ಶ್ರೀರಾಮಚಂದ್ರಾಪುರ ಮಠಾಧೀಶರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ಹಮ್ಮಿಕೊಂಡ ಮಂಗಲಗೋಯಾತ್ರೆ ಉತ್ಸವವಲ್ಲ, ಅದು ಆಂದೋಲನ ಸ್ವರೂಪವನ್ನು ಪಡೆಯಬೇಕು ಎಂಬ ಸಂದೇಶ ನೀಡಿದ್ದಾರೆ. ಈ ಆಂದೋಲನದ ಮೂಲಕ ಸರಕಾರಗಳಿಗೆ ಎಚ್ಚರವಾಗಬೇಕು ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಶ್ರೀರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ಆಯೋಜಿಸಲಾಗಿರುವ ಮಂಗಲಗೋಯಾತ್ರೆಯ ಸಮಾರೋಪ ಮಹಾಮಂಗಲ ಸಮಾರಂಭವು ಮಂಗಳೂರಿನ ಕೂಳೂರಿನಲ್ಲಿ ಜ.27,28,29ರಂದು ನಡೆಯಲಿದ್ದು ಅದರ ಅಂಗವಾಗಿ ಶನಿವಾರ ಬಿ.ಸಿ.ರೋಡಿನ ನವನೀತ ಶಿಶುಮಂದಿರದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಆಶೀರ್ವಚನ ನೀಡಿದರು.
ಉತ್ತರಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರ ಗುರೂಜಿ ಅವರು ಆಶೀರ್ವಚನ ನೀಡಿ ಈ ಕಾರ್ಯಕ್ರಮದ ಯಶಸ್ಸಿಗೆ ಮಕ್ಕಳು, ಮಹಿಳೆಯರು ಕಾರ್ಯತತ್ಪರರಾಗಬೇಕು ಎಂದು ಹೇಳಿದರು.
ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಮಾತನಾಡಿ ಈ ಸಮಾರಂಭ ಸಮಾಜದ ಒಳಿತಿಗಾಗಿರುವುದು. ಗೋವಿನ ಉಳಿವು ದೇಶದ ಉಳಿವು. ಜನವರಿ 27,28,29ರಂದು ನಡೆಯುವ ಕಾರ್ಯಕ್ರಮದಲ್ಲಿ ಸಂತರು ಮತ್ತು ಗೋಭಕ್ತರನ್ನು ಸೇರಿಸುವುದೇ ಉದ್ದೇಶವಲ್ಲ. ಗೋವಿನ ಸಂರಕ್ಷಣೆಗೆ ಶಪಥ, ಪ್ರತಿಜ್ಞೆ ಮಾಡಬೇಕು. ತಾಲೂಕು ಕೇಂದ್ರಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಅರಿವು ಉಂಟುಮಾಡಬೇಕು ಎಂದು ಹೇಳಿದರು.
ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಿ, ಮಾತನಾಡಿ ಸಮಾಜದ ಒಳಿತಿಗಾಗಿ ಆಯೋಜಿಸಿದ ಈ ಕಾರ್ಯ ಧರ್ಮದ ಕಾರ್ಯ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು. ಇದೇ ಸಂದರ್ಭ ಮಹಾಮಂಡಲ ಮುಷ್ಟಿಭಿಕ್ಷೆ ಪ್ರಧಾನ ಮಲ್ಲಿಕಾ ಜಿ.ಭಟ್ ಅವರು ಅಕ್ಷತಾ ಅಭಿಯಾನದ ಮೂಲಕ ಸುಲೋಚನಾ ಜಿ.ಕೆ.ಭಟ್ ಅವರನ್ನು ಸಾಂಕೇತಿಕವಾಗಿ ಆಹ್ವಾನಿಸಿ, ಚಾಲನೆ ನೀಡಿದರು.
ಜಿಲ್ಲಾ ಸಂಯೋಜಕ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಸಂಘ ಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಪುತ್ತೂರು ತಾಲೂಕು ಸಂಯೋಜಕ ಅರುಣ್ ಕುಮಾರ್ ಪುತ್ತಿಲ, ಸುಲೋಚನಾ ಜಿ.ಕೆ.ಭಟ್, ಶೈಲಜಾ ಕೆ.ಟಿ.ಭಟ್, ಟಿ.ಜಿ.ರಾಜಾರಾಮ ಭಟ್, ನ್ಯಾಯವಾದಿ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ವ್ಯಾಪ್ತಿಯ ಸಮಿತಿಯನ್ನು ರಚಿಸಲಾಯಿತು. ಅಕ್ಷತಾ ಆಭಿಯಾನವನ್ನುಎಲ್ಲೆಡೆ ಆಯೋಜಿಸುವ ಬಗ್ಗೆ ತಂಡಗಳನ್ನು ರಚಿಸಲು ಮಾರ್ಗದರ್ಶನ ಮಾಡಲಾಯಿತು.
ಕಾಡೂರು ರಾಜಾರಾಮ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.