ಕವರ್ ಸ್ಟೋರಿ

ತುಂಬೆ ನೀರು, ಸಮಸ್ಯೆ ನೂರು

  • 477.61 ಎಕರೆ ಜಮೀನು ಮುಳುಗಡೆ ಎನ್ನುವ ಅಧಿಕಾರಿಗಳು
  • ಜಮೀನು ಲೆಕ್ಕವೇ ಬೇರೆ, ಸರಿಯಾದ ಸರ್ವೇ ನಡೆದಿಲ್ಲ ಎನ್ನುವ ರೈತರು
  • ಎಲ್ಲರಿಗೂ ಪರಿಹಾರ ಕೊಡದೆ ಅಣೆಕಟ್ಟು ಎತ್ತರಿಸಿದ್ದಕ್ಕೆ ಆಕ್ಷೇಪ
  • ಹೈಕೋರ್ಟ್ ಮೊರೆ ಹೋಗಲಿದ್ದಾರೆ ಸಂತ್ರಸ್ತ ರೈತರು
  • ಪ್ಲ್ಯಾನ್ ಮಾಡುವಾಗಲೇ ಸರಿಯಾಗಿ ಮಾಡಬೇಕಿತ್ತು ಎಂದ ಸಚಿವ ರೈ
  • ಸದ್ಯಕ್ಕೆ 5 ಮೀಟರ್ ಪ್ರದೇಶ ಮುಳುಗಡೆ ಸಂತ್ರಸ್ತರಿಗಷ್ಟೇ ಬೆನಿಫಿಟ್
  • ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ರಮಾನಾಥ ರೈ ಅಭಯ
  • ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಪ್ರಧಾನಿಗೆ ಪತ್ರ

bantwalnews.com cover story

pic… Kishore peraje

ಅಂತೂ ಇಂತೂ ನೇತ್ರಾವತಿ ನದಿಗೆ ‘ಬಾಗಿನ’ ಅರ್ಪಿಸಿ ಆಗಿದೆ. ಇದೇ ವೇಳೆ ತುಂಬೆ ಅಣೆಕಟ್ಟು ಪ್ರದೇಶದಲ್ಲಿ 5 ಮೀಟರ್ ಎತ್ತರಕ್ಕೆ ನೀರು ಸಂಗ್ರಹಿಸುವ ಕಾರ್ಯಕ್ಕೂ ಅಧಿಕೃತ ಮುದ್ರೆ ಬಿದ್ದಿದೆ. 18 ರೈತರು ಇದರ ಸಂತ್ರಸ್ತರು ಫಲಾನುಭವಿಗಳು, ಅವರಿಗೆ ಮುಳುಗಡೆಯಾಗುವ ಸಂದರ್ಭ ಬಾಡಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಆಡಳಿತ ಹೇಳಿದೆ. ಇದು 2007ರಲ್ಲಿ ಆದ ಪ್ರಾಜೆಕ್ಟ್. ಪ್ಲ್ಯಾನ್ ಮಾಡುವಾಗಲೇ ಸರಿಯಾಗಿ ಮಾಡಬೇಕಿತ್ತು, ಆದರೆ ಈಗ ಹಂತಹಂತವಾಗಿ ಎಲ್ಲರಿಗೂ ಸಮಾಧಾನವಾಗುವ ನಿಟ್ಟಿನಲ್ಲಿ ಪರಿಹಾರ ಒದಗಿಸಲಾಗುವುದು ಚಿಂತೆ ಬೇಡ ಎಂದು ಖುದ್ದು ಅರಣ್ಯ ಸಚಿವ ರಮಾನಾಥ ರೈ ಹೇಳಿದ್ದಾರೆ. ಅಲ್ಲಿಗೆ ಮಂಗಳೂರಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯ ಹಾದಿ ಎಲ್ಲವೂ ಸುಗಮವಾಯಿತು ಎಂದು ಆಡಳಿತ ಅಂದುಕೊಳ್ಳುವಾಗಲೇ, ರೈತ ಸಂಘ ಒಟ್ಟು ಪ್ರಕ್ರಿಯೆಗೆ ತಕರಾರು ತೆಗೆದಿದೆ.

Kishore peraje

ನೇತ್ರಾವತಿ ನೀರು ಸಂಗ್ರಹ ಮಟ್ಟ 5 ಮೀಟರ್ ಎಂದು ನಿರ್ಧರಿಸುವ ಸಂದರ್ಭ ಒಟ್ಟು 8 ಮೀಟರ್ ವ್ಯಾಪ್ತಿಯೊಳಗಿನ ಮುಳುಗಡೆ ಪ್ರದೇಶದ ರೈತರ ಭೂಮಿಗಳಿಗೆ ಸರಿಯಾದ ಪರಿಹಾರ ಒದಗಿಸುವ ಬಗ್ಗೆ ಮಾತುಕತೆ ಆಗಬೇಕಿತ್ತು. ಆದರೆ ಇದ್ಯಾವುದೂ ಆಗಿಲ್ಲ. ಹೀಗಾಗಿ ಒಟ್ಟು ಪ್ರಕ್ರಿಯೆಯೇ ಸರಿ ಇಲ್ಲ, ಇದರ ವಿರುದ್ಧ ನಾವು ಹೈಕೋರ್ಟ್ ನಲ್ಲಿ ವಿಚಾರ ಮಂಡಿಸಲಿದ್ದೇವೆ ಎಂದು ರೈತ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ನಾವು ಯಾವ ರಾಜಕೀಯ ಪಕ್ಷಗಳ ವಿರೋಧಿಗಳೂ ಅಲ್ಲ, 2007ರಿಂದಲೇ ಡ್ಯಾಂ ಎತ್ತರಿಸುವ ಸಂದರ್ಭ ರೈತರ ಸರ್ವೇ, ಪರಿಹಾರದ ವಿಚಾರವಾಗಿ ಪಾರದರ್ಶಕ ಪ್ರಕ್ರಿಯೆಗಳೇ ನಡೆದಿಲ್ಲ. ಹಿಂದಿನ ಜಿಲ್ಲಾಧಿಕಾರಿಗಳು ಡ್ಯಾಂನಲ್ಲಿ ನಾಲ್ಕೂವರೆ ಮೀಟರ್ ಗಿಂತ ಹೆಚ್ಚು ನೀರು ನಿಲ್ಲಿಸುವ ಸಂದರ್ಭ ಮಾಹಿತಿ ನೀಡಲಾಗುವುದು ಎಂದಿದ್ದರು. ಇದನ್ನು ಗಾಳಿಗೆ ತೂರಿ ಈಗ ಕಾರ್ಯಕ್ರಮ ನಡೆದಿದೆ. 5 ಮೀಟರ್ ಎತ್ತರಿಸಿದ ಪ್ರದೇಶದಲ್ಲಿ ಮುಳುಗಡೆಯಾಗುವ ಭಾಗದಲ್ಲಿ 18 ರೈತರಿದ್ದಾರೆ ಎಂಬ ಲೆಕ್ಕ ನೀಡಲಾಗಿದೆ. ಆದರೆ ಅವರಷ್ಟೇ ಅಲ್ಲ, ಇನ್ನೂ ಹಲವು ರೈತರ ಭೂಮಿ ಮುಳುಗಡೆಯಾಗಲಿದೆ, ನಮಗೆ ಸೂಕ್ತ ಮಾಹಿತಿ ಕೊಡಬೇಕು ಎಂದು ಕೋರ್ಟಿನ ಮೂಲಕ ಮನವಿ ಮಾಡುತ್ತೇವೆ ಎಂದು ತಾಲೂಕು ರೈತಸಂಘ ಅಧ್ಯಕ್ಷ ಶರತ್ ಕುಮಾರ್ ತಿಳಿಸಿದರು.

ಜನವರಿ 1ನೇ ತಾರೀಖಿಗೆ ನಾವು ಹೈಕೋರ್ಟಿಗೆ ಈ ವಿಚಾರವನ್ನು ತರುವ ಪ್ರಯತ್ನ ಮಾಡುತ್ತೇವೆ. 5 ಮೀಟರ್ ನೀರು ನಿಲ್ಲಿಸಿದ ಬಗ್ಗೆ ಕೋರ್ಟಿಗೆ ಸರಕಾರ ಉತ್ತರಿಸಬೇಕು ಎಂದು ಜಿಲ್ಲಾ ಹಸಿರು ಸೇನೆ ಕಾರ್ಯದರ್ಶಿ ಮನೋಹರ ಶೆಟ್ಟಿ ಹೇಳಿದ್ದಾರೆ.

ಜಲಾವೃತಗೊಂಡ ಕೃಷಿ ಭೂಮಿ

ಜಮೀನು ಮುಳುಗಡೆಯಾಗುವ ಸಂತ್ರಸ್ತ ರೈತರಿಗೆ ಪರಿಹಾರ ನೀಡದೆ ಯಾವುದೇ ಕಾರಣಕ್ಕೂ ತುಂಬೆಯ ಹೊಸ ಡ್ಯಾಂನಲ್ಲಿ ನೀರು ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದ್ದ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮಾತು ತಪ್ಪಿತು ಎಂದು ರೈತಸಂಘದ ಪದಾಧಿಕಾರಿಗಳು ಹೇಳಿದ್ದಾರೆ.  ಭಾನುವಾರ ಪೂರ್ವಸೂಚನೆ ಇಲ್ಲದೆ ಹೊಸ ಡ್ಯಾಂನಲ್ಲಿ ನೀರು ಸಂಗ್ರಹ ಜಾಸ್ತಿಯಾಗುತ್ತಿದ್ದಂತೆ ಬಿ. ಮೂಡ ಗ್ರಾಮದ ಕುಪ್ಪಿಲದ ರೈತರೊಬ್ಬರ ಸುಮಾರು ಅರ್ಧ ಎಕರೆಗಿಂತಲೂ ಹೆಚ್ಚು ವಿಸ್ತೀರ್ಣದ ಕೃಷಿ ಭೂಮಿ ಮುಳುಗಡೆಯಾಗಿದೆ. ಮನೆಯಿಂದ 200 ಮೀಟರ್ ದೂರಲ್ಲಿರುವ ಗದ್ದೆಯಿಂದ ಭತ್ತದ ಪೈರನ್ನು ಕಟಾವು ಮಾಡಿ ಮನೆಗೆ ತರಬೇಕೆಂದಿದ್ದರೆ ಆರೇಳು ಕಿ.ಮಿ. ಸುತ್ತು ಬಳಸಿ ಲಾರಿ ಮೂಲಕ ಸಾಗಿಸಬೇಕಾದ ಪರಿಸ್ಥಿತಿ.

ತುಂಬೆ ಹೊಸ ವೆಂಟೆಡ್ ಡ್ಯಾಂ ನಿರ್ಮಾಣದಿಂದ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಲಿದ್ದು ಎಂಟು ನೂರಕ್ಕಿಂತಲೂ ಅಧಿಕ ಕುಟುಂಬಗಳು ತೊಂದರೆ ಅನುಭವಿಸಲಿದ್ದು  ಜಮೀನು ಕಳೆದುಕೊಳ್ಳುವ ಎಲ್ಲಾ ರೈತರಿಗೆ ಏಕಗಂಟಿನಲ್ಲಿ ನ್ಯಾಯೋಚಿತ ಪರಿಹಾರ ಕೊಡಬೇಕು.ಎನ್ನುತ್ತಾರೆ ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳೇಪಾಡಿಗುತ್ತು.

 

ಏಳು ಮೀಟರ್ ಎತ್ತರಕ್ಕೇರಿದ ಸಂದರ್ಭ ಅದರ ಮುಳುಗಡೆ ವ್ಯಾಪ್ತಿಯ ಸಂತ್ರಸ್ತರಿಗೂ ಸೂಕ್ತ ಪರಿಹಾರ ನೀಡಲಾಗುವುದು, ಈ ಬಗ್ಗೆ ಅನುಮಾನ ಬೇಡ. 2007ರಲ್ಲಿ ಅಣೆಕಟ್ಟು ನಿರ್ಮಾಣ ಯೋಜನೆ ರೂಪುಗೊಂಡಿದ್ದರೂ ಭೂಸ್ವಾಧೀನ ಪ್ರಕ್ರಿಯೆ, ಅನುದಾನ ಹಾಗೂ ಪರಿಹಾರ ಕುರಿತು ಯಾವುದೇ ರೀತಿಯ ಸ್ಪಷ್ಟ ರೂಪುರೇಷೆಗಳನ್ನು ಹಾಕಿಕೊಳ್ಳದಿರುವುದೇ ಅಣೆಕಟ್ಟು ನಿರ್ಮಾಣ ವಿಳಂಬವಾಗಲು ಕಾರಣ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ.

ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಪ್ರದಾನಿಗೆ ಪತ್ರ

ನಗರಾಭಿವೃದ್ಧಿ ಸಚಿವ, ಉಸ್ತುವಾರಿ ಚಿವ, ಜಿಪಂ ಅಧ್ಯಕ್ಷ, ಮೇಯರ್, ಜಿಲ್ಲಾಧಿಕಾರಿಗಳೆಲ್ಲರ ಉಪಸ್ಥಿತಿಯಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಂತ್ರಸ್ತ ರೈತರಿಗೆ ನೀಡಿದ ಭರವಸೆಯಂತೆ ಡ್ಯಾಂನಲ್ಲಿ 4 ಮೀಟರ್ ಮಾತ್ರ ನೀರು ಸಂಗ್ರಹಿಸಲಾಗುವುದು, ಇಲ್ಲವಾದಲ್ಲಿ ಸೂಕ್ತ ಪರಿಹಾರ ಬಳಿಕ ನೀರು ತುಂಬಿಸಲಾಗುವುದು ಎಂಬುದು ಸುಳ್ಳಾಗಿದೆ. ರೈತರಿಗೆ ಚಿಕ್ಕಾಸೂ ಪರಿಹಾರ ಕೊಡದೆ, ಡ್ಯಾಂನಲ್ಲಿ ನೀರು ತುಂಬಿಸಿ ಗಂಗಾ ಪೂಜೆ ಮಾಡಲಾಗಿದೆ. ರೈತರಿಗೆ ನ್ಯಾಯ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಅವರು ಲಿಖಿತ ಮನವಿ ಸಲ್ಲಿಸಿದ್ದಾರೆ. 2004ರಲ್ಲಿ ಪರಿಹಾರಕ್ಕೆ 3 ಕೋ.ರೂ ತೆಗೆದಿರಿಸಲಾಗಿದೆ ಎಂದು ಅಂದಿನ ಜಿಲ್ಲಾಧಿಕಾರಿ ತಿಳಿಸಿದ್ದರು. 2016ರಲ್ಲಿ 50 ಕೋ.ರೂ. ಪರಿಹಾರಕ್ಕೆ ಬೇಕಾಗಿದ್ದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ನಗರಪಾಲಿಕೆ ಮೇಯರ್ ಹೇಳಿದ್ದು, ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಗರಪಾಲಿಕೆ ಆಯುಕ್ತರು 10 ಕೋ.ರೂ.ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದರು. ಅದಾದ ಬಳಿಕ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಡ್ಯಾಂನಲ್ಲಿ ನೀರು ಸಂಗ್ರಹಿಸುವಾಗ ವೈಜ್ಞಾನಿಕವಾಗಿ ಶಿಪಾರಸ್ಸುಗೊಂಡಂತೆ 1 ಮೀ.ಎತ್ತರಕ್ಕೆ ಹೆಚ್ಚುವರಿಯಾಗಿ ವರತೆ ಪ್ರದೇಶ ಮುಳುಗಡೆ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts