ಒಂದು ವಾರದೊಳಗೆ ಕೆಲಸ ಮಾಡಿ…ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಜಗದೀಶ್, ನವೆಂಬರ್ ತಿಂಗಳಲ್ಲಿ ಬಂಟ್ವಾಳ ಪುರಸಭೆಯಲ್ಲಿ ಕರೆದ ಮೀಟಿಂಗ್ ನಲ್ಲಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಾ ಹೇಳುತ್ತಿದ್ದುದು ಇದು.
ಬಂಟ್ವಾಳ ರಸ್ತೆ ಅಗಲಗೊಳಿಸುವ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ, ವಾರದೊಳಗೆ ನನಗೆ ರಿಪೋರ್ಟ್ ನೀಡಿ, ಬಿ.ಸಿ.ರೋಡ್ ಪಾರ್ಕಿಂಗ್ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ, ವಾರದೊಳಗೆ ರಿಪೋರ್ಟ್ ನೀಡಿ….
ಹೀಗೆ ನವೆಂಬರ್ ತಿಂಗಳ ಆರಂಭದಲ್ಲಿ ಕರೆದ ಮೀಟಿಂಗ್ ನಲ್ಲಿ ಜಿಲ್ಲಾಧಿಕಾರಿ ಸೂಚಿಸಿದ್ದು ಕಾರ್ಯಗತವಾಗದಿದ್ದಾಗ ಅಧಿಕಾರಿಗಳಿಗೆ ನೀಡುತ್ತಿದ್ದ ಸೂಚನೆ ಪರಿ ಇದು.
ಆದರೆ ಮೂರು ವಾರಗಳು ಕಳೆದವು. ಕೆಲಸ ಏನಾಯಿತು?
ಒಂದೂವರೆ ತಿಂಗಳ ಹಿಂದೆ ಆರಂಭಗೊಂಡ ಬಂಟ್ವಾಳ ಪುರಸಭಾ ವ್ಯಾಪ್ತಿಯ ಅವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ.
ಈಗಾಗಲೇ ಬಂಟ್ವಾಳ ಪೇಟೆ ಅಗಲಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿ ಇಂಜಿನಿಯರುಗಳು ಕಾರ್ಯಪ್ರವೃತ್ತರಾಗಿದ್ದರೆ, ಬಿ.ಸಿ.ರೋಡಿನ ಕೈಕಂಬದಲ್ಲಿರುವ ಬಸ್ ಬೇ ಆರಂಭದಲ್ಲಿ ಭಾರೀ ವೇಗದಲ್ಲಿ ಸಾಗಿದ್ದರೂ ಬಳಿಕ ಇಲಾಖೆಗಳ ಹೊಂದಾಣಿಕೆ ಕೊರತೆಯಿಂದಾಗಿ ಅರ್ಧಕ್ಕೆ ನಿಂತಿತ್ತು. ಕಳೆದ ವಾದ ಕೈಕಂಬದಲ್ಲಿ ಈ ಕುರಿತು ನಾಗರಿಕರು ಪ್ರತಿಭಟನೆ ನಡೆಸಿ ಆಡಳಿತವನ್ನು ಎಚ್ಚರಿಸಿದರು. ಬಿ.ಸಿ.ರೋಡಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಕೈಕುಂಜೆ ರಸ್ತೆಯಲ್ಲಿ ಮಾರ್ಕಿಂಗ್ ಮಾಡಲಾಗಿದ್ದು, ಮುಂದಿನ ಹಂತದ ಪ್ರಕ್ರಿಯೆಗಾಗಿ ಜಿಲ್ಲಾಡಳಿತದ ಅನುಮತಿಯನ್ನು ಕೋರಲಾಗಿದೆ.
ಬಿ.ಸಿ.ರೋಡಿನ ಕೆಲವೆಡೆ ಶುಕ್ರವಾರವೂ ರಾ.ಹೆ.ಪ್ರಾಧಿಕಾರ ಎಂಜಿನಿಯರ್ ಅಜಿತ್, ಸರ್ವೇಯರುಗಳಾದ ಯಶವಂತ, ಲೋಹಿತ್, ಕಂದಾಯ, ಪುರಸಭೆ ಇಲಾಖೆ ಸಿಬ್ಬಂದಿಗಳಾದ ಯೋಗಾನಂಧ, ಶಿವ ನಾಯ್ಕ, ಪುರುಷೋತ್ತಮ, ಸದಾಶಿವ ಕೈಕಂಬ ಮೊದಲಾದವರು ಅಳತೆ, ಗುರುತು ಮಾಡುವ ಕಾರ್ಯವನ್ನು ನಡೆಸಿದ್ದಾರೆ.
ಅಭಿವೃದ್ಧಿ ಸಂದರ್ಭ ಕೆಲ ಸಮಸ್ಯೆಗಳು ಉಂಟಾಗುವುದು ಸಹಜ. ಎಲ್ಲರನ್ನೂ ಸಮಾಧಾನಿಸಿ, ಒಗ್ಗೂಡಿಸಿ ಕಾರ್ಯಗತಗೊಳಿಸುವ ಸವಾಲು ಅಧಿಕಾರಿಗಳ ಕೈಯಲ್ಲಿದೆ. ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರೂ ಇದರಲ್ಲಿ ನನ್ನ ಹಸ್ತಕ್ಷೇಪ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಗ ಬಿ.ಸಿ.ರೋಡಿನ ಜನರಲ್ಲಿ ಒಂದು ಸಂದೇಹ. ಜಿಲ್ಲಾಧಿಕಾರಿ ಅಂದು ಹೇಳಿದ್ದು ಕಾರ್ಯಗತವಾಗುತ್ತಾ?