ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಂದರೆ ಜನರಿಗೆ ಅಸಡ್ಡೆಯೋ, ಅಥವಾ ಸಭೆ, ಸಮಾರಂಭ, ಉತ್ಸವ ಆಯೋಜನೆಯ ಪೂರ್ವಸಿದ್ಧತೆಯ ಕೊರತೆಯೋ?
- ಹರೀಶ ಮಾಂಬಾಡಿ
www.bantwalnews.com ಅಂಕಣ – ವಾಸ್ತವ
ಇವತ್ತು ರಜೆ ಅಂದಾಗಲೇ ಯಾಕೆ ಎಂದು ಕೇಳುವ ಜನರು ನಮ್ಮಲ್ಲಿದ್ದಾರೆ.
ಇಂಥ ಕಾಲಘಟ್ಟದಲ್ಲಿ ನಾವು ಪೂರ್ವಜರು, ಮಹಾಪುರುಷರ ಸ್ಮರಣೆ ಮಾಡುವುದು ಅಗತ್ಯವೂ ಹೌದು. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚರಣೆಗಳನ್ನು ನಾವು ಮರೆಯಲೂ ಬಾರದು.
ಇದೇ ಕಾರಣಕ್ಕಾಗಿ ಸರಕಾರಗಳು, ಅದು ರಾಜ್ಯದ್ದಿರಲಿ, ದೇಶದ್ದಿರಲಿ, ದೇಶದ ಪ್ರತಿ ಭಾಗದಲ್ಲೂ ಉತ್ಸವಾಚರಣೆಗಳು, ಮಹಾತ್ಮರ ಜಯಂತಿಗಳನ್ನು ಮಾಡುತ್ತದೆ. ದುರದೃಷ್ಟವಶಾತ್, ಇಂಥ ಜಯಂತಿ, ಉತ್ಸವ, ಆಚರಣೆ ಹಾಗೂ ಯೋಜನೆಗಳು ಬಹುಪಾಲು ಸಕ್ಸಸ್ ಆಗುವುದೇ ಇಲ್ಲ.
ನಮ್ಮ ರಾಜ್ಯದಲ್ಲೇ ನೋಡಿ. ಪ್ರತಿಯೊಂದು ತಾಲೂಕಿನಲ್ಲೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಎಂದಿರುತ್ತದೆ. ಇದರ ಜೊತೆಗೆ ವಿವಿಧ ಜಯಂತಿಗಳು. ಇವುಗಳ ಜವಾಬ್ದಾರಿಯನ್ನು ಆಯಾ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿ ಹೊರಬೇಕು.
ಸಹಜವಾಗಿಯೇ ಸರಕಾರಿ ಕಚೇರಿಗಳ ಕಾರ್ಯಬಾಹುಳ್ಯ ಅಧಿಕ. ಪ್ರಾಮಾಣಿಕವಾಗಿ ಕೆಲಸ ಮಾಡುವವರಿದ್ದರಂತೂ ಇದ್ದ ಕೆಲಸ ನಿರ್ವಹಿಸಲು ವಿಪರೀತ ಟೆನ್ಶನ್. ಇದರ ಜೊತೆಗೆ ಹಬ್ಬಗಳ ಆಚರಣೆಯೂ ಇವರ ತಲೆಗೇ ಬೀಳುತ್ತದೆ.
ಆಗ ಯಾರಾದರೂ ಏನು ಮಾಡುತ್ತಾರೆ? ಸರಕಾರ ಆಚರಣೆ ಮಾಡು ಎಂದಿದೆ, ಹೀಗಾಗಿ ಅಧಿಕಾರಿಗಳಿಗೆ ಬಿಡುವಂತಿಲ್ಲ, ಮಾಡಲೇಬೇಕು. ಅದಕ್ಕಾಗಿಯೇ ದೊಡ್ಡ ತಯಾರಿಗಳೇನೂ ಬೇಕಾಗಿಲ್ಲ, ಒಬ್ಬ ಅತಿಥಿ (ಕನಕ, ಅಂಬೇಡ್ಕರ್, ಬಸವ ಜಯಂತಿ ಇದ್ದರೆ ಆ ವಿಷಯದಲ್ಲಿ ಅನುಭವ ಇದ್ದವರು) ಬೇಕು. ಸ್ವಾಗತ, ಭಾಷಣ, ವಂದನೆ, ಚಹ ಸರಬರಾಜಾದ ಬಳಿಕ ಕಾರ್ಯಕ್ರಮ ಮುಗಿಯುತ್ತದೆ. ಸರಕಾರಕ್ಕೆ ವರದಿ ಹೋಗುತ್ತದೆ. ಪತ್ರಿಕೆಗಳಲ್ಲೂ ಸುದ್ದಿಗಳು ಬರುತ್ತವೆ. ಅಲ್ಲಿಗೆ ಆಚರಣೆ ಮುಕ್ತಾಯ.
ಹೀಗೆ ನಡೆಯದೆ, ಸುಮಾರು ಇನ್ನೂರು, ಮುನ್ನೂರು ಜನರನ್ನು ಎದುರು ಕೂರಿಸಿಕೊಂಡು ಮಾಡುವ ಜಯಂತಿಗಳು ವಿರಳ. ಒಂದು ವೇಳೆ ಇದ್ದರೆ ಅದಕ್ಕೆ ಶಾಲಾ ಮಕ್ಕಳೇ ಪ್ರೇಕ್ಷಕರು.
ಈ ಕಾರಣದಿಂದಾಗಿಯೇ ಮಹಾತ್ಮರ, ದಾರ್ಶನಿಕರ ಸ್ಮರಣೆ ಯಾವಾಗ ಆರಂಭ, ಯಾವಾಗ ಮುಕ್ತಾಯಗೊಂಡಿತು ಎಂದು ತಿಳಿಯೋದೇ ಕಷ್ಟ. ಇದು ಜಯಂತಿಗಳ ಆಚರಣೆಗಷ್ಟೇ ಅಲ್ಲ, ಉತ್ಸವಗಳಿಗೂ ಅನ್ವಯ.
ಇಂಥ ಸಮಾರಂಭಗಳು ಜನರನ್ನು ತಲುಪದಿದ್ದರೆ ಮಾಡುವುದಾದರೂ ಯಾಕೆ, ಹರಿಕೆ ಸಂದಾಯ ಬೇಕೇ? ಹೀಗೇನಾದರೂ ಪ್ರಶ್ನಿಸಿದರೆ, ನೀವು ದುಡ್ಡು ಕೊಡುತ್ತೀರಾ, ಹೇಳೋದೇನೋ ಭಾರೀ ಸುಲಭ, ಮಾಡುವುದು ಎಷ್ಟು ಕಷ್ಟ ಎಂದು ಗೊತ್ತಾ ಎಂಬ ಉತ್ತರ ಸಿದ್ಧವಾಗಿರುತ್ತದೆ. ಆದರೆ ಹೇಳುವ ಹಕ್ಕು ತೆರಿಗೆ ಕಟ್ಟುವ ಪ್ರಜೆಗಳಿಗಿಲ್ಲವೇ, ಅಧಿಕಾರಿಗಳು ತಮ್ಮ ಇಲಾಖೆ ಕೆಲಸವನ್ನು ಬಿಟ್ಟು ಉತ್ಸವಾಚರಣೆಗೆ ಫಂಡ್ ರೈಸ್ ಮಾಡಲು ಕಳಿಸುವುದು ಎಷ್ಟು ಸರಿ ಎಂದು ಇತ್ತೀಚೆಗೆ ಸಭೆಯೊಂದರಲ್ಲಿ ಹಿರಿಯರೊಬ್ಬರು ಕೇಳಿದಾಗ ನೀವು ಫಂಡ್ ರೈಸ್ ಮಾಡ್ತೀರಾ ಎಂಬ ಉತ್ತರವೇ ದೊರಕಿತ್ತು!.
ಸರಕಾರಿ ಕೃಪಾಪೋಷಿತ ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಗಳಿಗೆ ಎಷ್ಟು ಜನ ಬರುತ್ತಾರೆ, ಊಟಕ್ಕೆ ಎಷ್ಟು ಮಂದಿ ಕ್ಯೂ ನಿಲ್ಲುತ್ತಾರೆ , ಅಲ್ಲಿ ಎಷ್ಟೊಂದು ಗಲಾಟೆಗಳು ಆಗುತ್ತವೆ, ಮಳಿಗೆಗಳಿಗೆ ಎಷ್ಟು ಮಂದಿ ಕಾಲಿಡುತ್ತಾರೆ, ಪುಸ್ತಕ ಖರೀದಿ ಎಷ್ಟು ಮಂದಿ ಮಾಡುತ್ತಾರೆ, ಅಂತಿಮವಾಗಿ ಅಲ್ಲಿ ಕೈಗೊಳ್ಳುವ ನಿರ್ಣಯಕ್ಕೆ ಎಷ್ಟು ಬೆಲೆ ಇರುತ್ತದೆ, ಎಷ್ಟು ಅನುಷ್ಠಾನ ಆಗುತ್ತದೆ ಎಂಬುದು ಯೋಚಿಸಬೇಕಾದ ವಿಷಯ. ಏಕೆಂದರೆ ಇವು ಆಯೋಜಿಸಿದ ಉದ್ದೇಶವನ್ನು ಈಡೇರಿಸುವುದೇ ಇಲ್ಲ. ಹಾಗೆಂದು ಇವುಗಳನ್ನು ಮಾಡಬೇಡಿ ಎಂದೇನೂ ಹೇಳುವ ಉದ್ದೇಶ ಇದಲ್ಲ.
ಏಕೆಂದರೆ ಖಾಸಗಿಯವರನ್ನೇ ನೋಡಿ.
ಒಂದು ಶಾಲೆಯ ಸ್ಕೂಲ್ ಡೇ ಕಾರ್ಯಕ್ರಮಕ್ಕೆ ಒಂದು ಸರಕಾರಿ ಕಾರ್ಯಕ್ರಮಕ್ಕಿಂತ ಜಾಸ್ತಿ ಜನರು ಸೇರುತ್ತಾರೆ. ದೊಡ್ಡ ಮಟ್ಟದ ಮೂಡುಬಿದರೆ ಡಾ.ಎಂ. ಮೋಹನ ಆಳ್ವ ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮಗಳೂ ಗ್ರಾಂಡ್ ಸಕ್ಸಸ್ ಆಗುತ್ತವೆ. ಪ್ರತಿ ತಾಲೂಕಿನಲ್ಲೂ ಆಳ್ವಾಸ್ ನುಡಿಸಿರಿಯ ಘಟಕಗಳು ನಡೆಸುವ ಕಾರ್ಯಕ್ರಮಗಳು ಹಾಗೂ ಅದಕ್ಕೆ ನಡೆಯುವ ಪೂರ್ವತಯಾರಿಗಳು ಎಲ್ಲರಿಗೂ ಮಾದರಿ. ಡಾ.ಆಳ್ವ ಅವರಿಗೆ ಸಾಧ್ಯ ಎಂದಾದರೆ ಇತರರಿಗೆ ಯಾಕೆ ಸಾಧ್ಯವಿಲ್ಲ?
ನಾನಿಲ್ಲಿ ಸರಕಾರಿ ಕಾರ್ಯಕ್ರಮಗಳೆಲ್ಲವೂ ವೇಸ್ಟ್ ಎಂದು ಹೇಳುತ್ತಿಲ್ಲ. ಆದರೆ ಪ್ರತಿಯೊಂದು ಕಾರ್ಯಕ್ರಮ ಆಯೋಜನೆಗೂ ಮುನ್ನ ಸಾಕಷ್ಟು ಪೂರ್ವತಯಾರಿ ನಡೆಸಿ. ಯಶಸ್ವಿ ಕಾರ್ಯಕ್ರಮ ಸಂಘಟಕರ ಸಲಹೆ ಕೇಳಿ. ಏಕೆಂದರೆ ನೀವು ಚಂದಾ ಎತ್ತಿ ಕಾರ್ಯಕ್ರಮ ಮಾಡುವುದಾದರೂ ಆ ದುಡ್ಡೂ ನಮ್ಮ ನಿಮ್ಮೆಲ್ಲರದ್ದು ಅಲ್ಲವೇ?