bantwalnews.com report
ಬಂಟ್ವಾಳ ತಾಲೂಕು ಮಟ್ಟದ ಕರಾವಳಿ ಉತ್ಸವ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಸೋಮವಾರ ರಾತ್ರಿ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಾದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಇನ್ನು ಮುಂದೆ ಪ್ರತಿ ವರ್ಷ ತಾಲೂಕು ಮಟ್ಟದ ಉತ್ಸವ ನಡೆಸುವುದಾಗಿ ಘೋಷಿಸಿದರು. ಈ ಸಂದರ್ಭ ಹೆಬ್ಬಾವಿನೊಡನೆ ಸೆಣಸಿದ ಬಾಲಕ ವೈಶಾಖ್ ನನ್ನು ಸನ್ಮಾನಿಸಲಾಯಿತು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರವಿ, ಸಹಾಯಕ ತಹಸೀಲ್ದಾರ್ ಡಾ.ರೇಣುಕಾ ಪ್ರಸಾದ್, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಜಿಪಂ ಸದಸ್ಯ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪಕ್ಕಳ, ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯ್ಲ, ಮಾಜಿ ಪುರಸಭಾಧ್ಯಕ್ಷ ಸದಾನಂದ ಮಲ್ಲಿ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ತಹಸೀಲ್ದಾರ್ ಪುರಂದರ ಹೆಗ್ಡೆ, ಕಸಾಪ ಅಧ್ಯಕ್ಷ ಮೋಹನ ರಾವ್, ಪುರಸಭಾ ಮುಖ್ಯಾಧಿಕಾರಿ ಕೆ.ಸುಧಾಕರ್ ವೇದಿಕೆಯಲ್ಲಿ ಇದ್ದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ ಮಮತಾ ಗಟ್ಟಿ, ರವೀಂದ್ರ ಕಂಬಳಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಶಿಕ್ಷಣಾಧಿಕಾರಿ ಲೋಕೇಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಭಟ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು. ಕಲಾವಿದ ಮಂಜು ವಿಟ್ಲ ನಿರೂಪಿಸಿದರು.
ಮೆರವಣಿಗೆ ಮುಗಿದಾಕ್ಷಣ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಂಟ್ವಾಳ ಎಸ್‌ವಿಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಮಕ್ಕಳ ವೀರ ಸೈನಿಕರ ನೃತ್ಯಪ್ರದರ್ಶನಕ್ಕೆ ಇಡೀ ಸಭಾಂಗಣದ ಪ್ರೇಕ್ಷಕರೇ ಎದ್ದು ನಿಂತು ಗೌರವ ವಂದನೆ ಸಲ್ಲಿಸಿದ ದೃಶ್ಯ ವಿಶೇಷ ಗಮನ ಸೆಳೆಯಿತು.
ವಿವಿಧ ಶಾಲಾ ಮಕ್ಕಳ ನೃತ್ಯ ಪ್ರದರ್ಶನ ಒಂದಕ್ಕೊಂದನ್ನು ಮೀರಿಸುವ ರೀತಿಯಲ್ಲಿ ಪ್ರದರ್ಶನಗೊಂಡು ಸಭಿಕರ ಪ್ರಶಂಸೆಗೊಳಪಟ್ಟಿತು. ಈ ನಡುವೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಗಂಧದಗುಡಿ ಚಲನಚಿತ್ರದ ಹಾಡು ಹಾಗೂ ಬಂಟ್ವಾಳ ತಾಲೂಕು ಚುನಾವಣಾ ಶಾಖೆಯ ಪ್ರಥಮ ದರ್ಜೆಯ ಸಹಾಯಕ ಸಿಬ್ಬಂದಿ ಗೋಪಾಲ್‌ರವರ ವಿವಿಧ ಭಾಗವತರ ಧ್ವನಿಯ ಯಕ್ಷಗಾನದ ಹಾಡಿನ ತುಣುಕನ್ನು ಹಾಡುವ ಮೂಲಕ ತಾವೇನು ಕಮ್ಮಿ ಇಲ್ಲ ಎಂಬುದುನ್ನು ತೋರಿಸಿಕೊಟ್ಟರು. ಜಾನಪದ ನೃತ್ಯ, ಭರತನಾಟ್ಯ, ಶಂಭೂರು ದಿ| ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಕೋಟಿ ಚೆನ್ನಯ ನಾಟಕ ಮೆಚ್ಚುಗೆಗಳಿಸಿತು. ಪಟ್ಟಾಭಿರಾಮಸುಳ್ಯ ಮತ್ತು ತಂಡದ ಮಿಮಿಕ್ರಿ ಮತ್ತು ಬಲೆ ತೆಲಿಪಾಲೆ ಖ್ಯಾತಿಯ ಅರುಣ್‌ಚಂದ್ರ ಮತ್ತು ಬಳಗದವರಿಂದ ಹಾಸ್ಯ ತುಣುಕುಗಳು ಪ್ರದರ್ಶನಗೊಂಡವು.
ಕೊಂಬು, ಶಾಲಾ ಮಕ್ಕಳ ಬ್ಯಾಂಡ್ ಸೆಟ್, ಸ್ಕೌಟ್ ಗೈಡ್, ಚೆಂಡೆ, ಕಂಬಳದ ಓಟದ ಕೋಣ, ನಂದಿ ಧ್ವಜ, ಬಣ್ಣದ ಕೊಡೆ, ಚಿಲಿಪಿಲಿಗೊಂಬೆ ಬಳಗ, ಯಕ್ಷಗಾನ ಗೊಂಬೆ, ಶಾರ್ದೂಲ, ಕೀಲು ಕುದುರೆ, ಕರಗ ನೃತ್ಯ, ದಫ್ ಹಾಡು ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.