ಕಲ್ಲಡ್ಕ

ಬಲಿಷ್ಠ ಭಾರತ ನಿರ್ಮಾಣಕ್ಕೆ ಗೋಸಂಪತ್ತೇ ಶ್ರೀರಕ್ಷೆ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ “ವಸುಧಾರಾ’’ ಲೋಕಾರ್ಪಣೆಗೊಳಿಸಿ ರಾಘವೇಶ್ವರ ಶ್ರೀ ಸಂದೇಶ

ಬಂಟ್ವಾಳ: ಎಲ್ಲ ದೇವಸ್ಥಾನಗಳಿಗಿಂದ ಶ್ರೇಷ್ಠವಾದದ್ದು ಗೋಮಾತೆ. ಗೋವಿನೊಳಗೆ ಎಲ್ಲ ದೇವರ ಶಕ್ತಿ ಅಡಕವಾಗಿದೆ. ಗೋವನ್ನು ಕೊಂದರೆ ಮುಕ್ಕೋಟಿ ದೇವತೆಗಳನ್ನು ಕೊಂದಂತೆ.ಭಾರತ ಬಲಿಷ್ಠವಾಗಬೇಕಿದ್ದರೆ ಗೋಮಾತೆಯನ್ನು ಉಳಿಸಿ, ರಕ್ಷಿಸಬೇಕು.

ಜಾಹೀರಾತು

ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನೀಡಿದ ಸಂದೇಶವಿದು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆವರಣದಲ್ಲಿ ಗುರುವಾರ ನೂತನವಾಗಿ ನಿರ್ಮಾಣಗೊಂಡ ಸ್ವದೇಶೀ ಗೋವುಗಳ ಗೋಶಾಲೆ “ವಸುಧಾರಾ’’ ಲೋಕಾರ್ಪಣೆಗೊಳಿಸಿ ಮಾತನಾಡಿದ ಶ್ರೀಗಳು, ಗೋವನ್ನು ಸಾಮೂಹಿಕವಾಗಿ ವಧಿಸುವ ಮೂಲಕ ನಮ್ಮ ರಾಷ್ಟ್ರದ ಶಕ್ತಿಯನ್ನು ಕುಂದಿಸುವಂತೆ ಮಾಡಿದವರು  18ನೇ ಶತಮಾನದಲ್ಲ ಬ್ರಿಟಿಷರು. ಪ್ರಪಂಚದಲ್ಲಿ ಗೋಮಾಂಸ ರಫ್ತು ಮಾಡುವ ಪ್ರಮುಖ ದೇಶವೆಂದು ಭಾರತಕ್ಕೆ ಅಪಖ್ಯಾತಿ ಇದೆ. ಇದನ್ನು ತೊಡೆದುಹಾಕಬೇಕಾದರೆ, ಗೋವನ್ನು ರಕ್ಷಿಸಬೇಕು. ನಾವಿಂದು ಹುಲಿಯ ಬದಲು ಗೋವನ್ನು ರಾಷ್ಟ್ರಪ್ರಾಣಿಯನ್ನಾಗಿಸಬೇಕು. ಚಲಿಸುವ ದೇವಾಲಯವೇ ಆಗಿರುವ ಗೋವು ಎಲ್ಲ ದೇವಸ್ಥಾನಗಳಿಂದ ದೊಡ್ಡದು ಅದು ನಮ್ಮ ಶಕ್ತಿ ಎಂದರು.

ವಸು ಎಂದರೆ ಸಂಪತ್ತು, ಧಾರಾ ಎಂದರೆ ಹರಿವು. ಗೋವು ಎಂದರೆ ಸಂಪತ್ತಿನನ ಹರಿವು. ಇಂದು ದೇಶದಲ್ಲಿ ಒಳಗಿನಿಂದಲೂ ಹೊರಗಿನಿಂದಲೂ ದುಷ್ಟಶಕ್ತಿಗಳು ನಮ್ಮನ್ನು ನಾಶಗೊಳಿಸುವ ಇರಾದೆ ಹೊಂದಿದ್ದರೆ, ಅವರನ್ನು ತೊಡೆದುಹಾಕಲು ನಾವಿಂದು ಕಠಿಣ ಪರಿಸ್ಥಿತಿ ಎದುರಿಸಲು ಶಕ್ತರಾಗಿರಬೇಕು, ನಮ್ಮೊಳಗಿನ ಭಯವನ್ನು ತೊಡೆದುಹಾಕಿ ಎಲ್ಲವನ್ನೂ ಗೆಲ್ಲುವಂತೆ ಮಾಡುವ ಶಿಕ್ಷಣ ಅಗತ್ಯ ಎಂದು ಸ್ವಾಮೀಜಿ ಸಲಹೆ ನೀಡಿದರು. ಗೋಶಾಲೆಯನ್ನು ಶ್ರೀ ರಾಮಚಂದ್ರಾಪುರ ಮಠ ನಿರ್ವಹಿಸಲಿದೆ ಎಂದು ಸ್ವಾಮೀಜಿ ಹೇಳಿದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಅವರು, ಗೋರಕ್ಷಣೆಯನ್ನು ಪ್ರಧಾನ ಧ್ಯೇಯವಾಗಿರಿಸಿಕೊಂಡವರು ರಾಘವೇಶ್ವರ ಸ್ವಾಮೀಜಿಯವರು. ಈ ಹಿನ್ನೆಲೆಯಲ್ಲಿ ಅವರಿಂದ ಗೋಶಾಲೆ ಲೋಕಾರ್ಪಣೆಗೊಂಡಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಗೋವಿನ ಮಹತ್ವದ ಕುರಿತು ಅರಿವು ಮೂಡಿಸುವ ಜೊತೆಗೆ ಅದರ ಒಡನಾಟ ದೊರಕಿಸುವ ಸಲುವಾಗಿ ಗೋಶಾಲೆ ನಿರ್ಮಿಸಲಾಗಿದೆ ಎಂದರು.

ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಣ ಸೋಮಯಾಜಿ ಹಾಗೂ ಸಂಚಾಲಕ ವಸಂತ ಮಾಧವ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕಮಲ ಪ್ರಭಾಕರ ಭಟ್, ಜಿಪಂ ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಪ್ರಮುಖರಾದ ದಿನೇಶ್ ಅಮ್ಟೂರು, ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷರಾದ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ಹರಿಪ್ರಸಾದ ಪೆರಿಯಪ್ಪು, ದಿಗ್ಧರ್ಶಕ ಡಾ.ವೈ.ವಿ.ಕೃಷ್ಣಮೂರ್ತಿ, ಮಂಗಳೂರು ಹವ್ಯಕ ಮಹಾಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಪ್ರಮುಖರಾದ ರಮೇಶ್ ಭಟ್ ನೂಜಿಬೈಲು, ಗಣೇಶ್ ಭಟ್, ಕಾಶೀಮಠ, ಕಲ್ಲಡ್ಕ ಕಾಲೇಜು ಪ್ರಾಂಶುಪಾಲ ಕೃಷ್ಣಪ್ರಸಾದ್, ಉಮಾಶಿವ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಸಹಿತ ಹಲವು ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.

ಇದೇ ಸಂದರ್ಭ ಕಲ್ಲಡ್ಕ ಗೇರುಕಟ್ಟೆಯ ಶ್ರೀ ಉಮಾಶಿವ ಕ್ಷೇತ್ರದ ಸಹಾಯ ಸಂಘದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡಲಾಯಿತು. ದಯಾ, ಲೋಲಾಕ್ಷಿ, ಸಹನಾ, ಕೀರ್ತನಾ, ಶ್ರಾವ್ಯ, ಕೇಸರಿ ಸಹಾಯಧನವನ್ನು ಸ್ವಾಮೀಜಿಯವರಿಂದ ಪಡೆದರು. ಶ್ರೀರಾಮ ವಿದ್ಯಾಕೇಂದ್ರದ ಕೋಶಾಧಿಕಾರಿ ಹಾಗೂ ನ್ಯಾಯವಾದಿ ಸತೀಶ್ ಕುಮಾರ್ ಶಿವಗಿರಿ ವಂದಿಸಿದರು. ಯತಿರಾಜ್ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ರಾಘವೇಶ್ವರ ಶ್ರೀಗಳು ಶ್ರೀರಾಮ ವಿದ್ಯಾಕೇಂದ್ರದ ಚಟುವಟಿಕೆಗಳನ್ನು ವೀಕ್ಷಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.