ಬಿ.ಸಿ.ರೋಡಿನ ಕೈಕಂಬ ಮತ್ತು ಬಂಟ್ವಾಳ ಬೈಪಾಸ್ ರಸ್ತೆ ಅಗಲೀಕರಣ, ಬಸ್ ಬೇ ಕೆಲಸ ಮೊದಲು ಮಾಡಿ, ಮತ್ತೆ ಉಳಿದ ಕೆಲಸ ಮಾಡುವಾಗ ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ..
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧಿಕಾರಿಗಳಿಗೆ ಹೊರಡಿಸಿದ ಫರ್ಮಾನು ಇದು.
ಬಿ.ಸಿ.ರೋಡಿನ ಕೈಕಂಬ ಹಾಗೂ ಬಂಟ್ವಾಳ ಬೈಪಾಸ್ ಪರಿಸರದಲ್ಲಿ ಹೆದ್ದಾರಿ ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ರಸ್ತೆಯನ್ನು ಅಗೆದು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಗರಂ ಆದ ಉಸ್ತುವಾರಿ ಸಚಿವ ರಮಾನಾಥ ರೈಯವರು ತಕ್ಷಣ ಈ ರಸ್ತೆಯನ್ನು ಸುಸ್ಥಿತಿಗೆ ತರುವಂತೆ ಹೆದ್ದಾರಿ ಇಲಾಖಾಧಿಕಾರಿಗಳಿಗೆ ತಾಕೀತು ಮಾಡಿದರು.
ಶನಿವಾರ ದ.ಕ.ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸಚಿವ ರಮಾನಾಥ ರೈಯವರು ಈ ನಿರ್ದೇಶನ ನೀಡಿದ್ದು ಸದ್ಯಕ್ಕೆ ಬಂಟ್ವಾಳ ಪೇಟೆ ಮತ್ತು ಒಳರಸ್ತೆಗಳ ಅಗಲೀಕರಣಕ್ಕೆ ಕೈ ಹಾಕದಿರಿ. ಇಲ್ಲಿನ ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈಗಾಗಲೇ ಕೈಗೆತ್ತಿಕೊಳ್ಳಲಾದ ಬಿ.ಸಿ.ರೋಡಿನ ಕೈಕಂಬ ಹಾಗೂ ಬಂಟ್ವಾಳ ಬೈಪಾಸ್ ರಸ್ತೆಯ ಅಗಲೀಕರಣದ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ. ಈ ಭಾಗದಲ್ಲಿ ರಸ್ತೆಯನ್ನು ಅಗೆದು ಹಾಕಿದುದರಿಂದ ಸಾರ್ವಜನಿಕರು ತಮ್ಮನ್ನು ಪ್ರಶ್ನಿಸುತ್ತಿದ್ದಾರೆ. ತಕ್ಷಣ ಈ ರಸ್ತೆಯನ್ನು ಪೂರ್ಣಗೊಳಿಸುವಂತೆ ಅವರು ಸೂಚಿಸಿದರು. ಸಭೆ ಮುಗಿಯುತ್ತಿದ್ದಂತೆ ಮಂಗಳೂರು ಸಹಾಯಕ ಕಮಿಷನರ್ ರೇಣುಕಾಪ್ರಸಾದ್ ಹಾಗೂ ಹೆದ್ದಾರಿ ಇಲಾಖಾಧಿಕಾರಿಗಳು ಬಂಟ್ವಾಳ ಬೈಪಾಸನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭ ಹೆದ್ದಾರಿ ಇಲಾಖಾಧಿಕಾರಿಗಳಾದ ಅಬ್ದುಲ್ ರಹಿಮಾನ್, ರಮೇಶ್, ಕೇಶವ ಮೂರ್ತಿ ಹಾಗೂ ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಉಮೇಶ್ ಭಟ್‍ರವರು ಉಪಸ್ಥಿತರಿದ್ದು ಮಾಹಿತಿ ನೀಡಿದರು. ಕೈಕಂಬದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಹೆದ್ದಾರಿ ಇಲಾಖೆ ಅಗೆದು ಹಾಕಿ ತಿಂಗಳು ಕಳೆದರೂ ಇದನ್ನು ಸುಸ್ಥಿತಿಗೆ ತಾರದಿರುವುದರಿಂದ ಸಾಮಾನ್ಯರು ತೊಂದರೆಯನ್ನು ಅನುಭವಿಸುತ್ತಿದ್ದು ಕಳೆದ ವಾರ ಇಲ್ಲಿನ ಸಾರ್ವಜನಿಕರು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಜಗದೀಶ್, ಸಹಾಯಕ ಕಮೀಷನರ್ ರೇಣುಕಾಪ್ರಸಾದ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ. ಮುಖ್ಯಾಧಿಕಾರಿ ಸುಧಾಕರ್ ಹಾಗೂ ಹೆದ್ದಾರಿ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಬಂಟ್ವಾಳ ಮತ್ತು ಬಿ.ಸಿ.ರೋಡಿನ ರಸ್ತೆಯನ್ನು ಅಗಲೀಕರಣಗೊಳಿಸುವುದು, ಪಾರ್ಕಿಂಗ್, ಬಸ್‍ಬೇ ನಿರ್ಮಾಣ ಕುರಿತಂತೆ ಜಿಲ್ಲಾಧಿಕಾರಿ ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ 2 ಸಭೆಗಳನ್ನು ನಡೆಸಿದ್ದರು.
ಮಂಗಳವಾರ ಜಿಲ್ಲಾಧಿಕಾರಿಯವರು ತಮ್ಮ ಕಚೇರಿಯಲ್ಲೇ ಸಚಿವರ ಉಪಸ್ಥಿತಿಯಲ್ಲಿ ಮೂರನೇ ಸಭೆಯನ್ನು ನಡೆಸಿದ್ದಾರೆ. ಹೆದ್ದಾರಿ ಹಾಗೂ ವಿವಿಧ ಇಲಾಖೆಯ ನಡುವಿನ ಸಮನ್ವಯತೆಯ ಕೊರತೆಯಿಂದ ಸಭೆಯಲ್ಲಾದ ಯಾವುದೇ ತೀರ್ಮಾನಗಳು ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಗತವಾಗಿಲ್ಲ.
ಈ ನಡುವೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೊನೆಗೂ ಹೆದ್ದಾರಿ ಇಲಾಖೆಗೆ ಬಿಸಿಮುಟ್ಟಿದ್ದು, ಸುರತ್ಕಲ್ ಬಿ.ಸಿ.ರೋಡು ಚತುಷ್ಪಥ ರಸ್ತೆಯ ಬಿ.ಸಿ.ರೋಡು ಮೇಲ್ಸೇತುವೆಯ ಇಕ್ಕೆಲಗಳಲ್ಲಿ ಕಟ್ಟಡ ತೆರವಿಗೆ ದಿನಗಣನೆ ಆರಂಭವಾಗಿದೆ.
ಬುಧವಾರ ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಸಂಸದರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಾದ ಬೆನ್ನಲ್ಲೇ ಗುರುವಾರ ಬಿ.ಸಿ.ರೋಡಿಗೆ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಅಜಿತ್ ನೇತೃತ್ವದ ಅಧಿಕಾರಿಗಳ ತಂಡ ಈಗಾಗಲೇ ಪರಿಹಾರ ನೀಡಿಸ್ವಾಧೀನ ಪಡಿಸಿಕೊಂಡಿರುವ ಸ್ಥಳಗಳ ಮಾರ್ಕಿಂಗ್ ನಡೆಸಿದರು.
ಸೋಮವಾರ (ದ.26)ದಂದು ವರ್ಷಗಳ ಹಿಂದೆಯೇ ಸ್ವಾಧೀನ ಪಡಿಸಿಕೊಂಡಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ಪೊಲೀಸ್ ಇಲಾಖೆ, ಸಹಾಯಕ ಆಯುಕ್ತರು ಹಾಗೂ ಹೆದ್ದಾರಿ ಇಲಾಖೆಯ ಸಹಯೋಗದಲ್ಲಿ ನಡೆಯಲಿದೆ ಎಂದು ಅಜಿತ್ ತಿಳಿಸಿದರು.