ವಿಶೇಷ ವರದಿ

ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ

www.bantwalnews.com ವರದಿ

ಇಪ್ಪತ್ತೈದು ವರ್ಷಗಳ ಹಿಂದೆ ರಿಟೈರ್ ಆದ ಮೇಸ್ಟ್ರನ್ನು ಮರೆಯುವವರೇ ಜಾಸ್ತಿ. ಆದರೆ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಈ ಸರಳ ಸಮಾರಂಭ ಏರ್ಪಡಿಸಿರುವುದು ಎಲ್ಲರಿಗೂ ಮಾದರಿ. www.bantwalnews.com ಬಳಗದಿಂದಲೂ ಕಾರ್ಯಕ್ರಮ ಆಯೋಜಕರಿಗೆ ಅಭಿನಂದನೆ.

ಮೊಡಂಕಾಪು ದೀಪಿಕಾ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾಗಿ 1983ರಲ್ಲಿ ಕಾರ್ಕಡ ಶ್ರೀನಿವಾಸ ಉಡುಪರು ನಿವೃತ್ತಿಯಾಗುವ ಹೊತ್ತಿಗೆ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿದ್ದರು. ಆದರೆ ದೀಪಿಕಾ ಪ್ರೌಢಶಾಲೆಯೊಂದಿಗಿನ ಅವರ ನಂಟು ಬಿಡಿಸಲಾಗದ ಬಂಧ ಎಂಬುದನ್ನು ತೋರಿಸಿಕೊಟ್ಟದ್ದು ಭಾನುವಾರ ಸಂಜೆ.

ಉಡುಪರು ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಮೂರೂವರೆ ದಶಕಗಳ ಅಧ್ಯಾಪನ ಕರ್ತವ್ಯ ನಿಭಾಯಿಸಿದ್ದರು. 17 ವರ್ಷಗಳ ಕಾಲ ಕೋಟ ವಿವೇಕ ಪ್ರೌಢಶಾಲೆಯಲ್ಲಿ ಸಹಾಯಕ ಅಧ್ಯಾಪಕರಾಗಿ, 1966ರಲ್ಲಿ ದಕ್ಷಿಣ ಕೊಡಗಿನ ಪ್ರೌಢಶಾಲೆಯೊಂದರ ಮುಖ್ಯ ಶಿಕ್ಷಕನಾಗಿ ಒಂದು ವರ್ಷ, 5 ವರ್ಷ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಉಡುಪರು 12 ವರ್ಷ ಮೊಡಂಕಾಪಿನಲ್ಲಿದ್ದರು. ಕ್ರೀಡೆ, ಸಾಹಿತ್ಯ, ನಾಟಕ, ಯಕ್ಷಗಾನ ಹೀಗೆ ಬಹುಮುಖ ಪ್ರತಿಭೆಯ ಉಡುಪರು ಮಕ್ಕಳಿಗೂ ಸದಭಿರುಚಿಯನ್ನು ಉಣಿಸಿದರು. ಮೊಡಂಕಾಪು ದೀಪಿಕಾ ಪ್ರೌಢಶಾಲೆಯೆಂದರೆ ಉಡುಪರಿಗೆ ವಿಶೇಷ ಪ್ರೀತಿ. ಹಾಗೆಯೆ ಅವರ ಶಿಷ್ಯರಿಗೂ. ಈಗ ಉಡುಪರು ನಮ್ಮೊಂದಿಗಿಲ್ಲದಿದ್ದರೂ ಅವರ ಸ್ಮರಣೆಯನ್ನು ಶಿಷ್ಯರು ಬಿಡಲಿಲ್ಲ ಎಂಬುದಕ್ಕೆ ಭಾನುವಾರ ನಡೆದ ಸಮಾರಂಭವೇ ಸಾಕ್ಷಿ.

ಅವರ ಜೊತೆ ದುಡಿದು ಈಗ ನಿವೃತ್ತರಾಗಿರುವ ಅಧ್ಯಾಪಕ, ನಟ, ನಿರ್ದೇಶಕ, ರಂಗಕರ್ಮಿ ಎಲ್ಲರ ಪ್ರೀತಿಯ ಹೆಬ್ಬಾರ ಮಾಸ್ಟ್ರು ವೃತ್ತಿಯಲ್ಲಿ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರೂ ದೀಪಿಕಾ ಪ್ರೌಢಶಾಲೆ, ಮೊಡಂಕಾಪು ಪರಿಸರವನ್ನು ಬಿಡಲಿಲ್ಲ, ಉಡುಪರ ಸಂಸ್ಮರಣೆ ಹೆಬ್ಬಾರರ ನೇತೃತ್ವದಲ್ಲಿ ಸರಳ, ಸುಂದರ ಸಮಾರಂಭದಲ್ಲಿ ಭಾನುವಾರ ಸಂಜೆ ದೀಪಿಕಾ ಪ್ರೌಢಶಾಲೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಶಾಲಾ ಸ್ಥಾಪಕ ಕಾರ್ಯದರ್ಶಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ವಹಿಸಿದ್ದರು. ಕಾರ್ಯಕ್ರಮವನ್ನು ಶಾಲಾ ಸಂಚಾಲಕ ವಂದನೀಯ ಫಾ. ಎಲ್. ಮ್ಯಾಕ್ಸಿಂ ನೊರೊನ್ಹಾ ವಹಿಸಿದ್ದರು. ಈ ಸಂದರ್ಭ ಪ್ರಧಾನ ಉಪನ್ಯಾಸ ಮಾಡಿದ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ, ಯಕ್ಷಗಾನದ ಪಲ್ಲಟಗಳ ಬಗ್ಗೆ ಮಾರ್ಮಿಕವಾಗಿ ಪ್ರಸ್ತಾಪಿಸಿದರು. ಯಕ್ಷಗಾನದಲ್ಲಿ ಇಂದು ಕಾಣಿಸುತ್ತಿರುವ ಬದಲಾವಣೆಗಳು ನಿಜಕ್ಕೂ ಬೇಕೇ ಎಂಬುದನ್ನು ಮೇಳಗಳ ಯಜಮಾನರು ಯೋಚಿಸಬೇಕಾಗಿದೆ ಎಂದು ಜೋಷಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಡಿಜಿಎಂ ಕೆ.ಎಂ.ಉಡುಪ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ, ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಜನಾರ್ದನ ಹಂದೆ ಉಪಸ್ಥಿತರಿದ್ದರು. ಈ ಸಂದರ್ಭ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಲಿಗ್ರಾಮ ಮಕ್ಕಳ ಮೇಳ ಸಹಸಂಸ್ಥಾಪಕ, ಉಡುಪರ ಒಡನಾಡಿ ಎಚ್. ಶ್ರೀಧರ ಹಂದೆ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಮೋಹನ ರಾವ್ ಸ್ವಾಗತಿಸಿದರು. ಮಹಾಬಲೇಶ್ವರ ಹೆಬ್ಬಾರ್ ವಂದಿಸಿದರು. ಚೇತನ್ ಮುಂಡಾಜೆ ಸನ್ಮಾನಪತ್ರ ವಾಚಿಸಿದರು. ಸುನಿಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮೇಳದ ವೀರ ವೃಷಸೇನ ಯಕ್ಷಗಾನ ಗಮನ ಸೆಳೆಯಿತು.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts