ಬಂಟ್ವಾಳ: ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು ಭಾರತದ ಎರಡು ಗೋಡೆಗಳು. ದಕ್ಷಿಣ ಭಾರತದ ಜೀವಾಳವೇ ಪಶ್ಚಿಮಘಟ್ಟಗಳು. ದಕ್ಷಿಣ ಭಾರತಕ್ಕೆ ಮಳೆಯನ್ನು ತರುವ ಪಶ್ಚಿಮಘಟ್ಟಗಳ ಮಹತ್ವವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತುಕೊಳ್ಳಬೇಕು ಎಂದು ಪರಿಸರವಾದಿ, ಸಹ್ಯಾದ್ರಿ ಸಂಚಯದ ಸಂಚಾಲಕರಾದ ದಿನೇಶ್ ಹೊಳ್ಳ ಹೇಳಿದರು.
ಎಲ್ಲ ನದಿಗಳ ಮೂಲಗಳೂ ಪಶ್ಚಿಮಘಟ್ಟದಲ್ಲಿವೆ. ಹಾಗಾಗಿ ಪಶ್ಚಿಮಘಟ್ಟಗಳ ಅಳಿವು ಉಳಿವಿನ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಮನುಷ್ಯರ ಹಾಗೆಯೇ ಪ್ರಾಣಿಗಳಿಗೂ ಬದುಕುವ ಹಕ್ಕು ಇದೆ ಎಂದು ಎಸ್.ವಿ.ಎಸ್.ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ಸಂಘದ ಆಶ್ರಯದಲ್ಲಿ ನಡೆದ ‘ಪಶ್ಚಿಮ ಘಟ್ಟಗಳ ಅಳಿವು-ಉಳಿವು’ ಉಪನ್ಯಾಸದಲ್ಲಿ ಮಾಹಿತಿ ನೀಡಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಪ್ರಕೃತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಯುವ ಹಾಗೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಜೀವನದಲ್ಲಿ ಪ್ರಗತಿ ಹೊಂದಬೇಕಾದರೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಬೇಕು ಎಂದರು.
ಉಪನ್ಯಾಸಕರಾದ ಬಾಲಕೃಷ್ಣ ಗೌಡ, ಚೇತನ್ ಮುಂಡಾಜೆ, ಪ್ರದೀಪ್ ಪೂಜಾರಿ, ಶಿವಪ್ರಸಾದ್. ಕಾವ್ಯಶ್ರೀ, ನಮಿತಾ ಬಿ.ಎಲ್. ಉಪಸ್ಥಿತರಿದ್ದರು.ವಿಜ್ಞಾನ ಸಂಘದ ಕಾರ್ಯದರ್ಶಿ ವಿಲಾಸ್ ಸ್ವಾಗತಿಸಿ, ದಿಗಂತ್ ಎಸ್. ವಂದಿಸಿದರು. ವಿಜ್ಞಾನ ಸಂಘಧ ಅಧ್ಯಕ್ಷೆ ಉಪನ್ಯಾಸಕಿ ಕವಿತಾ ಅತಿಥಿ ಪರಿಚಯ ಮಾಡಿದರು. ಪ್ರೀತಿಕಾ ಕಾರ್ಯಕ್ರಮ ನಿರ್ವಹಿಸಿದರು.