ತುಳು ಭಾಷೆಗೂ ಲಿಪಿ ಇದೆ ಎನ್ನುವುದಕ್ಕೆ ತುಳುವಿನಲ್ಲಿ ರಚನೆಗೊಂಡಿರುವ ಪ್ರಾಚೀನ ಗ್ರಂಥಗಳೇ ಸಾಕ್ಷಿ. ಯಾವುದೇ ಭಾಷೆಯ ಅಳಿವು–ಉಳಿವು ಆ ಭಾಷೆಯನ್ನಾಡುವ ಜನರನ್ನು ಅವಲಂಬಿಸಿದೆ..ತುಳು ಲಿಪಿ ಕಲಿಕಾ ಕಾರ್ಯಾಗಾರದಲ್ಲಿ ಕಾಲೇಜು ವಿದ್ಯಾರ್ಥಿಗಳು ತೋರಿಸಿರುವ ಉತ್ಸಾಹ ಮೆಚ್ಚತಕ್ಕದ್ದಾಗಿದೆ ಎಂದು ತುಳು ಲಿಪಿ ಕಲಿಕಾ ಶಿಕ್ಷಕ ಬಿ.ತಮ್ಮಯ ಅಭಿಪ್ರಾಯಪಟ್ಟರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ತುಳು ಲಿಪಿ ಕಲಿಕಾ ಕಾರ್ಯಾಗಾರದ ಸಮಾರೋಪ ಸಮಾರಂಭ ಹಾಗೂ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಭಾಷೆಯನ್ನು ಕಲಿಯುವುದು ಒಂದು ಕಲೆ. ಕಲಿಯುವ ಆಸಕ್ತಿ , ಶ್ರದ್ಧೆ ಇದ್ದರೆ ಯಾವ ಭಾಷೆಯ ಕಲಿಕೆಯೂ ತೊಡಕಾಗಿ ಪರಿಣಮಿಸುವುದಿಲ್ಲ. ಹೆಚ್ಚು ಭಾಷೆಯನ್ನು ಕಲಿಯುವ ಮೂಲಕ ಜಗತ್ತಿನ ಜ್ಞಾನವನ್ನು ಪಡೆಯಲು ಸಹಾಯಕವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ.ಕೆ., ಅಧ್ಯಕ್ಷತೆ ವಹಿಸಿದ್ದರು. ತುಳು ಕಲಿಕೆ ಕಾರ್ಯಾಗಾರವು ಯಶಸ್ವಿಯಾಗಿ ನಡೆದಿದೆ. ಭಾಷೆಯ ಕಲಿಕೆಯು ನಮ್ಮ ಅಭಿರುಚಿ, ಶ್ರದ್ದೆಯನ್ನು ಅವಲಂಬಿಸಿರುತ್ತದೆ ಎಂದರು.
ತುಳು ಲಿಪಿ ಕಲಿಕಾ ಕಾರ್ಯಾಗಾರದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಶ್ರುತಿ ಗಟ್ಟಿ, ದಿವ್ಯಾಲಕ್ಷ್ಮಿ, ಅನಿತಾ ಜೇಕಬ್, ಶಿವಪ್ರಸಾದ್ ಉಪಸ್ಥಿತರಿದ್ದರು. ತುಳು ಲಿಪಿ ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ತುಳು ಲಿಪಿ ಕಲಿಕಾ ಕಾರ್ಯಾಗಾರದ ಸಂಯೋಜಕ ಚೇತನ್ ಮುಂಡಾಜೆ ಕಾರ್ಯಾಗಾರದ ಒಟ್ಟು ಸ್ವರೂಪ, ಯಶಸ್ಸಿನ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ಧನ್ಯವಾದ ಸಲ್ಲಿಸಿದರು.ಕನ್ನಡ ಉಪನ್ಯಾಸಕಿ ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು.