ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ವತಿಯಿಂದ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ನಡಿಗೆ, ಸುರಾಜ್ಯದ ಕಡೆಗೆ ಎಂಬ ಕಾರ್ಯಾಗಾರ, ಉಪನ್ಯಾಸ ಮತ್ತು ಸಂವಾದ ಬಂಟ್ವಾಳ ತಾಲೂಕಿನ ಕಳ್ಳಿಗೆ ಎಂಬಲ್ಲಿ ಡಿಸೆಂಬರ್ 15ರಂದು ನಡೆಯಲಿದೆ. ಅದರ ಸಿದ್ಧತೆಗಳು ಬುಧವಾರ ನಡೆದವು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಯು.ಟಿ.ಖಾದರ್, ವಿಧಾನಪರಿಷತ್ತು ಮುಖ್ಯ ಸಚೇತಕ ಐವನ್ ಡಿಸೋಜ, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಕೆಪಸಿಸಿ ಮಹಿಳಾ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಲ್. ಹನುಮಂತಯ್ಯ ಭಾಗವಹಿಸುವರು.
ದೇಶಕ್ಕೆ ನೆಹರೂ, ಇಂದಿರಾಗಾಂಧಿ, ರಾಜೀವ ಗಾಂಧಿ, ದೇವರಾಜ ಅರಸರ ಕೊಡುಗೆಯ ಇತಿಹಾಸದ ಮೆಲುಕು, ರಾಜ್ಯ ಸರಕಾರದ ಆಡಳಿತ ವೈಶಿಷ್ಟ್ಯ ಸಾರುವ ನುಡಿದಂತೆ ನಡೆದ ಸರಕಾರ ಕೇಂದ್ರದ ಬಿಜೆಪಿ ಸರಕಾರದ ವೈಫಲ್ಯ ಸಾರುವ ಮೋಸ ಹೋದ ಜನತೆ, ಸೌಹಾರ್ದತೆ ಕಾಪಾಡುವಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾತ್ರ ಕೋಮು ಸಾಮರಸ್ಯ, ಚುನಾವಣಾ ತಂತ್ರ-ಪ್ರತಿತಂತ್ರ ಮತ್ತು ಪಕ್ಷ ಸಂಘಟನೆ ಕುರಿತ ಪಕ್ಷ ಸಂಘಟನೆ, ಗೆಲುವಿನತತ ಗುರಿ ಎಂಬ ಕಾರ್ಯಾಗಾರಗಳು ನಡೆಯುವುದು ಎಂದು ಸಚಿವ ಬಿ.ರಮಾನಾಥ ರೈ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.