ವಿಟ್ಲ: ಬಡ ಹಾಗೂ ಅನಾಥ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕದಲ್ಲಿ ಪ್ರಥಮವಾಗಿ ವಿಟ್ಲ ಸಮೀಪದ ಅನಿಲಕಟ್ಟೆಯಲ್ಲಿ ಎಜ್ಯುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಕೇರಳದ ಮಡವೂರ್ ಸಿ.ಎಂ. ವಲಿಯುಲ್ಲಾಹಿ ಮಖಾಂ ಶರೀಫ್ ಅದೀನದಲ್ಲಿ ಮಡವೂರ್ ಸಿ.ಎಂ. ವಲಿಯುಲ್ಲಾಹಿ ಮಖಾಂ ಯಾತೀಂಖಾನ್ ಸಮಿತಿ ಮುಂದಾಗಿದೆ ಎಂದು ಸಮಿತಿಯ ಕನ್ವೀನರ್ ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್ ಪರ್ತಿಪ್ಪಾಡಿ ಹೇಳಿದರು.
ಧಾರ್ಮಿಕ ಪಠ್ಯದ ಜತೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ವ್ಯವಸ್ಥೆಯನ್ನು ಸುಮಾರು 50 ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಮಾಡಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳಾ ಕಾಲೇಜು ಪ್ರಾರಂಭಿಸುವ ಗುರಿ ಇಟ್ಟುಕೊಂಡು ಸುಮಾರು 1.4 ಎಕರೆ ಜಾಗವನ್ನು ಈಗಾಗಲೇ ಸಂಸ್ಥೆ ಖರೀದಿಸಿದೆ. ಮಡವೂರ್ ಸಿ.ಎಂ ಮಖಾಂ ಯತೀಂಖಾನ ಎಜ್ಯುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್‌ನ ಶಿಲಾನ್ಯಾಸ ಸಮಾರಂಭ ಡಿ.19ರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಶುಕ್ರವಾರ ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಶಿಲಾನ್ಯಾಸವನ್ನು ಸಯ್ಯದ್ ಸ್ವಾದಿಖಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೆರವೇರಿಸಲಿದ್ದಾರೆ. ತ್ವಾಖ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದು, ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಪ್ರಮುಖ ಪ್ರಭಾಷಣ ನಡೆಸಲಿದ್ದಾರೆ. ದುಆ ವನ್ನು ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ನೆರವೇರಿಸಲಿದ್ದು, ಹಾಜಿ ಯು ಶರಪುದ್ದೀನ್ ಮಾಸ್ಟರ್, ಸಯ್ಯದ್ ಹುಸೈನ್ ಬಾಲಅವಿ ತಂಙಳ್ ಕುಕ್ಕಾಜೆ, ಜಬ್ಬಾರ್ ಮಸ್ತಾನ್ ಮೂಳೂರು, ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ, ಆಹಾರ ಸಚಿವ ಯು. ಟಿ. ಖಾದರ್, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್, ಕರ್ನಾಟಕ ಗೇರು ಸಂಶೋಧನಾ ಸಮಿತಿಯ ಬಿ.ಎಚ್ ಖಾದರ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ ವಿಟ್ಲ, ಸದಸ್ಯೆ ಸಂಧ್ಯಾ ಮೋಹನ್ ಇನ್ನಿತರ ಉಲಮಾ-ಉಮರ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚೇರ್‌ಮಾನ್ ಸಯ್ಯದ್ ಹುಸೈನ್ ಬಾಲಅವಿ ತಂಙಳ್ ಕುಕ್ಕಾಜೆ, ಜತೆ ಕನ್ವಿನರ್‌ಗಳಾದ ಕೆ.ಎ ಹಸೈನಾರ್ ಮುಸ್ಲಿಯಾರ್, ಶಮೀರ್ ಪಳಿಕೆ, ಅಬೂಬಕ್ಕರ್ ಅನಿಲಕಟ್ಟೆ ಉಪಸ್ಥಿತರಿದ್ದರು.