ಶುಕ್ರವಾರ ಬಿ.ಸಿ.ರೋಡ್ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.
ಇಂತಹ ಪ್ರಕರಣ ನಡೆಯಲು ಸಾಧ್ಯವಿಲ್ಲ. ಪಡಿತರಕ್ಕೆ ಬರುವ ಸಾಮಾಗ್ರಿಗಳ ಲೆಕ್ಕ ಸ್ಪಷ್ಟವಾಗಿರುತ್ತದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಆಹಾರ ಇಲಾಖೆಯ ಅಧಿಕಾರಿ ಸಮಜಾಯಿಸಿ ನೀಡಿದರು. ಈ ಸಂದರ್ಭ ಗ್ಯಾಸ್ ಬಳಕೆದಾರರಿಗೂ ಸೀಮೆ ಎಣ್ಣೆ ಪೂರೈಸಬೇಕು ಎಂಬ ಒತ್ತಾಯ ಕೇಳಿಬಂತು. ಬಳಿಕ ಗ್ಯಾಸ್ ಹೊಂದಿರುವವರಿಗೂ ಸೀಮೆ ಎಣ್ಣೆ ಪೂರೈಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ಅಮ್ಟೂರು ಮೂಲಕ ಅಕ್ರಮವಾಗಿ ಮರಳು, ಮರ, ದನಗಳ ಸಾಗಾಟ ನಡೆಯುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಒತ್ತಾಯಿಸಿದರು.
ಕೊಳವೆ ಬಾವಿ ಕೊರೆಯಲು ನಿಷೇಧವಿದ್ದರೂ ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾತ್ರೋ ರಾತ್ರಿ ಕೊಳವೆ ಬಾವಿ ಕೊರೆಯಲಾಗುತ್ತಿದೆ ಎಂದು ದಿನೇಶ್ ಅಮ್ಟೂರು ದೂರಿದರು.
ಕೊಳವೆ ಬಾವಿ ಕೊರೆಯಲು ನಿಷೇಧ ಹಾಕಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಲಿದೆ. ಆದರೆ ಕೆಲವೆಡೆ ರಾತೋ ರಾತ್ರಿ ಕೊಳವೆ ಬಾವಿಯನ್ನು ಕೊರೆಯಲಾಗುತ್ತಿದೆ ಎಂದರು. ತಹಶೀಲ್ದಾರ್ ಪುರಂದರ ಹೆಗ್ಡೆಯವರು ಈಗಾಗಲೇ ಕೆಲವುಕಡೆ ಕೊಳವೆ ಬಾವಿ ಕೊರೆಯುವುದರನ್ನು ತಡೆ ಹಿಡಿಯಲಾಗಿದೆ ಎಂದು ಉತ್ತರಿಸಿದರು.
ದಲಿತ ಮುಖಂಡ ಜಯ ಕಡೇಶ್ವಾಲ್ಯ ಮಾತನಾಡಿ, ಕೆಲವು ಪಂಚಾಯತ್‌ಗಳು ಕೊಳವೆ ಬಾವಿ ಕೊರೆಯಲು ನಿರಾಪೇಕ್ಷಣ ಪತ್ರವನ್ನು ನೀಡಿದೆ. ಇದಕ್ಕೆ ಮೆಸ್ಕಾಂ ಕೂಡಾ ಸಹಕರಿಸುತ್ತಿದೆ. ತನ್ನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಇಂತಹ ಪ್ರಸಂಗ ನಡೆದಿದೆ ಎಂದು ಗಮನ ಸೆಳೆದಾಗ ಅಂತಹ ಪ್ರಕರಣಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ತಹಶೀಲ್ದಾರ್ ಹೇಳಿದರು.
ಎಸ್ಸಿ ಎಸ್ಟಿ ವಿದ್ಯಾವಂತರಿಗೆ ಉದ್ಯೋಗ ಕೊಡಿ
ಎಸ್ಸಿಎಸ್ಟಿ ಕುಟುಂಬಗಳಲ್ಲಿ ಹಲವಾರು ಮಂದಿ ಪದವಿ ಪಡೆದರೂ ಉದ್ಯೋಗ್ಯವಿಲ್ಲದೆ ಮನೆಯಲ್ಲಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಇವರಿಗೆ ತಾಲೂಕಿನ ವಿವಿಧ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗಕ್ಕೆ ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ಎಸ್ಸಿ ಮೋರ್ಚದ ಅಧ್ಯಕ್ಷ ಗಂಗಾದರ ಒತ್ತಾಯಿಸಿದರು.
ಪುರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗುತ್ತಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಮಾಹಿತಿ ನೀಡಿದರೆ, ತಾಪಂ, ತಾಲೂಕು ಕಚೇರಿಯಲ್ಲಿ ಇದೇ ರೀತಿ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಅವರು ಉತ್ತರಿಸಿದರು. ಇದೇ ವೇಳೆ ದಲಿತ ನಾಯಕ ರಾಜ ಪಲ್ಲಮಜಲು ಅವರು ಮಾತನಾಡಿ ಪುರಸಭೆ ಸಹಿತ ಕೆಲ ಕಚೇರಿಯಲ್ಲಿ ನಿವೃತ್ತ ಅಧಿಕಾರಿಗಳನ್ನೇ ಕೆಲಸಕ್ಕೆ ನೇಮಿಸಲಾಗುತ್ತಿದೆ. ಅವರಿಗೆ ಪಿಂಚಣಿ ದೊರೆಯುತ್ತಿದ್ದು ಅದರ ಬದಲು ಎಸ್ಸಿ ಎಸ್ಟಿಯವರನ್ನು ನೇಮಿಸಿ ಎಂದು ಆಗ್ರಹಿಸಿದರು. ಈ ಸಂದರ್ಭ ಪುರಸಭೆ ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಡಿ, ಎಸ್ಸಿ, ಎಸ್ಟಿ ಯವರಿಗೆ ಸಿಗುವ ಉದ್ಯೋಗ ಮಾರ್ಗದರ್ಶನ ಕುರಿತ ಮಾಹಿತಿ ನೀಡಿದರು.
ಪಲ್ಲಮಜಲು ಎಂಬಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಒಂದೇ ಮನೆ ಇದ್ದು ಅಲ್ಲಿ ಲಕ್ಷಾಂತರ ರೂಪಾಯಿ ವ್ಯಯಮಾಡಿ ಎಸ್ಸಿ ಎಸ್ಟಿಗೆ ಮೀಸಲಿಟ್ಟಿದ್ದ ಅನುದಾನವನ್ನು ರಸ್ತೆಗೆ ಖರ್ಚು ಮಾಡುವ ಮೂಲಕ ದುರುಪಯೋಗ ಪಡಿಸಲಾಗಿದೆ ಎಂದು ಜನಾರ್ದನ ಚೆಂಡ್ತಿಮಾರ್ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಪುರಸಭೆಯ ಎಂಜಿನಿಯರ್ ಹಾಗೂ ಅಂಧಿನ ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ರಾಜ ಪಲ್ಲಮಜಲು ಧ್ವನಿಗೂಡಿಸಿದರು.
ತಾಪಂ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂದ, ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ತಾಪಂ ಸದಸ್ಯ ಪದ್ಮನಾಭ ವೇದಿಕೆಯಲ್ಲಿ ಇದ್ದರು. ದಲಿತ ಮುಖಂಡರಾದ ಸತೀಶ್ ಅರಳ, ನಾರಾಯಣ ಪುಂಚಮೆ, ಸುರೇಶ್ ಅರಬಿಗುಡ್ಡೆ ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.