ಬಂಟ್ವಾಳ: ಎತ್ತಿನಹೊಳೆ ವಿರೋಧಿಸಿ ಜೀವನದಿ ನೇತ್ರಾವತಿ ಉಳಿಸಿ ಹೋರಾಟದ ಅಂಗವಾಗಿ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ ಡಿ.11ರಂದು ಬಂಟ್ವಾಳ ತಾಲೂಕು ಪ್ರವೇಶಿಸಲಿದೆ.
ಉಪ್ಪಿನಂಗಡಿಯಿಂದ ಹೊರಡುವ ಈ ರಥಯಾತ್ರೆಯನ್ನು ಮಧ್ಯಾಹ್ನ 2.30ಕ್ಕೆ ಕಲ್ಲಡ್ಕದಲ್ಲಿ ಸ್ವಾಗತಿಸಲಾಗುವುದು ಎಂದು ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಯಾತ್ರೆಯ ತಾಲೂಕು ಸಂಚಾಲಕ ಜಿ.ಆನಂದ ತಿಳಿಸಿದ್ದಾರೆ.
ಯಾತ್ರೆ ಬಿ.ಸಿ.ರೋಡಿನ ಬ್ರಹ್ಮಶ್ರೀ ವೃತ್ತಕ್ಕೆ 3.30ಕ್ಕೆ ಆಗಮಿಸಿ ಮೆರವಣಿಗೆ ಮೂಲಕ ಶ್ರೀ ರಕ್ತೇಶ್ವರಿ ವಠಾರದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಈ ಸಂದರ್ಭ ಪೊಳಲಿಯಿಂದ ಶಾಂಭವಿ ನದಿ ಪವಿತ್ರಜಲವನ್ನು ಮೆರವಣಿಗೆ ಮೂಲಕ ತಂದು ಯಾತ್ರೆಯ ಕಲಶಕ್ಕೆ ಸಮರ್ಪಿಸಲಾಗುವುದು ಎಂದು ಹೇಳಿದರು.
ಬಳಿಕ ಫರಂಗಿಪೇಟೆಗೆ ಸಾಗಲಿದ್ದು, ಅಲ್ಲಿಂದ ಮಂಗಳೂರು ಪ್ರವೇಶಿಸಲಿದೆ. ಯಾತ್ರೆಯಲ್ಲಿ ಸರ್ವಧರ್ಮೀಯರೂ ಪಕ್ಷಭೇದ ಮರೆತು ಭಾಗವಹಿಸುವರು ಎಂದರು.
ಯಾತ್ರೆ ಪಕ್ಷದ ಧ್ವಜದಡಿಯಲ್ಲಿ ನಡೆಯುತ್ತಿಲ್ಲ. ಮಂಗಳೂರು ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈಗಾಗಲೇ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಅವರನ್ನು ಯಾತ್ರೆ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ವಿಷಯವಾಗಿದ್ದ ಕಾರಣ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೂ ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಅವರು ಹೇಳಿದರು.
ಮುಖಂಡರಾದ ಪಿ.ಎ.ರಹೀಂ, ರಾಮದಾಸ ಬಂಟ್ವಾಳ, ಗುರುದತ್ತ ನಾಯಕ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.