ಕಲ್ಲಡ್ಕ

ಕಲ್ಲಡ್ಕ ಮಕ್ಕಳ ಸಾಹಸ ವೈಭವ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೈಶಿಷ್ಟ್ಯವೆಂದರೆ ವಿದ್ಯಾರ್ಥಿಕೇಂದ್ರಿತ ಶಿಕ್ಷಣ. ಬಡ, ಹಿಂದುಳಿದ ಮಕ್ಕಳಿಗೆ ಊಟ, ವಿದ್ಯಾಭ್ಯಾಸದ ಜೊತೆಗೆ ನೆಲದ ಮಹತ್ವ ವಿವರಿಸುವ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಕ್ರೀಡೋತ್ಸವ ದೇಶದ ಗಮನ ಸೆಳೆದಿದೆ.

ಬದುಕಿನ ಪ್ರತಿಯೊಂದು ಮಜಲಿನಲ್ಲೂ ಅನೇಕ ಅಡೆ, ತಡೆಗಳು. ಇವನ್ನು ಮೆಟ್ಟಿ ನಿಲ್ಲಬೇಕಾದರೆ ಕೇವಲ ಅಂಕಕೇಂದ್ರಿತ ಪಾಠವಷ್ಟೇ ಅಲ್ಲ, ಪ್ರತಿಯೊಂದು ಘಟ್ಟದಲ್ಲೂ ಜೀವನ ಕೌಶಲವನ್ನು ರೂಢಿಸಿಕೊಳ್ಳುವ ಚಾಕಚಕ್ಯತೆಯನ್ನು ಹೊಂದಿರಬೇಕಾಗಿರುವುದು ಅತ್ಯಗತ್ಯ.

ಇಂಥದ್ದೊಂದು ಗುರಿ ಇಟ್ಟುಕೊಂಡು ಆರಂಭಗೊಂಡದ್ದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ. ಅದರ ಸ್ಥಾಪಕ ಕಲ್ಲಡ್ಕ ಡಾ. ಪ್ರಭಾಕರ ಭಟ್. ಪ್ರಸ್ತುತ ಅಧ್ಯಕ್ಷರಾಗಿ ನಾರಾಯಣ ಸೋಮಯಾಜಿ, ಸಂಚಾಲಕರಾಗಿ ವಸಂತ ಮಾಧವ ಕಾರ್ಯನಿರ್ವಹಿಸುತ್ತಿದ್ದಾರೆ. ಇಡೀ ಕಲ್ಲಡ್ಕದ ಹೆಸರು ವರ್ಷದಲ್ಲೊಮ್ಮೆ ಅನುರಣಿಸುವುದು ಹೊನಲು ಬೆಳಕಿನ ಕ್ರೀಡೋತ್ಸವ ಸಂದರ್ಭ.

ಭಾನುವಾರ ಡಿಸೆಂಬರ್ 11ರಂದು ಕಲ್ಲಡ್ಕ ಹನುಮಾನ್ ನಗರದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯುವ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ಪ್ರದರ್ಶನ ನೀಡಲಿದ್ದಾರೆ. ಹೊನಲು ಬೆಳಕಿನ ಕ್ರೀಡೋತ್ಸವ ಸಂಜೆ 6.15ರ ವೇಳೆಗೆ ಆರಂಭಗೊಳ್ಳುತ್ತದೆ. ಈ ಸಂದರ್ಭ ಸಮವಸ್ತ್ರ ಧರಿಸಿದ ಕಾಲೇಜು ವಿದ್ಯಾರ್ಥಿಗಳು ಘೋಷ್ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ ಶಿಸ್ತಿನ ಸೈನಿಕರಂತೆ ಪಥಸಂಚಲನ ಮಾಡುತ್ತಾರೆ. ಕೋವಿ ಸಮತಾ ಪ್ರದರ್ಶನ, ಶಿಶುಮಂದಿರದ ಪುಟಾಣಿಗಳಿಂದ ನೃತ್ಯ, ಘೋಷ್ ಪ್ರದರ್ಶನ, ಜಡೆಕೋಲಾಟ ನೃತ್ಯಗಳು ಬಳಿಕ ನಡೆಯುವುದು.ಅದಾದ ಬಳಿಕ ಡಾ.ಬಿ.ಆರ್.ಅಂಬೇಡ್ಕರ್ 125ನೇ ಜನ್ಮದಿನಾಚರಣಾ ವರ್ಷ ಆಚರಣೆ, ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಲು ದೀಪಗಳ ಸಂಯೋಜನೆ ನೋಡಲು ಆಕರ್ಷಕವಾಗಿರುತ್ತದೆ.ಭಾರತೀಯ ನಿಶ್ಯಸ್ತ್ರ ಯುದ್ಧ ಕಲೆ ನಿಯುದ್ಧ, ಯೋಗಾಸನ, 500ಕ್ಕೂ ಅಧಿಕ ಪ್ರಾಥಮಿಕ ವಿದ್ಯಾರ್ಥಿಗಳಿಂದ ಓಂಕಾರ, ತಾವರೆ ರಚನೆಗಳೊಂದಿಗೆ ವಿಶೇಷ ಪ್ರದರ್ಶನ ಇರಲಿದೆ.

ವಿದ್ಯಾರ್ಥಿಗಳ ಮಲ್ಲಕಂಬ ಪ್ರದರ್ಶನ ನೋಡಲೆಂದೆ ವಿವಿಧೆಡೆಗಳಿಂದ ಜನರು ಆಗಮಿಸುತ್ತಾರೆ. ಚಕ್ರ ಸಮತೋಲನ, ಬೆಂಕಿ ಸಾಹಸ, ಸ್ಕೇಟಿಂಗ್ ಪ್ರದರ್ಶನ, ಕೂಪಿಕಾ ಸಮತೋಲನದಂಥ ಸಾಹಸ ಪ್ರದರ್ಶನಗಳು ಮೈನವಿರೇಳಿಸುವಂತೆ ಮಾಡುತ್ತವೆ.

ಸಾಂಘಿಕ ವಿಭಿನ್ನ ರಚನೆಗಳ ವೈವಿಧ್ಯಪೂರ್ಣ ಸಾಮೂಹಿಕ ಚಟುವಟಿಕೆ, ಸಾಹಸಮಯ, ರೋಮಾಂಚಕ, ರಾಷ್ಟ್ರಭಕ್ತಿಪ್ರೇರಕ ವೈಶಿಷ್ಟಪೂರ್ಣ ಪ್ರತಿಭಾಪ್ರದರ್ಶನಗಳನ್ನು ನೋಡಲು ಪ್ರತಿ ವರ್ಷ ಗಣ್ಯ ಅತಿಥಿಗಳ ದಂಡೇ ಹರಿದುಬರುತ್ತದೆ. ಈ ಬಾರಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಅನಂತ ಕುಮಾರ್, ಶರತ್ ಪವಾರ್, ನಳಿನ್ ಕುಮಾರ್ ಕಟೀಲ್, ಆರ್.ಕೆ.ಸಿನ್ಹಾ, ಸುಧಾಕರ ರಾವ್ ಸಹಿತ ಹಲವು ಗಣ್ಯರ ಉಪಸ್ಥಿತಿ ಇರಲಿದೆ.

ಶ್ರೀರಾಮ ವಿದ್ಯಾಕೇಂದ್ರದ ವಿಶಿಷ್ಟತೆ ಇರುವುದು ಪ್ರತಿಯೊಂದು ವಿದ್ಯಾರ್ಥಿಗಳನ್ನು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದರಲ್ಲಿ. ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಸಂಸ್ಥೆಯ ಪುಟಾಣಿಗಳಿಂದ ಪದವಿ ವಿದ್ಯಾರ್ಥಿಗಳವರೆಗೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಇದು ವಿದ್ಯಾರ್ಥಿಗಳ ಮಾನಸಿಕ ಸದೃಢತೆಯ ಜೊತೆಗೆ ದೈಹಿಕವಾಗಿಯೂ ಬಲಶಾಲಿಯಾಗಿ ಕಠಿಣ ಸವಾಲುಗಳನ್ನು ಎದುರಿಸಲು ಪ್ರೇರಕ.

1980ರಲ್ಲಿ  ಶ್ರೀರಾಮ ಪ್ರೌಢಶಾಲೆ ಶ್ರೀರಾಮ ಭಜನಾ ಮಂದಿರಲ್ಲಿ ಆರಂಭಗೊಂಡಿತು. ಪುತ್ತೂರು ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶ್ರೀರಾಮ ಪ್ರೌಢಶಾಲೆಯು ಆರಂಭಗೊಳ್ಳುವ ಮೂಲಕ ಈಗಿನ ಬೃಹತ್ ವಿದ್ಯಾಸಂಸ್ಥೆಗೆ ನಾಂದಿಯಾಯಿತು. ಶ್ರೀರಾಮ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಗುರುಕುಲ ಮಾದರಿಯ ತರಗತಿಗಳಿವೆ. ವಿದ್ಯಾಕೇಂದ್ರವು ಸಾಮಾಜಿಕ ಪರಿವರ್ತನೆಯ ಮತ್ತು ಸಂಸ್ಕಾರದ ಕೇಂದ್ರವಾಗಿರಬೇಕೆಂಬುದು ವಿದ್ಯಾಕೇಂದ್ರದ ಸಂಸ್ಥಾಪಕ ಡಾ ಕಲ್ಲಡ್ಕ ಪ್ರಭಾಕರ ಭಟ್ ಆಶಯ. ಈ ಹಿನ್ನೆಲೆಯಲ್ಲಿ 2006ರಲ್ಲಿ ಪದವಿ ಪೂರ್ವ ತರಗತಿಗಳು ಕಲಾ, ವಾಣಿಜ್ಯ, ವಿಜ್ಞಾನ ವಿಷಯಗಳೊಂದಿಗೆ ಆರಂಭಗೊಂಡಿದೆ.2009ರಲ್ಲಿ ಬಿ.ಬಿ.ಯಂ ಮತ್ತು ಬಿ.ಕಾಂ ಪದವಿ ತರಗತಿಗಳು ಆರಂಭಗೊಂಡವು. ಸುಮಾರು 20ಎಕ್ರೆ ಪ್ರದೇಶದಲ್ಲಿ ವಿಶಾಲ ಆಟದ ಮೈದಾನ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಹಾಗೂ ಪದವಿ ತರಗತಿಳಿಗೆ ಪ್ರತ್ಯೇಕ ಕಟ್ಟಡಗಳು ಇವೆ. ವೇದವ್ಯಾಸ, ಮಧುಕರ, ಅಜಿತ ಸಭಾಂಗಣಗಳು ಸಾಮೂಹಿಕ ಪ್ರಾರ್ಥನೆ ಹಾಗೂ ಸಭೆ ಸಮಾರಂಭಗಳಿಗಾಗಿ ನಿರ್ಮಾಣವಾಗಿದೆ.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts