bantwalnews.com report
ಎತ್ತಿನಹೊಳೆ ಯೋಜನೆ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಡಿಸೆಂಬರ್ 26ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ.
ಮಂಗಳವಾರ ದ.ಕ. ಜಿಲ್ಲೆಯ ತುಂಬೆಯಲ್ಲಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ನಡೆದ ಸಭೆಯಲ್ಲಿ ಅರಣ್ಯ ಸಚಿವ ಬಿ.ರಮಾನಾಥ ರೈ, ಈ ವಿಷಯವನ್ನು ಹೇಳಿದರು. ಯೋಜನೆಗೆ ಸಂಬಂಧಿಸಿದ ಪ್ರದೇಶದ ಎಲ್ಲ ಶಾಸಕರಿಗೂ ಸಭೆಗೆ ಆಹ್ವಾನ ನೀಡಲಾಗಿದೆ. ಇದರ ಜೊತೆ ಹೋರಾಟಗಾರರನ್ನೂ ಆಹ್ವಾನಿಸಲಾಗುವುದು. ಸಭೆಯಲ್ಲಿ ಯೋಜನೆಗೆ ಸಂಬಂಧಿಸಿದ ಸಾಧಕ, ಬಾಧಕಗಳ ವಿಚಾರವನ್ನು ಅಲ್ಲಿ ಚರ್ಚಿಸಲಾಗುವುದು ಎಂದರು.
ಮಂಗಳೂರಿನಲ್ಲಿ ಈ ಸಭೆಯನ್ನು ಯಾಕೆ ಏರ್ಪಡಿಸಬಾರದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರೈ, ಈ ಮೊದಲೇ ಸಭೆ ನೀರಾವರಿ ಸಚಿವರ ನೇತೃತ್ವದಲ್ಲಿ ನಡೆದಿತ್ತು ಎಂದರು. ಆದರೆ ಆ ಸಭೆಯಲ್ಲಿ ನೀರಾವರಿ ಸಚಿವರು ಭಾಗವಹಿಸದೆ ಕೇವಲ ನೀರಾವರಿ ಇಲಾಖೆಯ ಎಂ.ಡಿ. ಅವರಷ್ಟೇ ಭಾಗವಹಿಸಿ, ಸಭೆ ನಿಷ್ಫಲವಾಗಿತ್ತು ಎಂದು ಪತ್ರಕರ್ತರು ಸಚಿವರಿಗೆ ನೆನಪಿಸಿದರು.
ಈ ಬಾರಿಯ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಸಹಿತ ಯೋಜನೆಗೆ ಸಂಬಂಧಿಸಿದ ಎಲ್ಲರೂ ಭಾಗವಹಿಸುವ ಕಾರಣ ಸ್ಪಷ್ಟ ತೀರ್ಮಾನ ದೊರಕುವುದು. ಯೋಜನೆ ವಿರೋಧಿಸಿ ಯಾವುದೇ ರಾಜಕೀಯವನ್ನು ಮಾಡಬಾರದು. ಬಿಜೆಪಿ ಜಿಲ್ಲಾ ಪಂಚಾಯಿತಿ ಚುನಾವಣಾ ಪ್ರಣಾಳಿಕೆಯಲ್ಲಿ ಎತ್ತಿನಹೊಳೆ ಯೋಜನೆ ಮಾಡಿಯೇ ಸಿದ್ಧ ಎಂದು ಪ್ರಕಟಿಸಿದ್ದು ಅವರಿಗೆ ಗೊತ್ತಿರಲಿ ಎಂದು ಸಚಿವರು ಹೇಳಿದರು.
ಈ ಕುರಿತು ಬಿಜೆಪಿ ಸದನದಲ್ಲಿ ನಿಲುವಳಿ ಸೂಚನೆ ಯಾಕೆ ಮಂಡಿಸುವುದಿಲ್ಲ, ಕೇವಲ ರಾಜಕೀಯ ಮಾಡುವುದಷ್ಟೇ ಅದರ ಉದ್ದೇಶ. ಹೋರಾಟಗಾರರೂ ಈ ವಿಷಯ ಅರಿತಿರಲಿ, ನಾನು ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ರೈ ತಿಳಿಸಿದರು.