ಬಂಟ್ವಾಳ

ಎತ್ತಿನಹೊಳೆ ಯೋಜನೆ ವಿರುದ್ಧ ವಿಧಾನಸೌಧ ಚಲೋಕ್ಕೂ ಸಿದ್ಧ

  • ಬಿ.ಸಿ.ರೋಡಿನಲ್ಲಿ ನಡೆದ ಪಂಚತೀರ್ಥ –ಸಪ್ತಕ್ಷೇತ್ರ ಯಾತ್ರೆಯಲ್ಲಿ ಒಡಿಯೂರು ಸ್ವಾಮೀಜಿ
  • ನೇತ್ರಾವತಿ ಉಳಿಸಲು ಸಚಿವ ರಮಾನಾಥ ರೈ ಆಹ್ವಾನಿಸಿದ ಹರಿಕೃಷ್ಣ ಬಂಟ್ವಾಳ್, ವಿಜಯಕುಮಾರ್ ಶೆಟ್ಟಿ

ಬಂಟ್ವಾಳ: ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸುವವರೆಗೆ ಹೋರಾಟ ನಡೆಸಬೇಕು, ಇದಕ್ಕಾಗಿ ವಿಧಾನಸೌಧ ಚಲೋ ನಡೆಸಲು ಸಿದ್ಧ, ಯೋಜನೆ ವಿರುದ್ಧ ನಾವು ಗಟ್ಟಿಯಾಗಿ ನಿಲ್ಲುವ ಅನಿವಾರ್ಯತೆ ಇದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ಬಿ.ಸಿ.ರೋಡಿನ ರಕ್ತೇಶ್ವರಿ ದೇವಿ ಸನ್ನಿಧಿ ಬಳಿ ಸಂಸದ ನಳಿನ್ ಕುಮಾರ್ ನೇತೃತ್ವದ ಎತ್ತಿನಹೊಳೆ ಯೋಜನೆ ವಿರೋಧಿಸಿ ಜೀವನದಿ ನೇತ್ರಾವತಿ ಉಳಿಸಿ ಕಾರ್ಯಕ್ರಮದ ಅಂಗವಾಗಿ ಪಂಚತೀರ್ಥ-ಸಪ್ತಕ್ಷೇತ್ರ ರಥಯಾತ್ರೆಯಲ್ಲಿ ಅವರು ಮಾತನಾಡಿ, ಜಾತಿ, ಮತ, ಭೇದ ಮರೆತು ನಾವೆಲ್ಲ ಒಂದಾಗುವ ಅಗತ್ಯವಿದೆ. ನೇತ್ರಾವತಿ ಇಂದು ಸೊರಗಿದ್ದಾಳೆ, ನಾವು ಎದ್ದೇಳಬೇಕು, ಜೀವನದಿ ರಕ್ಷಿಸಬೇಕು ಎಂದು ಕರೆಯಿತ್ತರು.

ರಾಜಕಾರಣಿಗಳು, ಅಧಿಕಾರಸ್ಥರು ಯೋಜನೆ ಸಮರ್ಪಕವಾಗಿ ಇದೆಯೇ ಇಲ್ಲವೇ ಎಂಬುದನ್ನು ತಿಳಿಸಬೇಕು, ಕೆಲಸವನ್ನು ಮುಂದುವರಿಸಿದರೆ ನಷ್ಟ ನಮಗೇ, ನಮ್ಮ ತೆರಿಗೆಯ ಹಣವನ್ನು ವ್ಯರ್ಥಗೊಳಿಸುತ್ತಿದ್ದೇವೆ ಎಂದು ಸ್ವಾಮೀಜಿ ಹೇಳಿದರು.

ಆನಂದ ಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಉತ್ತರ ಭಾರತದಲ್ಲಿ ನೀರು ಎಂದರೆ ಮರ್ಯಾದೆ. ನಾವಿಂದು ನೀರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರೆ ಮರ್ಯಾದೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರ್ಥ. ಎತ್ತಿನಹೊಳೆ ಯೋಜನೆ ವಿರುದ್ಧದ ಈ ಹೋರಾಟದಲ್ಲಿ ತಾನು ಸದಾ ನಿಮ್ಮೊಂದಿಗಿದ್ದೇನೆ ಎಂದು ಆಶ್ವಾಸನೆ ನೀಡಿದರು.

ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ಮುಂದಿನ ಪೀಳಿಗೆ ಇಂದು ಬದುಕಬೇಕು ಎಂದಿದ್ದರೆ, ಈ ಯೋಜನೆಯನ್ನು ನಿಲ್ಲಿಸಬೇಕು. ನೀರಿಗೆ ಜಾತಿ, ಮತ ಬೇಧ ಲ್ಲ. ಜೀವಸಂಕುಲ ನಾಶ ಮಾಡುವ ಯೋಜನೆ ಬೇಡ. ಒಡಿಯೂರು ಶ್ರೀಗಳು ಹೇಳಿದಂತೆ ನಾವು ಎಲ್ಲ ಹಂತದ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದರು.

ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ ಮಾತನಾಡಿ, ಘನ ಸರಕಾರ ಎಲ್ಲ ಭಾಗ್ಯ ಕೊಟ್ಟಿದೆ, ಆದರೆ ನೀರಿನ ಭಾಗ್ಯವನ್ನು ನಮ್ಮಿಂದ ಕಸಿದುಕೊಂಡಿದೆ. ನೇತ್ರಾವತಿ ಉಳಿಸಲು ಪ್ರಾಣತ್ಯಾಗಕ್ಕೂ ಸಿದ್ಧ ಎಂದರು.

ಜೆಡಿಎಸ್ ಮುಖಂಡ ಪಿ.ಎ.ರಹೀಂ ಮಾತನಾಡಿ, ನೇತ್ರಾವತಿ ಯೋಜನೆಯ ವಿರುದ್ಧ ದೇವೇಗೌಡ, ಕುಮಾರಸ್ವಾಮಿ ಇದ್ದಾರೆ. ಈ ಯೋಜನೆ ಮೂರ್ಖತನದ ಪರಮಾವಧಿಯನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದರು.

ನೇತ್ರಾವತಿ ನದಿ ಉಳಿಸಿ ಸಮಿತಿಯ ಗೌರವಾಧ್ಯಕ್ಷ ವಿಜಯಕುಮಾರ್ ಶೆಟ್ಟಿ ಮಾತನಾಡಿ, ರಮಾನಾಥ ರೈಗಳು ನಿಲುವಳಿ ಮಂಡಿಸಲು ಒತ್ತಾಯಿಸುವುದು ಯಾಕೆ, ರಾಜೀನಾಮೆ ನೀಡಿದರೆ ನಿಮ್ಮನ್ನು ಮತ್ತೆ ಮಂತ್ರಿ ಮಾಡಲು ನಾವೆಲ್ಲ ಒಟ್ಟಾಗುತ್ತೇವೆ, ಇಲ್ಲಿ ಪಕ್ಷಬೇಧ ಇಲ್ಲ. ಎಂದು ಪ್ರಶ್ನಿಸಿದರು.

ರಮಾನಾಥ ರೈಗಳೇ ನೇತ್ರಾವತಿ ಬೇಕು ಎಂದು ಹೇಳಿ

ಸಾಮಾಜಿಕ ನೇತಾರ, ಬಿಲ್ಲವ ಮಹಾಮಂಡಲ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ ಮಾತನಾಡಿ, ಅಧರ್ಮದ ರಾಜಕಾರಣವನ್ನು ಮಟ್ಟಹಾಕಲು ನಾವು ಕೃಷ್ಣರಾಗಬೇಕು. ನಮ್ಮದೇ ಊರಿನವರಾದ ಉಸ್ತುವಾರಿ ಸಚಿವ ರಮಾನಾಥ ರೈಯವರೇ ರಮಾನಾಥ ರೈಗಳೇ ಜನರಿಗೆ ದ್ರೋಹ ಮಾಡಬೇಡಿ, ನೇತ್ರಾವತಿ ಉಳಿಸಲು ನಮ್ಮೊಂದಿಗೆ ಸೇರಿ, ನಿಮಗೆ ನಿಮ್ಮ ಪಾರ್ಟಿ, ಮಂತ್ರಿ ಮುಖ್ಯವಲ್ಲ. ಅದು ಹೋದರೆ ಆಮೇಲೆ ಬರಬಹುದು. ಆದರೆ ನೀರೇ ಈ ಊರಿಂದ ಹೋದರೆ ಎಲ್ಲರೂ ಹೋದಾಗೆ.. ನಿಮಗೆ ದೈರ್ಯವಿದ್ದರೆ ನಿಮ್ಮ ಬಾಯಿಂದ ನನಗೆ ನೇತ್ರಾವತಿ ಬೇಕು ಎಂದು ತಿಳಿಸಿ ಎಂದು ಸವಾಲೆಸೆದರು.

ಸಂಸದ ನಳಿನ್ ಕುಮಾರ್ ಕಟೀಲ್, ಮುಖಂಡರಾದ ರಾಜೇಶ್ ನಾಯ್ಕ್ ಉಳೇಪಾಡಿಗುತ್ತು, ಜಿತೇಂದ್ರ ಕೊಟ್ಟಾರಿ, ರುಕ್ಮಯ ಪೂಜಾರಿ, ಎಸ್.ಜಿ.ಮಯ್ಯ, ಸಂಜೀವ ಮಠಂದೂರು, ಕೆ.ಮೋನಪ್ಪ ಭಂಡಾರಿ, ಗೋಪಾಲಕೃಷ್ಣ ಹೇರಳೆ, ಪುರುಷೋತ್ತಮ ಚಿತ್ರಾಪುರ, ದಿನಕರ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಬಿ.ದೇವದಾಸ ಶೆಟ್ಟಿ, ಎಂ.ಜಿ.ಹೆಗಡೆ, ಉಮಾನಾಥ ಕೋಟ್ಯಾನ್, ರಾಮಚಂದ್ರ ಬೈಕಂಪಾಡಿ, ಸುಲೋಚನಾ ಜಿ.ಕೆ. ಭಟ್, ಪ್ರಕಾಶ್ ಅಂಚನ್, ರಾಮದಾಸ ಬಂಟ್ವಾಳ, ಗುರುದತ್ತ ನಾಯಕ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಗೋಪಾಲ ಸುವರ್ಣ, ಮಚ್ಚೇಂದ್ರ ಸಾಲ್ಯಾನ್, ರಮೇಶ್ ಸಾಲ್ಯಾನ್, ರಮಾನಂದ ರಾಯಿ, ಭಾಸ್ಕರ ಟೈಲರ್ ಸಹಿತ ನೂರಾರು ಮಂದಿ ಮೆರವಣಿಗೆಯಲ್ಲಿ ಬಿ.ಸಿ.ರೋಡಿಗೆ ಆಗಮಿಸಿದರು. ರಾಜೇಶ್ ನಾಯಕ್ ಉಳಿಪಾಡಿಗುತ್ತು ಅತಿಥಿಗಳನ್ನು ಸ್ವಾಗತಿಸಿದರು. ಪಂಚತೀರ್ಥ ಸಮಿತಿಯ ಸಂಚಾಲಕ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ನೀಡಿದರು.

ಈ ಸಂದರ್ಭ ಪೊಳಲಿಯಿಂದ ಶಾಂಭವಿ ನದಿ ಪವಿತ್ರಜಲವನ್ನು ಮೆರವಣಿಗೆ ಮೂಲಕ ತಂದು ಯಾತ್ರೆಯ ಕಲಶಕ್ಕೆ ಸಮರ್ಪಿಸಲಾಯಿತು. ಪೊಳಲಿ ವೆಂಕಟೇಶ ನಾವಡ ನೇತೃತ್ವ ವಹಿಸಿದ್ದರು.

ಇದಕ್ಕೂ ಮುನ್ನ ಕಲ್ಲಡ್ಕದಲ್ಲಿ ರಥಯಾತ್ರೆಯನ್ನು ಡಾ.ಪ್ರಭಾಕರ ಭಟ್ ಕಲ್ಲಡ್ಕ ಸ್ವಾಗತಿಸಿದರು. ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಪದ್ಮನಾಭ ಕೊಟ್ಟಾರಿ, ಸುಲೋಚನಾ ಜಿ.ಕೆ. ಭಟ್ ಸಹಿತ ಹಲವರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts