www.bantwalnews.com report
ನೀರು ಸಂಪರ್ಕ ಜೋಡಣಾ ಶುಲ್ಕ ಕಟ್ಟಿ ಮೀಟರ್ ಅಳವಡಿಸಿದರೆ ವಾರದಲ್ಲೇ ನೀರು ಪೂರೈಕೆ ಮಾಡಲಾಗುವುದು. ಪೆರುವಾಯಿ ಪೇಟೆಗೆ ಮುಚ್ಚಿರಪದವು ಕಡೆಯಿಂದ ನೀರು ತರುವ ಪ್ರಶ್ನೆಯೇ ಇಲ್ಲ ಎಂದು ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿ ಸೋಜ ಹೇಳಿದರು.
ಸೋಮವಾರ ಪೆರುವಾಯಿ ಗ್ರಾಮ ಪಂಚಾಯಿತಿ ಕಛೇರಿ ಸಭಾಭವನದಲ್ಲಿ ನಡೆದ 2016-17ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಲ್ಫ್ ಡಿಸೋಜ ಈ ಮಾತು ಹೇಳಿದರು.
ನವಗ್ರಾಮದ ಭಾಗಕ್ಕೆ ಡಿ.21ರಂದು ಬೇಟಿ ನೀಡಿ ಎಲ್ಲರಿಂದ ಶುಲ್ಕ ಪಡೆಯುವ ಕಾರ್ಯವನ್ನು ಮಾಡಲಾಗುತ್ತದೆ. ನೀರು ಪ್ರತಿಯೊಬ್ಬರಿಗೂ ಪೂರೈಸುವ ಕಾರ್ಯವನ್ನು ಒಂದು ವಾರದಲ್ಲಿ ಮಾಡುವುದು ನಿಶ್ಚಿತ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಹೇಳಿದರು.
ಕೃಷಿ ಇಲಾಖೆಯ ಹನುಮಂತ ಕಾಳಗಿ, ಶಿಕ್ಷಣ ಇಲಾಖೆಯ ಕುಂಞಣ್ಣ ನಾಯ್ಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಲೋಲಾಕ್ಷಿ, ವಿದ್ಯುತ್ ಇಲಾಖೆಯ ಆನಂದ, ಜಿಲ್ಲಾ ಪಂಚಾಯಿತಿ ಇಂಜಿಯರಿಂಗ್ ವಿಭಾಗದ ಅಜಿತ್, ಕಂದಾಯ ಇಲಾಖೆಯ, ಸಮಾಜ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ನೋಡಲ್ ಅಧಿಕಾರಿಯಾಗಿ ಪಂಚಾಯಿತ್ ರಾಜ್ ಇಲಾಖೆಯ ನರೇಂದ್ರ ಬಾಬು ಭಾಗವಹಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ತಾಲೂಕು ಪಂಚಾಯಿತಿ ಸದಸ್ಯ ಪದ್ಮನಾಭ ನಾಯ್ಕ ಅಳಿಕೆ, ಪೆರುವಾಯಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಾಲತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.