ಗಿರಿಲಹರಿ

ಚೆಂಡುದಾಂಡು ವೀಕ್ಷಕ ವಿವರಣೆ

ಚೆಂಡುದಾಂಡು ಆಟ ಗೊತ್ತಲ್ಲ, ಆಂಗ್ಲ ಭಾಷೆಯಲ್ಲಿ ಕ್ರಿಕೆಟ್.  ಇದರ  ವೀಕ್ಷಕ ವಿವರಣೆ ಕನ್ನಡದಲ್ಲಿ ಹೇಗೆ ಹೇಳಬಹುದು? ಇಲ್ಲಿದೆ ಸ್ವಾರಸ್ಯಕರ ವಿವರಣೆ

  • ಡಾ. ಅಜಕ್ಕಳ ಗಿರೀಶ ಭಟ್

www.bantwalnews.com ಅಂಕಣಗಿರಿಲಹರಿ

ಇಂದು ಚೆಂಡುದಾಂಡು ಆಟದ ಬಗ್ಗೆ ಗೊತ್ತಿಲ್ಲದ ಮಕ್ಕಳು ಯಾರಿದ್ದಾರೆ? ಧೋನಿ, ಕೋಹ್ಲಿಅಂತ ಅಂದರೆ ಯಾರು ಅಂತ ಒಂದನೇ ತರಗತಿ ಮಗು ಕೂಡ ಹೇಳಬಹುದು.

ಚೆಂಡುದಾಂಡು ಆಟದ ವೀಕ್ಷಕ ವಿವರಣೆಯನ್ನು ಕನ್ನಡದಲ್ಲಿ ಹೇಳುವ ಚಟ ನನಗೆ ಮತ್ತು ನನ್ನ ಕೆಲವು ಗೆಳೆಯರಿಗೆ ಇತ್ತು. ನಿಜವಾಗಿ ನನಗೆ ಆಕಾಶವಾಣಿಯಲ್ಲಿ ಈ ಆಟದ ವೀಕ್ಷಕ ವಿವರಣೆಗಾರನಾಗಿ ಬದುಕು ಕಟ್ಟಬೇಕೆಂಬ ಆಸೆಯಿತ್ತು!!

ಸ್ನಾತಕೋತ್ತರ ಪದವಿ ಆಗುವ ಆಸುಪಾಸಿನಲ್ಲಿರಬಹುದು – ಸರಿಯಾಗಿ ನೆನಪಿಲ್ಲ , ಅರ್ಜಿಯೂ ಹಾಕಿದ್ದೆ. ಕರೆ ಬಂತು- ಬೆಂಗಳೂರಿನಲ್ಲಿ ಜಮ್ಮು ಕಾಶ್ಮೀರ-ಕರ್ನಾಟಕ ರಣಜಿ ಪಂದ್ಯದ ವೀಕ್ಷಕ ವಿವರಣೆ ಹೇಳುವುದೇ ಆಯ್ಕೆಯ ಪರೀಕ್ಷೆ. ಅದು ಮಾತ್ರ ಆಂಗ್ಲ. ನನಗೆ ಧೈರ್ಯ ಬರಲಿಲ್ಲ , ಬೆಂಗಳೂರಿಗೆ ಹೋಗಲೂ ಇಲ್ಲ. ಕನ್ನಡದ್ದಾದರೆ ಹೋಗುತ್ತಿದ್ದೆ.

ಆದರೆ ಊರಲ್ಲಿ ಈ ಆಸೆಯನ್ನು ನೆರವೇರಿಸಲು ಅವಕಾಶವಿತ್ತು. ಊರೂರುಗಳಲ್ಲಿ ಆಗುತ್ತಿದ್ದ ಕೆಳಗೈ ಎಸೆತದ, ಬೆಳಗಿಂದ ಸಂಜೆವರೆಗೆ ಆಗಿ ಮುಗಿಯುತ್ತಿದ್ದ ಇಂಥ ಕೂಟಗಳಲ್ಲಿ ನಾವು ವೀಕ್ಷಕ ವಿವರಣೆ ಹೇಳುವುದಿತ್ತು. ಮೈದಾನದ ಬದಿಯಲ್ಲಿರುತ್ತಿದ್ದ ಮರಕ್ಕೆ ಕಟ್ಟುತ್ತಿದ್ದ ಗಂಟೆಯಂಥ ಧ್ವನಿವರ್ಧಕದಲ್ಲಿ ಅದು ಬಿತ್ತರವಾಗಿ ಊರಿಡೀ ಕೇಳುತ್ತಿತ್ತು. ಗೂಟರಕ್ಷಕ ಎಂಬ ಪದವನ್ನು ಮಾತ್ರ ನಾನು ಬಳಸುತ್ತಿರಲಿಲ್ಲ. ಯಾಕೆಂದರೆ ಅವನು ಗೂಟ ಬೀಳಿಸುವುದೇ ಹೆಚ್ಚು. ಬೀಳಿಸಿ ಬೀಳಿಸಿ ಕೊನೆಕೊನೆಗೆ ನಮ್ಮ ಗಾರುಗಟ್ಟಿದ ಮೈದಾನಗಳಲ್ಲಿ ಗೂಟಗಳ ಗುಂಡಿ ಅಗಲವಾಗಿ ಅದನ್ನು ಮತ್ತೆ ನಿಲ್ಲಿಸುವುದೇ ತೀರ್ಪುಗಾರರಿಗೆ ದೊಡ್ಡ ಸವಾಲಾಗುತ್ತಿತ್ತು. ನಿಜವಾಗಿ ಗೂಟ ರಕ್ಷಕನಾಗಬೇಕಾದದ್ದು ದಾಂಡಿಗನೇ. ಹೀಗಾಗಿ ಗೂಟರಕ್ಷಕ ಎಂಬ ಬದಲು ಎಸೆತರಕ್ಷಕ ಅಂತ ನಾನು ಹೇಳುತ್ತಿದ್ದೆ.

ಅಂಥ ಕನ್ನಡ ವೀಕ್ಷಕ ವಿವರಣೆ ತುಂಬ ತಮಾಷೆಯಾಗಿರುತ್ತಿತ್ತು. ಒಂದು ಮಾದರಿ ಇಲ್ಲಿದೆ: ” ತೆಂಗಿನ ಮರದ ತುದಿಯಿಂದ ಬಲಗೈ ವೇಗದ ಎಸೆತಗಾರ ಶಂಭಣ್ಣ ಅವರು ಗೂಟಗಳನ್ನು ಬಳಸಿ ಬಂದು ಚೆಂಡು ಬಿಟ್ಟಿದ್ದಾರೆ.  ಚೆಂಡು ದಾಂಡಿಗರಾದ ಮಾಲಿಂಗರ ದಾಂಡಿನ ಒಳಅಂಚಿಗೆ ಬಡಿದು ನೇರವಾಗಿ ಉದ್ದಕಾಲಿನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿರುವ ಗೋವಿಂದಣ್ಣನ ಬಳಿಬಂದಿದೆ. ಅವರು ಪರಡಿದ್ದರಿಂದ ಒಂದು ಓಟ ಸಿಗುವಲ್ಲಿ ಮಾಲಿಂಗರಿಗೆ ಎರಡು ಓಟಗಳು ದಕ್ಕಿವೆ. ಈಗ ಈ ಆರೆಸೆತದ ಎರಡನೇ ಎಸೆತಕ್ಕಾಗಿ ಶಂಭಣ್ಣ ಅವರು ವೇಗವಾಗಿ ಗೂಟಗಳ ಹೊರಗಿನಿಂದ ಬಂದು ಚೆಂಡು ಬಿಟ್ಟಿದ್ದಾರೆ. ಅದು ದಾಂಡಿಗನ ಬಳಿಯ ಆಚೆಗೂಟದಿಂದ ತುಂಬ ದೂರದಲ್ಲಿ ಹೋದದ್ದರಿಂದ ತೀರ್ಪುಗಾರರು ಅಗಲ ಎಸೆತ ಅಂತ ಕೈಗಳನ್ನು ಅಗಲಿಸಿ ಸೂಚಿಸಿದ್ದಾರೆ. ಓ! ಈ ಅಗಲ ಎಸೆತ ಎಸೆತರಕ್ಷಕನ ಕೈಗೂ ಸಿಗದೆ ಹಿಂದೆ ಓಡುತ್ತಿದೆ. ಮೂರನೆಯವನ ಜಾಗದಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಈಶ್ವರಣ್ಣ ಚೆಂಡನ್ನು ತಡೆಯಲು ಓಡುತ್ತಿದ್ದಾರೆ. ಹೋ! ಅವರ ಕೈಗೂ ಸಿಗದೆ ಚೆಂಡು ಸೀಮಾರೇಖೆಯನ್ನು ದಾಟಿದೆ. ಆದರೆ ಚೆಂಡು ಹಿಂಬದಿಯ ಬಲ್ಲೆಗೆ ಹೋದುದರಿಂದ ಎಲ್ಲ ಕ್ಷೇತ್ರರಕ್ಷಕರೂ ಚೆಂಡು ಹುಡುಕಲು ಹೋಗುತ್ತಿದ್ದಾರೆ. ಅಂತೂ ನಾಲ್ಕು ಹಿಂದೋಟಗಳು ದಾಂಡು ತಂಡಕ್ಕೆ!

ಈಗ ಒಂದು ಪ್ರಕಟಣೆ: ಮೈದಾನದ ತೆಕ್ಕಿನ ಮರದ ತುದಿಯಲ್ಲಿ ಬಾಬಣ್ಣನವರು ಬಚ್ಚಂಗಾಯಿಯನ್ನು ತುಂಡು ಮಾಡಿ ತುಂಡಿಗೆ ನಾಕಾಣೆಯಂತೆ ಮಾರುತ್ತಿದ್ದಾರೆ. ಬಾಯಾರಿದವರು ಅತ್ತ ಹೋಗಬಹುದು. ಹಾಂ! ಬಹುಶಃ ಚೆಂಡು ಚಾಮಣ್ಣನವರ ಕಣ್ಣಿಗೆ ಬಿದ್ದಿದೆ. ಅವರು ಬಗ್ಗಿ ಪುದೆಲಿನ ಎಡೆಗೆ ಕೈ ಹಾಕುತ್ತಿದ್ದಾರೆ. ಈಗ ಮತ್ತೆ ಚೆಂಡು ಶಂಭಣ್ಣನ ಕೈಗೆ ಬಂದಿದೆ. ಶಂಭಣ್ಣ ತಮ್ಮ ಕಂಬಾಯಿಗೆ ಚೆಂಡನ್ನು ಉಜ್ಜಿಕೊಂಡು ಮತ್ತೆ ತಮ್ಮ ಎಸೆತಾರಂಭ ಗುರುತಿನ ಕಡೆ ಹೋಗುತ್ತಿದ್ದಾರೆ. ಶಂಭಣ್ಣ ಈಗ ನಾಯಕನ ಜೊತೆ ಸಮಾಲೋಚನೆ ಮಾಡುತ್ತಿದ್ದಾರೆ. ಬಹುಶಃ ಗೂಟಗಳನ್ನು ಬಳಸಿ ಬರಬೇಕೇ ಹೊರಗಿಂದಬಂದು ಚೆಂಡು ಬಿಡಬೇಕೇ ಎಂಬ ಗೊಂದಲದಲ್ಲಿ ಅವರು ಇದ್ದಂತೆ ಕಾಣುತ್ತದೆ. ಹೌದು. ಮತ್ತೆಗೂಟವನ್ನುಬಳಸಿಬರಲು ತೀರ್ಮಾನಿಸಿದ್ದಾರೆ. ಒಡಿಹೋಗಿಬಿಟ್ಟಿದ್ದಾರೆ. ಚೆಂಡು ದಾಂಡಿಗ ಮಾಲಿಂಗರ ತೊಡೆಗೆ ಬಡಿದಿದೆ.ಎಸೆತಗಾರ ಹಾಗೂ ಎಸೆತರಕ್ಷಕ ಮತ್ತು ಕ್ಷೆತ್ರರಕ್ಷಕರೆಲ್ಲಾ ಒಕ್ಕೊರಲಿಂದ ಗೂಟದೆದುರು ಕಾಲು ಎಂದು ಮನವಿ ಮಾಡುತ್ತಿದ್ದಾರೆ. ತೀರ್ಪುಗಾರರನ್ನು ಅವರೆಲ್ಲಾ ಸುತ್ತುವರಿದಿರುವುದರಿಂದ ನಮಗೆ ತೀರ್ಪುಗಾರರು ಮತ್ತು ಅವರ ತೀರ್ಪು ಕಾಣುತ್ತಿಲ್ಲ. ದಯವಿಟ್ಟು ಸಂಘಟಕರಾದ ಗೋಪಾಲಣ್ಣ ಮತ್ತು ಗಣೇಶಣ್ಣ ಕೂಡಲೇ ಅಲ್ಲಿಗೆ ಹೋಗಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ ಅಂತ ಎಲ್ಲ ಆಟಗಾರರೂ ಗಮನಿಸಬೇಕು…..”

ಚೆಂಡುದಾಂಡು ಆಟದ ಬಗ್ಗೆ ಗೊತ್ತಿರುವವರು ಮೇಲೆ ಹೇಳಿದ ವೀಕ್ಷಕ ವಿವರಣೆಯನ್ನು “ಇಂದಿನ ಕನ್ನಡ”ಕ್ಕೆ ಅನುವಾದ ಮಾಡಿಕೊಳ್ಳಬಲ್ಲರು.

 

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com

 

Dr. Ajakkala Girish Bhat

ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Share
Published by
Dr. Ajakkala Girish Bhat

Recent Posts