 4.25 ಸೆಂಟ್ಸ್ ಒತ್ತುವರಿಯಾಗಿತ್ತು. ತೆರವು ಕಾರ್ಯದ ಬಗ್ಗೆ ಹಲವು ಬಾರಿ ಮಾತುಕತೆ ನಡೆದಿದ್ದವು.
ಒತ್ತುವರಿ ತೆರವು ಮಾಡಿ ಕಟ್ಟಣ ನಿರ್ಮಾಣಕ್ಕೆ ಮುಂದಾಗುವ ಬಗ್ಗೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. ಒತ್ತುವರಿ ತೆರವು ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಪತ್ರವನ್ನೂ ಬರೆಯಲಾಗಿತ್ತು. ಈ ನಿಟ್ಟಿನಲ್ಲಿ ಮತ್ತೆ ಸರ್ವೇ ಕಾರ್ಯ ನಡೆದು ಸ್ಥಳ ಗುರುತು ಮಾಡಲಾಗಿತ್ತು. ಈ ಸಂದರ್ಭ ಒತ್ತುವರಿಯ ಜಾಗದಲ್ಲಿರುವ ಮನೆಯವರಿಂದ ಸಾಕಷ್ಟು ಆಕ್ಷೇಪಗಳೂ ಕೇಳಿಬಂದಿದ್ದವು. ಮತ್ತೆ ಮಾತುಕತೆಗಳು ನಡೆದರೂ ಜಾಗ ಬಿಟ್ಟುಕೊಡುವ ವಿಚಾರದಲ್ಲಿ ಒತ್ತುವರಿದಾರರು ಮುಂದೆ ಬಾರದ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ವಿಟ್ಲ ಹೋಬಳಿ ಕಂದಾಯ ನಿರೀಕ್ಷಕರಾದ ದಿವಾಕರ, ಸಹಾಯಕ ಗಿರೀಶ್, ಗ್ರಾಮ ಕರಣಿಕರಾದ ಪ್ರಕಾಶ್, ಬಂಟ್ವಾಳ ಸರ್ವೇಯರ್ ಮಾದೇಶ, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಅಧ್ಯಕ್ಷ ಅರುಣ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಪಟ್ಟಣ ಪಂಚಾಯಿತಿ ಎಂಜಿನಿಯರ್ ಶ್ರೀಧರ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುನಾಥ ಕಲ್ಲಕಟ್ಟ, ರಾಮ್ ದಾಸ್ ಶೆಣೈ, ಲೋಕನಾಥ್ ಮತ್ತಿತರರು ಹಾಜರಿದ್ದರು. ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ನಾಗರಾಜ್ ನೇತೃತ್ವದಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿ ಬಂದೋಬಸ್ತು ಕಲ್ಪಿಸಲಾಗಿತ್ತು.