ರಾತ್ರಿಯಂತೂ ಅಘೋಷಿತ ಆಕ್ರಮಣ, ಹಗಲೂ ಹಸಿದ ಶ್ವಾನಗಳು ಕಾಲಿಗೆ ಸುತ್ತಿಕೊಂಡರೆ ಹೇಗೆ?
ರಾತ್ರಿ ಒಂಭತ್ತು ಗಂಟೆಯ ವೇಳೆ ಕಳೆದ ಬಳಿಕ ಬಿ.ಸಿ.ರೋಡ್, ಬಂಟ್ವಾಳ ವ್ಯಾಪ್ತಿಯಲ್ಲೆಲ್ಲಾದರೂ ನಡೆದುಕೊಂಡು ಹೋಗುವಿರಿ ಎಂದಾದರೆ ಸ್ವಲ್ಪ ಎಚ್ಚರವಿರಲಿ, ಕಳ್ಳರ ಆಕ್ರಮಣ ಭೀತಿಯೇನಲ್ಲ, ಪಾದಚಾರಿಗಳಿಗೆ ನಾಯಿಗಳೇ ಶತ್ರುಗಳಾಗುತ್ತವೆ. . ಆದರೆ ಬಿ.ಸಿ.ರೋಡಿನಲ್ಲಿ ಹಗಲೂ ಸುರಕ್ಷಿತವಲ್ಲ!
ಬಿ.ಸಿ.ರೋಡ್ ವ್ಯಾಪ್ತಿಯ ಕೈಕುಂಜೆ, ಮೊಡಂಕಾಪು, ಹೆದ್ದಾರಿ ಬದಿಯಷ್ಟೇ ಅಲ್ಲ, ಬಂಟ್ವಾಳದ ಕೆಲ ಪ್ರದೇಶಗಳಲ್ಲೂ ನಾಯಿಗಳು ರಾತ್ರಿ ಬೀದಿ ಸಂಚರಿಸುತ್ತಾ, ಪಾದಚಾರಿಗಳ ಮೇಲೆ ಕಣ್ಣಿಟ್ಟಿರುತ್ತವೆ. ಕೆಲವೊಮ್ಮೆ ಜನರ ಮೇಲೆರಗುವ ಮಟ್ಟಿಗೂ ಆತಂಕ ಹುಟ್ಟಿಸುತ್ತವೆ. ಆದರೆ ಹಾಡಹಗಲೇ ನಾಯಿಗಳು ದರ್ಬಾರು ಮಾಡುತ್ತಿದ್ದರೆ ಹೇಗೆ?
ಕೆಲವೊಮ್ಮೆ ನಾಯಿಗಳು ಹೇಗಿರುತ್ತವೆ ಎಂದರೆ ಬೀದಿಯಲ್ಲೇ ಗುಂಪುಗೂಡಿ ನಿಂತಿರುತ್ತಾ, ಚರ್ಚೆ ನಡೆಸುತ್ತಿರುವಂತೆ ಕಾಣಿಸುತ್ತವೆ. ರಾತ್ರಿ ಬಸ್ಸಿಗಾಗಿ ಕಾಯುತ್ತಿರುವವರಿಗೆ ತೊಂದರೆಯಾದರೆ, ಹಗಲು ತಾಲೂಕು ಕಚೇರಿಗೆ ಕೆಲಸಕ್ಕೆಂದು ಬರುವವರೂ ನಾಯಿಗಳಿಂದ ತೊಂದರೆ ಅನುಭವಿಸುವಂತಾಗಿದೆ.
ಕಸ ಹುಡುಕಿಕೊಂಡು ಬರುತ್ತವೆ
ಸಾಮಾನ್ಯವಾಗಿ ನಾಯಿಗಳು ಎಲ್ಲಿರುತ್ತವೆ? ಎಲ್ಲಿ ಕಸದ ರಾಶಿಗಳು ಅಧಿಕವಿರುತ್ತವೋ, ಅಲ್ಲೆಲ್ಲಾ ನಾಯಿಗಳು ಬೀಡುಬಿಟ್ಟಿರುತ್ತವೆ. ಹಿಂದೆಲ್ಲ ಕೈಕುಂಜ ಪೂರ್ವ ಬಡಾವಣೆಯತ್ತ ತಿರುಗುವ ಜಾಗದಲ್ಲಿ ಕಸದ ರಾಶಿ ಬೀಳುತ್ತಿತ್ತು. ಇತ್ತೀಚೆಗೆ ಮುನ್ಸಿಪಾಲಿಟಿಯ ಕಾರ್ಯಾಚರಣೆ ಬಳಿಕ ಅಲ್ಲಿ ಕಸ ಬೀಳುವುದು ನಿಂತಿತು. ಇಲ್ಲವಾದರೆ ಆ ಭಾಗದಲ್ಲೆಲ್ಲಾ ನಾಯಿಗಳೇ ತುಂಬಿ ಹೋಗಿದ್ದವು. ಈಗ ಕೆಲ ನಾಯಿಗಳು ಬರುತ್ತವಾದರೂ ಸಂಖ್ಯೆ ಇಳಿಮುಖವಾಗಿದೆ. ಆದರೆ ತಾಲೂಕು ಕಚೇರಿ ಬಳಿ ಹೊಸ ಕಟ್ಟಡ ಕಟ್ಟುವ ಜಾಗದಲ್ಲಿ ಹಲವು ಕಡೆ ತ್ಯಾಜ್ಯಗಳು ರಾಶಿ ಬೀಳುತ್ತವೆ. ಇದನ್ನ ಹುಡುಕಿಕೊಂಡು ಹಗಲು ಹೊತ್ತಿನಲ್ಲೇ ನಾಯಿಗಳು ಬರುತ್ತಿವೆ.
ನಿಯಂತ್ರಣ ಹೇಗೆ?
ಈ ಕುರಿತು ಬಂಟ್ವಾಳನ್ಯೂಸ್ ಜೊತೆ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ಕೆ.ಸುಧಾಕರ್, ನಾಯಿಗಳ ಸಂತಾನಶಕ್ತಿ ನಿಯಂತ್ರಣ ಕೈಗೊಳ್ಳುವ ಮೂಲಕ ಅವುಗಳ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.