ಬಿ.ಸಿ.ರೋಡು ಸಮೀಪದ ಪಲ್ಲಮಜಲು ಹಯಾತುಲ್ ಇಸ್ಲಾಂ ಜುಮಾ ಮಸೀದಿ ವತಿಯಿಂದ ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು ಡಿಸೆಂಬರ್ 29 ರಿಂದ ಜನವರಿ 1 ರವರೆಗೆ ಇಲ್ಲಿನ ಮಸೀದಿ ವಠಾರದಲ್ಲಿ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸ್ಥಳೀಯ ಖತೀಬ್ ಯಾಕೂಬ್ ಫೈಝಿ ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಮುಹಮ್ಮದ್ ಶಫೀಕಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸುವರು. ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ದುವಾ ನೆರವೇರಿಸುವರು.
ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದಲ್ಲಿ ಡಿ 20 ರಂದು ಮಿತ್ತಬೈಲು ಖತೀಬ್ ಖಲೀಲುರ್ರಹ್ಮಾನ್ ದಾರಿಮಿ ಇಸ್ಲಾಮಿನಲ್ಲಿ ಸ್ತ್ರೀ ಸಂರಕ್ಷಣೆ ಹಾಗೂ ಸ್ತ್ರೀ ಸ್ವಾತಂತ್ರ್ಯ ಎಂಬ ವಿಷಯದಲ್ಲಿ ಉಪನ್ಯಾಸಗೈಯಲಿದ್ದು, ಡಿ 30 ರಂದು ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಎಡಪಾಲಂ ಅವರು ನೂತನವಾದಿಗಳ ಶಿರ್ಕ್‌ಗಳ ಕುರಿತು ಉಪನ್ಯಾಸಗೈಯುವರು. ಡಿ 31 ರಂದು ಕೇರಳ-ತೆಕ್ಕಿಲ್ ಜುಮಾ ಮಸೀದಿ ಖತೀಬ್ ಕೆ.ಬಿ. ಅಬ್ಬಾಸ್ ದಾರಿಮಿ ಅವರು ಮಯ್ಯಿತ್ ಪರಿಪಾಲನೆ ಹಾಗೂ ಪರಲೋಕ ಯಾತ್ರೆ ಎಂಬ ವಿಷಯದಲ್ಲಿ ಉಪನ್ಯಾಸಗೈಯಲಿದ್ದು, ಜ 1 ರಂದು ಪುತ್ತೂರು-ಕುಂಬ್ರ ಕೆಐಸಿ ಪ್ರಾಧ್ಯಾಪಕ ಅನೀಸ್ ಕೌಸರಿ ಅವರು ಖಲೀಪ ಉಮರ್ (ರ.ಅ) ಅವರ ಬಗ್ಗೆ ಧಾರ್ಮಿಕ ಉಪನ್ಯಾಸ ನಡೆಸಲಿದ್ದಾರೆ.
ಜ 1 ರಂದು ಸ್ವಲಾತ್ ಮಜ್ಲಿಸ್ ಬಳಿಕ ಕಾರ್ವಾನೆ ಮದೀನಾ ಬುರ್‌ದಾ ತಂಡದಿಂದ ಬುರ್‌ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದ್ದು, ಪ್ರತಿದಿನ ಮಗ್ರಿಬ್ ನಮಾಝ್ ಬಳಿಕ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.