ಮಕ್ಕಳ ಮಾತು

ಸಾರ್.. ಅವನಿಗೆ ಬುದ್ದಿ ಸರಿ ಇಲ್ಲ

ಆ ಒಂದು ಸನ್ನಿವೇಶ ಕಮಲ್ ಮೇಲೆ ಭಾರಿ ಪ್ರಭಾವ ಬೀರಿತ್ತು. ಇಲ್ಲದಿದ್ದರೆ….

ಮೌನೇಶ ವಿಶ್ವಕರ್ಮ ಬರೆಯುವ ಮಕ್ಕಳ ಮಾತು at www.bantwalnews.com

ಕಮಲ್ ಹೀರೋ ಆದ ಖುಷಿ ನನ್ನಲ್ಲಿತ್ತು. ಆ  ಒಂದು ಸನ್ನಿವೇಶ ಆ ಬಳಿಕ ಕಮಲ್ ಮೇಲೆ ಭಾರೀ ಪ್ರಭಾವ ಬೀರಿತ್ತು. ಅವನ ನಡವಳಿಕೆಯಲ್ಲಿ ಬದಲಾವಣೆ ಬಂತು ಹಾಗೂ ಅವನನ್ನು   ತಾತ್ಸಾರ ಮನೋಭಾವದಿಂದ ನೋಡುತ್ತಿದ್ದ ಮಕ್ಕಳಿಗೆ ಅವನ ಬಗ್ಗೆ ಅಭಿಮಾನ ಮೂಡಿಸಿತ್ತು. ॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒

ಸರ್ಕಾರದ ಸಮಾನ ಶಿಕ್ಷಣ, ಸಮನ್ವಯ ಶಿಕ್ಷಣದ ಭಾರೀ ಘೋಷಣೆಗಳು, ಭಾಷಣಗಳು ಕೇಳಿಬರುತ್ತಿರುವ ನಡುವೆಯೂ ಇಂದು ನಮ್ಮ ಸುತ್ತಮುತ್ತಲು ಅದೆಷ್ಟೋ ವಿಕಲಚೇತನ ಮಕ್ಕಳು ತಮ್ಮದಲ್ಲದ ಕಾರಣಕ್ಕೆ ನೋವು ಅನುಭವಿಸುತ್ತಿದ್ದಾರೆ. ಮನೆಯವರಿಂದ, ನೆರೆಮನೆಯವರಿಂದ, ಸ್ನೇಹಿತರಿಂದ, ಸಹಪಾಠಿಗಳಿಂದ, ಸರ್ಕಾರದಿಂದ ಅವರು ಬಯಸುತ್ತಿರುವ ಸ್ಪಂದನ ಸಿಗದಿರುವುದೂ ಇದಕ್ಕೆ ಕಾರಣವಿರಬಹುದು. ಹಲವು ಬಾರಿ ನಾವೂ ಅವರ ತಮ್ಮದೇ ಶೈಲಿಯ ಅಭಿಪ್ರಾಯ, ಅನಿಸಿಕೆಗಳ ಕಡೆಗೆ ಗಮನ ಹರಿಸದೆ ಅವರನ್ನು ನಗಣ್ಯರನ್ನಾಗಿಸುತ್ತಿದ್ದೇವೆ. ನಮಗೆ ಅನುಕಂಪ ಬೇಕಿಲ್ಲ – ಅವಕಾಶ ಕೊಡಿ ಎಂಬ ಮನಮುಟ್ಟುವ ಒತ್ತಾಯಗಳನ್ನೂ ನಾವು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿಯೇ ವಿಕಲಚೇತನ ಮಕ್ಕಳ ಮುಖದಲ್ಲಿ ನಮ್ಮ ನಿರೀಕ್ಷೆಯ ಚೈತನ್ಯ ಕಾಣಿಸುತ್ತಿಲ್ಲ.

ಬಂಟ್ವಾಳ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ನಾಟಕ ಅಭ್ಯಾಸದ ವೇಳೆ ನನ್ನ ಅನುಭವಕ್ಕೆ ಬಂದ ಘಟನೆಯೊಂದನ್ನು ಹೇಳುತ್ತೇನೆ.. ಕೇಳಿ.

ಅಲ್ಲಿ ನಡೆಯುವ ನಾಟಕೋತ್ಸವಕ್ಕಾಗಿ ಮಕ್ಕಳ ತಂಡಕ್ಕೆ ನಾಟಕ ನಿರ್ದೇಶನಕ್ಕೆಂದು ಆ ಶಾಲೆಗೆ ತೆರಳಿದ್ದೆ. ಶಾಲಾ ಶಿಕ್ಷಕರು ನಾಟಕ ತಯಾರಿಗಾಗಿ 23 ಮಕ್ಕಳನ್ನು ನನ್ನಲ್ಲಿ ಕಳುಹಿಸಿದ್ದರು. ಪ್ರತಿದಿನ ಸಂಜೆ ಶಾಲೆ ಬಿಟ್ಟ ಮೇಲೆ ಒಂದು ಗಂಟೆಯ ಅವಧಿಯಲ್ಲಿ ಮಕ್ಕಳಿಗೆ ನಾಟಕ ಅಭ್ಯಸಿಸುವ ಹೊಣೆಗಾರಿಕೆ ನನ್ನ ಮೇಲಿತ್ತು. ಹೀಗೆ ಅಭ್ಯಾಸ ಆರಂಭಗೊಂಡು ಮೂರು ದಿನ ಕಳೆಯಿತು. ಅಷ್ಟು ಹೊತ್ತಿಗಾಗಲೇ ನಾಟಕಕ್ಕೆಂದು  ಸೇರಿದ್ದ 23 ರ ಪೈಕಿ ನಾಲ್ಕು ಮಕ್ಕಳಿಗೆ ನಾಟಕದ ಬಗ್ಗೆ ಆಸಕ್ತಿ ಕಡಿಮೆಯಾಗಿತ್ತು. ಆದರೆ ಪ್ರತಿದಿನ ನಾಟಕ ಅಭ್ಯಾಸದ ವೇಳೆ ದೂರ ಕುಳಿತಿರುತ್ತಿದ್ದ ಕಮಲ್ (ಹೆಸರು ಬದಲಾಯಿಸಿದ್ದೇನೆ) ಮಾತ್ರ ದಿನದಿಂದ ದಿನಕ್ಕೆ ಹತ್ತಿರ ಹತ್ತಿರ ಬಂದ. ನಾಲ್ಕನೇ ದಿನವಂತೂ ನಾಟಕ ಅಭ್ಯಾಸಕ್ಕೆ ಮೊದಲು ನಾನು ನಡೆಸುತ್ತಿದ್ದ ರಂಗಾಟದಲ್ಲಿ ಭಾಗವಹಿಸಲೂ ಬಂದ. ಆಗ ಕೆಲ ಮಕ್ಕಳು ಹೇಳಿದ ಸಾರ್ ಅವನಿಗೆ ಬುದ್ಧಿ ಸರಿ ಇಲ್ಲ ಎಂಬ ಮಾತು ಕೇಳಿ ನನಗೆ ಒಮ್ಮೆಲೇ ಆಘಾತವಾಯಿತು. ಹೇಳುವುದನ್ನು ಗ್ರಹಿಸುವ ಶಕ್ತಿ ಅವನಿಗೆ ಇದೆ ಎಂಬುದು ನನಗೆ ಅದಾಗಲೇ ಗೊತ್ತಾಗಿತ್ತು. ಅದೆಲ್ಲಾ ಇರಲಿ, ಅವನೂ ಆಡಲಿ ಸೇರಿಸಿಕೊಳ್ಳುವ ಎಂದು ಅವನನ್ನು ಆಟಕ್ಕೆ ಸೇರಿಸಿಕೊಂಡಾಗ ಅವನು ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಅವನು ನೋಡಲು ಎಲ್ಲರಂತಿದ್ದ, ಆದರೆ ಕೇಳುವ ಗ್ರಹಿಕೆ ಶಕ್ತಿ, ಕೇಳಿಸಿದ್ದಕ್ಕೆ ಪ್ರತಿಕ್ರಿಯಿಸುವ ಶಕ್ತಿ ಅವನಲ್ಲಿ ಎಲ್ಲರಷ್ಟಿರಲಿಲ್ಲ ಎನ್ನುವುದನ್ನು ಬಿಟ್ಟರೆ ಅವನು ಎಲ್ಲಾ ಮಕ್ಕಳಂತಿದ್ದ.

ಐದನೇ ದಿನಕ್ಕೆ ಅವನ ಉತ್ಸಾಹ ಇಮ್ಮಡಿಯಾಗಿತ್ತು. ಕೊನೆಗೆ ನಾನೇ ಅವನಲ್ಲಿ ಕೇಳಿದೆ ನಾಟಕಕ್ಕೆ ಸೇರುತ್ತೀಯಾ..? ತಲೆಯಾಡಿಸುತ್ತಲೇ ಹೌದೆಂದ, ಉಳಿದ ಮಕ್ಕಳಲ್ಲಿ ಹಲವರಿಗೆ ಮನಸ್ಸು ಇದ್ದಂತೆ ಕಾಣಲಿಲ್ಲ, ಆದರೂ ಸೇರಿಸಿಕೊಂಡೆ, ಬಳಿಕದ ಎಲ್ಲಾ ದಿನಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡ ಅವನು, ತನ್ನ ಸಾಮರ್ಥ್ಯದ ಮಟ್ಟದಲ್ಲಿ ತನ್ನ ಪಾತ್ರವನ್ನು ರೂಪಿಸಿಕೊಂಡ. ನಾಟಕ ಪ್ರದರ್ಶನದ ದಿನವಂತೂ  ಎಲ್ಲ ಮಕ್ಕಳಿಗಿಂತಲೂ ಹೆಚ್ಚಿನ ಉತ್ಸಾಹ ಕಮಲ್ ಮುಖದಲ್ಲಿ ಕಂಡಿತು. ಬಿಳಿವೇಸ್ಟಿಯ ಕಚ್ಛೆ, ಅವನದ್ದೇ ಅಂಗಿ, ತಲೆಗೊಂದು ಮುಂಡಾಸು ಕಟ್ಟಿ, ಮೇಕಪ್ ಮಾಡಿಸಿಕೊಂಡಿದ್ದ ಕಮಲ್ ಡೋಲು ಹಿಡಿದು ರಂಗದ ಮೇಲೆ ಹೋದಾಗ  ನೆರೆದ ಪ್ರೇಕ್ಷಕರೆಲ್ಲಾ ಅಚ್ಚರಿಪಟ್ಟರು. ಡೋಲು ಬಡಿಯುವ ಪಾತ್ರವನ್ನು ಮನಮುಟ್ಟುವಂತೆ ಅಭಿನಯಿಸಿದ್ದ ಕಮಲ್, ಪೇ..ಪೇ.. ಢುಂ..ಢುಂ ಎನ್ನುವ ಉದ್ಗಾರವನ್ನೂ ಪರಿಣಾಮಕಾರಿಯಾಗಿಯೇ ತೆಗೆದಿದ್ದ. ನಾಟಕದ ಕೊನೆಯಲ್ಲಿ ಪಾತ್ರ ಪರಿಚಯದ ಸಂದರ್ಭ ತನ್ನ ಹೆಸರನ್ನು ಕಮಲ್ ಹೇಳಿಕೊಂಡಾಗ ಪ್ರೇಕ್ಷಕವರ್ಗ ಹಾಕಿದ ಚಪ್ಪಾಳೆ ಹಾಕಿ ಅವನನ್ನು ಅಭಿನಂದಿಸಿತು. ಆಗ ಸಹಪಾಠಿಗಳಿಗೆ ಗೊತ್ತಾಯ್ತು ಗೆಳೆಯ  ಕಮಲ್ ಸಾಮರ್ಥ್ಯ.

ನಾನಂತೂ ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ, ನಾಟಕ ಚೆನ್ನಾಗಿ ಮೂಡಿಬಂದುದಕ್ಕಿಂತ ಹೆಚ್ಚಾಗಿ ಕಮಲ್ ಹೀರೋ ಆದ ಖುಷಿ ನನ್ನಲ್ಲಿತ್ತು.  ಈ ಒಂದು ಸನ್ನಿವೇಶ ಆ ಬಳಿಕ ಕಮಲ್ ಮೇಲೆ ಭಾರೀ ಪ್ರಭಾವ ಬೀರಿತ್ತು. ಅವನ ನಡವಳಿಕೆಯಲ್ಲಿ ಬದಲಾವಣೆ ಬಂತು ಹಾಗೂ ಅವನ್ನು ತಾತ್ಸಾರ ಮನೋಭಾವದಿಂದ ನೋಡುತ್ತಿದ್ದ ಮಕ್ಕಳಿಗೆ ಅವನ ಬಗ್ಗೆ ಅಭಿಮಾನ ಮೂಡಿತ್ತು. ಅಷ್ಟಕ್ಕೆ ನಾಟಕದ ಉದ್ದೇಶ ಯಶ ಕಂಡಿತ್ತು. ಆ ಬಳಿಕ ನಾನು ಆ ಶಾಲೆಗೆ ಹೋದಾಗಲೆಲ್ಲಾ ಅವನೇ ನನ್ನನ್ನು ಸ್ವಾಗತಿಸುತ್ತಿದ್ದ, ಅವ ಕಾಣದಾದಾಗ ನಾನೇ ಕಮಲ್ ಎಲ್ಲಿ ಎಂದು ವಿಚಾರಿಸುತ್ತಿದ್ದೆ.. ಈಗ ಆರೇಳು ವರ್ಷಗಳು ಕಳೆಯಿತು ಕಮಲ್ ಶಾಲೆಯಲ್ಲಿ ಕಾಣಿಸುತ್ತಿಲ್ಲ. ನಾನೂ ಆ ಶಾಲೆಗೆ ಹೋಗುವುದೂ ಕಡಿಮೆಯಾಗಿದೆ, ಎಲ್ಲೇ ಇರಲಿ ಕಮಲ್ ಖುಷಿ-ಖುಷಿಯಾಗಿರಲಿ ಎಂದಷ್ಟೇ ನನ್ನ ಹಾರೈಕೆ.

ಇಂತಹ ವಿವಿಧ ಚಿತ್ರಣಗಳು ನಮ್ಮ ಮುಂದೆ ನಡೆಯುತ್ತಿದೆ. ಹಲವು ಕಡೆಗಳಲ್ಲಿ ಸಹಪಾಠಿ ಗೆಳೆಯರು ವಿಕಲಚೇತನ ಮಕ್ಕಳನ್ನು ಆತ್ಮೀಯತೆಯಿಂದ ನೋಡಿಕೊಳ್ಳುವ ಬಗೆ, ಶಿಕ್ಷಕರು ಅಂತಹಾ ಮಕ್ಕಳೊಂದಿಗೆ ವ್ಯವಹರಿಸುವ ರೀತಿ ಆ ಮಕ್ಕಳ ಬದುಕಿನಲ್ಲಿ ಹೊಸ ಚೈತನ್ಯ ನೀಡುತ್ತಿದೆ ಎಂಬುದು ಸುಳ್ಳಲ್ಲ. ಪುತ್ತೂರಿನ ಶಾಲೆಯೊಂದರ ವಿಕಲಚೇತನ ವಿದ್ಯಾರ್ಥಿನಿಯೊಬ್ಬಳನ್ನು ನಾಟಕಕ್ಕೆ ಸೇರಿಸಿಕೊಂಡಾಗ ನಾನು ಹೇಳಿಕೊಟ್ಟ ಯಾವ ಸಂಙ ಗಳೂ ಅವಳಿಗೆ ಅರ್ಥವಾಗಲಿಲ್ಲ, ಪ್ರತೀ ಪಾಠವನ್ನು ಹೇಳಿಕೊಡುತ್ತಿದ್ದ ಗೆಳತಿಯೇ ಅವಳಿಗೆ ಮನಮುಟ್ಟುವಂತೆ ತಿಳಿಸಿದ್ದಳು. ಅವಳೊಂದಿಗೆ ಅಷ್ಟು ಆತ್ಮೀಯವಾಗಿದ್ದಳು ಆಕೆ. ಎಲ್ಲಾ ಮಕ್ಕಳಂತೆ-ಎಲ್ಲಾ ಮಕ್ಕಳ ನಡುವೆಯೂ ವಿಕಲಚೇತನ ಮಕ್ಕಳು ಶಿಕ್ಷಣ ಪಡೆಯಲು ಅವಕಾಶವಿದೆ. ಅದಕ್ಕೆ ಪೂರಕವಾದ ವಾತಾವರಣವನ್ನು ನಾವೂ-ನೀವೂ ಕಟ್ಟಿಕೊಡೋಣ.. ಏನಂತೀರಿ..?

Mounesh Vishwakarma

ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Share
Published by
Mounesh Vishwakarma

Recent Posts