www.bantwalnews.com ವರದಿ
ಶುಕ್ರವಾರ ರಾತ್ರಿ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ಶನಿಪೂಜೆಗೆ ಎಂದು ಸಿದ್ಧಪಡಿಸಿದ್ದ ಜಾಗದಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿಗಳು ಧೂಳೆಬ್ಬಿಸಿದ ವಿಚಾರಕ್ಕೆ ಸಂಬಂಧಿಸಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಎರಡೂ ಕಡೆಯಿಂದ ಪ್ರಕರಣ ದಾಖಲಾಗಿವೆ.
ವಿಟ್ಲ ಠಾಣೆಗೆ ಸಲ್ಲಿಸಲ್ಪಟ್ಟ ದೂರಿನಲ್ಲಿರುವ ಮಾಹಿತಿಯಂತೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ಶನಿವಾರ ನಡೆಯಲಿದ್ದ ಸಾಮೂಹಿಕ ಶನಿಪೂಜಾ ಕಾರ್ಯಕ್ರಮ ಅಂಗವಾಗಿ ಜಗಶ್ರೀ ನವೋದಯ ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಯುವಕರು ಶುಕ್ರವಾರ ಸಂಜೆ ತೋರಣ ಕಟ್ಟುವುದು, ಶಾಮಿಯಾನ ಹಾಕುವುದು ಇತ್ಯಾದಿ ಕೆಲಸ ಮಾಡಿಕೊಂಡಿದ್ದ ಸಂದರ್ಭ ಬೈಕಿನಲ್ಲಿ ಬಂದವರು ಧೂಳೆಬ್ಬಿಸಿದರು, ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ. ಧೂಳೆಬ್ಬಿಸದಿರುವಂತೆ ಮನವಿ ಮಾಡಿದ್ದಕ್ಕೆ ರಾತ್ರಿ ಖಲೀಲ್ ಎಂಬಾತ ಸಹಚರರನ್ನು ಕರೆದುಕೊಂಡು ಬಂದು ರಾಜೇಶ್ ಎಂಬವರಿಗೆ ನಿಂದಿಸಿದ್ದಾಗಿ ದೂರಲಾಗಿದೆ. ಈ ಸಂದರ್ಭ ರಾಡ್, ದೊಣ್ಣೆಯಿಂದ ಹೊಡೆಯಲಾಗಿದೆ, ಬಿಡಿಸಲು ಬಂದ ರಮೇಶ್ ಎಂಬವರಿಗೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಪ್ರತಿದೂರು ಸಲ್ಲಿಸಲಾಗಿದ್ದು, ಅದರಂತೆ ದೇವಸ್ಯ ನಿವಾಸಿ ಖಲೀಲ್ ಸ್ನೇಹಿತರೊಂದಿಗೆ ಬಾಯಾರು ಮಸೀದಿಯ ಸ್ವಲಾತ್ ಕಾರ್ಯಕ್ರಮಕ್ಕೆ ಹೋಗುವ ಸಂದರ್ಭ, ಮಿತ್ತನಡ್ಕದಲ್ಲಿ ನಿಂತ ಸಮಯ ದೂಳೆಬ್ಬೆಸಿದ ವಿಚಾರದಲ್ಲಿ ರಾಜೇಶ್ ಕತ್ತಿಯಿಂದ ಕಡಿಯಲು ಬಂದು ಕೈಗೆ ತಾಗಿದೆ ಎಂದು ತಿಳಿಸಲಾಗಿದೆ.
ಘಟನೆಯಲ್ಲಿ ಗಾಯಾಳುಗಳಾದ ಮಿತ್ತನಡ್ಕ ನಿವಾಸಿ ರಾಜೇಶ್ ನಾಯಕ್ (38), ರಮೇಶ್ (38) ಪುತ್ತೂರು ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಬಿಗಿ ಬಂದೋ ಬಸ್ತು ಕಲ್ಪಿಸಲಾಗಿದ್ದು, ಹಿರಿಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.