ಕಾಂಗ್ರೆಸ್ ನಡಿಗೆ ಸುರಾಜ್ಯದೆಡೆಗೆ ಕಾರ್ಯಾಗಾರದಲ್ಲಿ ದಿನೇಶ್ ಗುಂಡೂರಾವ್ ಆರೋಪ
ಬಂಟ್ವಾಳ: ಕೇಂದ್ರ ಸರಕಾರದ ನೀತಿಯಿಂದ ಆರ್ಥಿಕ ಅರಾಜಕತೆ ಉಂಟಾಗಿದೆ. ದೇಶಕ್ಕಾಗಿ ನರೇಂದ್ರ ಮೋದಿ ಯಾವ ತ್ಯಾಗವನ್ನೂ ಮಾಡಿಲ್ಲ. ಕಾಂಗ್ರೆಸ್ ಪಕ್ಷದಿಂದಷ್ಟೇ ದೇಶದ ರಕ್ಷಣೆ ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಗುರುವಾರ ಬಂಟ್ವಾಳ ತಾಲೂಕಿನ ಕಳ್ಳಿಗೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ನಡಿಗೆ ಸುರಾಜ್ಯದ ಕಡೆಗೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಯಾಗಾರ, ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿಗೆ ಶ್ರೀಮಂತರಿಗೆ ಲಾಭ ಮಾಡುವ ಯೋಜನೆಗಳನ್ನು ಮಾತ್ರ ಹಮ್ಮಿಕೊಳ್ಳುತ್ತದೆ. ಯಾರದ್ದೋ ಸಾವಿನ ಮೇಲೆ ರಾಜಕಾರಣ ಮಾಡುತ್ತದೆ. ಪ್ರತಿಯೊಂದು ಪ್ರಕರಣಗಳಲ್ಲೂ ಹಿಟ್ ಅಂಡ್ ರನ್ ಕೇಸ್ ನಂತೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಆಪಾದಿಸಿ ಸುಮ್ಮನಾಗುತ್ತಾರೆ. ನರೇಂದ್ರ ಮೋದಿಯನ್ನು ಫಕೀರ ಎನ್ನುತ್ತಾರೆ, ಅವರು ಯಾವ ತ್ಯಾಗ ಮಾಡಿದ್ದಾರೆ, ಇಂದು ದೇಶ ಅರಾಜಕತೆಯತ್ತ ಸಾಗುತ್ತಿದೆ. ಮೋದಿಯಿಂದ ಯಾವ ಕೊಡುಗೆಯೂ ದೇಶಕ್ಕೆ ಇಲ್ಲ, ಬದಲಾಗಿ ತೊಂದರೆಯೇ ಜಾಸ್ತಿ, ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮೋದಿ ಕುರಿತು ಪ್ರಸ್ತಾವಿಸಲಿದ್ದಾರೆ, ಇಲ್ಲವಾದರೆ ಬೆಳಗಾವಿಯಲ್ಲಿ ನಡೆಯುವ ಬೃಹತ್ ಸಭೆಯಲ್ಲಿ ಮೋದಿ ಅವರ ಕುರಿತು ಎಳೆಎಳೆಯಾಗಿ ಮಾತನಾಡಲಿದ್ದಾರೆ ಎಂದರು.
ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿದ ದಿನೇಶ್ ಗುಂಡೂರಾವ್, ಸರಕಾರ ನುಡಿದಂತೆ ನಡೆಯುತ್ತಿದೆ. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ನಂ.2 ಆಗಿದ್ದು ದೊಡ್ಡ ಸಾಧನೆ. ನಮ್ಮ ಸರಕಾರ ಬಂದ ಮೇಲೆ ಜನರ ಆದ್ಯತೆಗಳಿಗೆ ಮಹತ್ವ ನೀಡುತ್ತಿದೆ. ಇದನ್ನು ಕಾರ್ಯಕರ್ತರು ಪ್ರಚಾರ ಮಾಡಬೇಕು. ಬಿಜೆಪಿಯವರದ್ದು ಎರಡು ನಾಲಗೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಮಾಡದವರು ಇಂದು ನಮಗೆ ಪಾಠ ಹೇಳುತ್ತಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಕೋಮುವಾದಿ ಸಿದ್ಧಾಂತ ರಾಜಧಾನಿ
ದಕ್ಷಿಣ ಕನ್ನಡ ಜಿಲ್ಲೆ ಕೋಮುವಾದ ಸಿದ್ಧಾಂತಗಳ ರಾಜಧಾನಿಯಾಗಿರುವುದು ವಿಷಾದ ಎಂದ ದಿನೇಶ್ ಗುಂಡೂರಾವ್, ಜನರನ್ನು ಒಡೆಯುವ ಕೆಲಸ ಈ ಜಿಲ್ಲೆಯ ಕೋಮುವಾದಿಗಳಿಂದ ಆಗುತ್ತಿದೆ. ಹಳೇಯದೆಲ್ಲವನ್ನೂ ಜನರು ಮರೆತಿದ್ದಾರೆ, ಅವರಿಗೆ ಕಾಂಗ್ರೆಸ್ ತತ್ವ ಸಿದ್ಧಾಂತ, ಬಡವರ ಪರ ಯೋಜನೆಗಳ ನೆನಪು ಮಾಡುವ ಕಾರ್ಯ ಆಗಬೇಕಿದೆ ಎಂದರು.
ಐಸ್ ಕ್ರೀಮ್ ನಂತೆ
ನಮ್ಮಿಂದ ಪಕ್ಷಕ್ಕೆ ಹಿತವಾಗಬೇಕು, ಅದನ್ನು ಬಿಟ್ಟು ಪಕ್ಷಕ್ಕೆ ಮಾರಕವಾಗುವಂತೆ ಮಾತನಾಡುವುದು ಸರಿಯಲ್ಲ. ನಮ್ಮಲ್ಲಿ ಕೆಲವು ಮಂದಿ ಐಸ್ ಕ್ರೀಂ ನಂತೆ ಇದ್ದಾರೆ. ಪಕ್ಷದೊಳಗಿದ್ದು, ಪಕ್ಷದವರನ್ನೇ ದೂರುತ್ತಾರೆ. ಪಕ್ಷಾತೀತ ಹೋರಾಟವೇನಾದರೂ ಇದ್ದರೆ ಕಾಂಗ್ರೆಸ್ ಪಕ್ಷದವರು ನಮ್ಮ ಮುಖಂಡರನ್ನೇ ಟೀಕೆ ಮಾಡುತ್ತಾರೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಪರೋಕ್ಷವಾಗಿ ಕಾಂಗ್ರೆಸ್ ಭಿನ್ನರ ವಿರುದ್ಧ ಚಾಟಿ ಬೀಸಿದರು.
ನರೇಂದ್ರ ಮೋದಿಯವರನ್ನು ಟೀಕಿಸುವುದರಲ್ಲಿ ರಮಾನಾಥ ರೈ ಗಳೂ ಹಿಂದೆ ಬೀಳಲಿಲ್ಲ. ಅವರು ನರೇಂದ್ರ ಡ್ರಾಮೋದರ್ ಮೋದಿ ಎಂದು ಲೇವಡಿ ಮಾಡಿದರು. ಇಂದಿರಾಗಾಂಧಿ ಬಡವರಿಗೆ ಬ್ಯಾಂಕ್ ಪ್ರವೇಶಿಸಲು ಅನುವು ಮಾಡಿಕೊಟ್ಟರೆ, ಮೋದಿ ಬ್ಯಾಂಕಿನ ಹೊರಗೆ ನಿಲ್ಲಿಸಿದರು. ಎಲ್ಲ ಜಾತಿ, ಧರ್ಮಗಳನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷ ಕಾಂಗ್ರೆಸ್. ಅನೇಕ ಮಹನೀಯರು ಪಕ್ಷಕ್ಕಾಗಿ ದುಡಿದಿದ್ದಾರೆ. ಇತಿಹಾಸವನ್ನು ನಾವು ಅರಿಯಬೇಕಾಗಿದೆ. ನೆಹರೂ 3 ಸಾವಿರ ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ, ಅಂಥವರ ವಿರುದ್ಧ ಮಸಿ ಬಳಿಯುವ ಕೆಲಸವನ್ನು ಮಾಡಲಾಗುತ್ತಿದೆ. ಯಾರು ಸ್ವಾತಂತ್ರ್ಯ ಹೋರಾಟಗಾರರನ್ನು ದೂರುತ್ತಾರೆಯೋ ಅವರು ದೇಶದ್ರೋಹಿಗಳು. ಧರ್ಮ, ದೇವರು, ದೇಶಪ್ರೇಮ ಹೆಸರಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ದೂರಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಚರಕದ ಧ್ವಜವನ್ನು ಪ್ರತಿ ಗ್ರಾಮದಲ್ಲೂ ಗಾಂಧಿ ಕಟ್ಟೆ ಸ್ಥಾಪಿಸಿ ಹಾರಿಸಬೇಕು. ತನ್ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಪಕ್ಷದ ಕೊಡುಗೆಯನ್ನು ವಿವರಿಸುವ ಕೆಲಸವಾಗಬೇಕು ಎಂದು ರೈ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರರದ ಮಾಜಿ ಅಧ್ಯಕ್ಷ ಎಲ್. ಹನುಮಂತಯ್ಯ, ವಿಧಾನಪರಿಷತ್ತು ಮುಖ್ಯ ಸಚೇತಕ ಐವನ್ ಡಿಸೋಜ, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ಧರ್ಮೇಂದ್ರ ಮೊದಲಾದವರು ಉಪಸ್ಥಿತರಿದ್ದರು.