ಹುಡುಗನ ಊರು ಬಡಗಕಜೆಕಾರು. ಹುಡುಗಿ ಮಡಿಕೇರಿಯವಳು. ಇಬ್ಬರೂ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದರು.
ಇದಕ್ಕೆ ಅವರು ಆಯ್ದುಕೊಂಡದ್ದು ಬಂಟ್ವಾಳ ಉಪನೋಂದಣಿ ಕಚೇರಿ.
ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಮರಳುತ್ತಿದ್ದರು. ಆದರೆ ಹಾಗಾಗಲಿಲ್ಲ. ಕಾರಣ ಇಬ್ಬರ ಧರ್ಮವೂ ಬೇರೆಯಾಗಿತ್ತು.
ಹೀಗಾಗಿ ಈ ಮದುವೆ ಕಾರ್ಯಕ್ರಮ ಮೊದಲ ಘಟ್ಟದಲ್ಲೇ ಜೋಡಿಗೆ ಅಡ್ಡಿ ಉಂಟಾಯಿತು. ಸಂಘಟನೆಯೊಂದರ ಕಾರ್ಯಕರ್ತರು ಸಬ್ ರಿಜಿಸ್ಟ್ರಾರ್ ಕಚೇರಿ ಸುತ್ತ ಜಮಾಯಿಸತೊಡಗಿದಾಗ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಸುದ್ದಿ ಹರಡಲು ಸಮಯ ಬೇಕಾಗಿರಲಿಲ್ಲ.
ಪರಿಸ್ಥಿತಿ ಬದಲಾಗುವ ಲಕ್ಷಣ ತೋರುತ್ತಿದ್ದಂತೆ ಯುವಕ ಸ್ಥಳದಿಂದ ತೆರಳಿದ. ಯುವತಿ ನೋಂದಣಿ ಕಚೇರಿಯೊಳಗೆ ಬಾಕಿಯಾದಳು.
ಈ ಸಂದರ್ಭ ಬಂಟ್ವಾಳ ಪೊಲೀಸರು ಆಗಮಿಸಿದರು. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾಧಿಕಾರಿ ನಂದ ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ಬಂದೋಬಸ್ತ್ ಒದಗಿಸಿದರು.
ಆತಂಕದ ವಿಚಾರ ತಿಳಿದ ಯುವತಿಯ ಸಹೋದರ ಬಿ.ಸಿ.ರೋಡಿಗೆ ಆಗಮಿಸಿದರು. ಪೊಲೀಸರ ಜೊತೆ ಮಾತುಕತೆಯೂ ನಡೆಯಿತು. ತನ್ನ ಸಹೋದರಿ ಮತ್ತು ಯುವಕ ಪರಸ್ಪರ ಇಷ್ಟಪಟ್ಟಿದ್ದಾರೆ, ಮನೆಮಂದಿಯ ಒಪ್ಪಿಗೆಯೂ ಇದೆ ಈ ಹಿನ್ನೆಲೆಯಲ್ಲಿ ಯುವಕನ ಜೊತೆಗೇ ತನ್ನ ಸಹೋದರಿಯನ್ನು ಮದುವೆ ಮಾಡುವುದಾಗಿ ಯುವತಿ ಸಹೋದರನೇ ಪೊಲೀಸರಿಗೆ ತಿಳಿಸಿದರು. ಹೀಗಾಗಿ ನೋಂದಣಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಯುವತಿ ಹಾಗೂ ಆಕೆಯ ಸಹೋದರ ಖಾಸಗಿ ಕಾರಿನಲ್ಲಿ ಮಡಿಕೇರಿಯತ್ತ ಪಯಣಿಸಿದರು. ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸರು ರಕ್ಷಣೆ ಒದಗಿಸಿದರು.