ಕಲ್ಲಡ್ಕ

ದೇಶದಲ್ಲಿ ಬದಲಾವಣೆಯ ಪರ್ವ: ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ವೀರಯ್ಯ

bantwalnews.com report

ದೇಶದಲ್ಲಿ ಬದಲಾವಣೆಯ ಪರ್ವ ಕಾಣುತ್ತಿದ್ದು ಜನ ವಾಜಪೇಯಿ ಹಾಗೂ ಮೋದಿಯವರ ಅಭಿವೃದ್ದಿಯ ಆಡಳಿತವನ್ನು ಮೆಲುಕು ಹಾಕುತ್ತಿದ್ದಾರೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಡಿ.ಎಸ್. ವೀರಯ್ಯ ಹೇಳಿದರು.

ಜಾಹೀರಾತು

ಕಲ್ಲಡ್ಕ ಶ್ರೀರಾಮಮಂದಿರದ ಸಭಾಂಗಣದಲ್ಲಿ  ನಡೆದ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯ ಮೊದಲು ಸುದ್ದಿಗೋಷ್ಟಿ ನಡೆಸಿದ ಅವರು, ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಕನಸುಗಳನ್ನು ಅನುಷ್ಠಾನಗೊಳಿಸು ಕಾರ್ಯ ವಾಜಪೇಯಿ ಹಾಗೂ ನರೇಂದ್ರ ಮೋದಿ ಪ್ರಧಾನಿಯಾಗಿದ್ದ ಕಾಲದಲ್ಲಿ ನಡೆದಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದರು.

ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ನಡೆಸಿಕೊಂಡು ಬರುತ್ತಿತ್ತು ಇದರಿಂದಾಗಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಏರ್ಪಟ್ಟಿತ್ತು. ಮೋದಿ ಆಡಳಿತದಲ್ಲಿ ಈ ಅಂತರ ಕಡಿಮೆಯಾಗಿದ್ದು  ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ವರ್ಗದ ಮೆಚ್ಚುಗೆ ಗಳಿಸಲು ಸಾಧ್ಯವಾಗಿದೆ ಎಂದರು.

ಪಕ್ಷದ ಕಾರ್ಯಕ್ರಮ

ಡಾ. ಬಿ.ಆರ್. ಅಂಬೇಡ್ಕರ್ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಬದಲು ಅಂಬೇಡ್ಕರ್ ಅವರನ್ನು ಸೋಲಿಸಲು ಪಣತೊಟ್ಟಿದ್ದಾರೆ. ಅದು ಈಗಲೂ  ಆ ವರ್ಗದ ಜನರಲ್ಲಿ ಬೂದಿ ಮುಚ್ಚಿದ ಕೆಂಡಂದತಿದೆ ಎಂದ ಅವರು ರಾಷ್ಟ್ರನಾಯಕ ಅಂಬೇಡ್ಕರ್ ಅವರ ಜಯಂತಿಯನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸದೇ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿ ಇಡೀ ವರ್ಷ ಆಚರಿಸಿಕೊಂಡು ಬರುತ್ತಿದೆ. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಪಕ್ಷಕ್ಕೆ ಸವಾಲಾಗಿ ಅವರ ಚರಿತ್ರೆಯನ್ನು ಮರುಸ್ಥಾಪಿಸುವಂತಹ ಕಾರ್ಯಕ್ರಮವನ್ನು ಪ್ರಧಾನಿ ಮಾಡುತ್ತಿದ್ದಾರೆ ಎಂದರು. ಬಿಜೆಪಿ ಅಧಿಕಾರದಲ್ಲಿದಾಗ ಮಾಡಿದ ಸಾಧನೆ ಹಾಗೂ ಕಾಂಗ್ರೆಸ್‌ನಿಂದಾದ ನಿರ್ಲಕ್ಷದ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಿ ಕಾಂಗ್ರೆಸ್‌ನ ಮುಖವಾಡ ಕಳಚಿ ಸತ್ಯಸಂಗತಿಯನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಎಷ್ಟು ಬಗೆಹರಿಸಿದ್ದೇನೆ ಎಂಬುದು ಮುಖ್ಯ

ದಲಿತರ ಹಾಡಿಯಲ್ಲಿ ಎಷ್ಟು ಸಲ ಮಲಗಿದ್ದೇನೆ ಎನ್ನುವುದು ಮುಖ್ಯವಲ್ಲ ಬದಲಾಗಿ ಅಲ್ಲಿನ ಸಮಸ್ಯೆಯನ್ನು ಎಷ್ಟು ಬಗೆಹರಿಸಿದ್ದೇನೆ ಎನ್ನುವುದು ಮುಖ್ಯ. ದಲಿತರ ಬಗ್ಗೆ ನಿಜವಾದ ಕಾಳಜಿ ಇರಬೇಕು. ಅಲ್ಲಿಗೆ ಹೋಗಿ ನಾಟಕವಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಜನರು ಈ ನಾಟಕವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಸಚಿವ ಆಂಜನೇಯ ಅವರ ಗ್ರಾಮವಾಸ್ತವ್ಯದ ಬಗ್ಗೆ ಹೇಳಿದರು.

ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನಾಗರಾಜ ಮಲ್ಲಾಡಿ, ಪ್ರಧಾನ ಕಾರ್ಯದರ್ಶಿ ಎಚ್.ಎ. ಆತ್ಮಾನಂದ, ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಬ್ರಿಜೇಶ್ ಚೌಟ ಪ್ರಮುಖರಾದ ಬಿ.ಎಸ್.ವಸಂತ, ವಿನಯ್ ನೇತ್ರಾ, ಭಾಗೀರಥಿ ಮುರಳಿ, ಗಂಗಾಧರ ಮತ್ತಿತರರ ಪ್ರಮುಖರು ಹಾಜರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.