ಬಂಟ್ವಾಳ

ಜನರಿಗೆ ತೊಂದರೆ ಮಾಡುವ ಅಧಿಕಾರಿಗಳಿಗೆ ಜಾಗ ಇಲ್ಲ

ತಾಲೂಕು ಪಂಚಾಯಿತಿ ಸಭೆಯಲ್ಲಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ವಾರ್ನಿಂಗ್

ಬಂಟ್ವಾಳ: ಜನಸಾಮಾನ್ಯರಿಗೆ ಕಾನೂನಿನ ಇತಿಮಿತಿಯೊಳಗೆ ಏನಾದರೂ ಪ್ರಯೋಜನ ಮಾಡುವುದಾದರೆ ಮಾತ್ರ ಇಲ್ಲಿರಿ. ಅನಾವಶ್ಯಕ ತೊಂದರೆ ಮಾಡುವ ಅಧಿಕಾರಿಗಳಿಗೆ ಇಲ್ಲಿ ಜಾಗ ಇಲ್ಲ

ಇದು ಅಧಿಕಾರಿಗಳಿಗೆ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ವಾರ್ನಿಂಗ್.

ಗುರುವಾರ ಬಿ.ಸಿ.ರೋಡಿನ ಎಸ್.ಜಿ.ಎಸ್.ಆರ್.ವೈ. ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಪಂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿ ಕೇಂದ್ರವೊಂದರ ವಿದ್ಯುತ್ತನ್ನು ಕಡಿತಗೊಳಿಸಿರುವುದಕ್ಕೆ ಅಸಮಾಧಾನಗೊಂಡು ಅಧಿಕಾರಿಗಳಿಗೆ ಈ ಮೇಲಿನಂತೆ ತಾಕೀತು ಮಾಡಿದರು.

ವಿಟ್ಲ ಮೆಸ್ಕಾಂ ವ್ಯಾಪ್ತಿಗೆ ಒಳಪಡುವ ಅಂಗವಾಡಿ ಕೇಂದ್ರದ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಸಂಪರ್ಕ ಕಡಿತಗೊಳಿಸಲಾದ ಕ್ರಮಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಸಿಡಿಪಿಒ ಸುಧಾ ಜೋಷಿ ಮೆಸ್ಕಾಂ ಯಾವುದೇ ಮಾಹಿತಿ ನೀಡದೆ ಕಡಿತಗೊಳಿಸಿದೆ ಎಂದರು. ಆಗ ಮಧ್ಯಪ್ರವೇಶಿಸಿದ ಅಧ್ಯಕ್ಷರು, ಮಾನವೀಯ ನೆಲೆಯಲ್ಲಾದರೂ ಅದರ ಸಂಪರ್ಕ ಕಡಿತಗೊಳಿಸಬಾರದಿತ್ತು. ಕನಿಷ್ಠ ನಮ್ಮ ಗಮನಕ್ಕಾದರೂ ತಂದರೆ ಪರಿಹರಿಸಬಹುದಿತ್ತು. ಉದ್ದೇಶಪೂರ್ವಕವಾಗಿ ಜನರಿಗೆ ಯಾವುದೇ ತೊಂದರೆ ಕೊಡುವ ಕೆಲಸ ಮಾಡದಿರಿ ಎಂದು ಸೂಚಿಸಿದರು.

ಇದೇ ವೇಳೆ ಬಂಟ್ವಾಳ ನಗರ ವ್ಯಾಪ್ತಿಗೆ ಕತ್ತಲ ಭಾಗ್ಯ ಒದಗಿಸಿರುವ ಮತ್ತು ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿದರೂ ಸ್ವೀಕರಿಸದ ಮೆಸ್ಕಾಂ ಇಂಜಿನಿಯರ್ ವಿರುದ್ಧ ಉಪಾಧ್ಯಕ್ಷ ಅಬ್ಬಾಸ್ ಆಲಿ ತರಾಟೆಗೆ ತೆಗೆದುಕೊಂಡರು. ಸದಸ್ಯರೂ ಇದಕ್ಕೆ ದನಿಗೂಡಿಸಿದರು.

ತಾಪಂ ಸಾಮಾನ್ಯ ಸಭೆಗೆ ಹದಿನೈದು ದಿನ ಮೊದಲೇ ದಿನ ನಿಗದಿಯಾಗುತ್ತದೆ. ಆದರೆ ತಾಲೂಕು ಮಟ್ಟದ ಅಧಿಕಾರಿಗಳು ಇದಕ್ಕೆ ಹೊಂದಿಕೊಳ್ಳದೆ ಸಭೆಗೆ ಗೈರುಹಾಜರಾಗುವ ಮೂಲಕ ಲಘುವಾಗಿ ಪರಿಗಣಿಸುತ್ತಿದ್ದಾರೆ ಎಂದು ಸದಸ್ಯರಾದ ಉಸ್ಮಾನ್ ಕರೋಪಾಡಿ, ಸಂಜೀವ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಕಿ ವರ್ಗಾವಣೆ

ಬಾಳ್ತಿಲ ಗ್ರಾಮದ ನೀರಪಾದೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಸರು, ಚಿತ್ರಾನ್ನ, ತರಕಾರಿ ಸಾಂಬಾರ್ ನೀಡುತ್ತಿಲ್ಲ ಎಂದು ಮಕ್ಕಳ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿದ್ಯಾರ್ಥಿನಿಯೋರ್ವಳಿಗೆ ಶಾಲಾ ಮುಖ್ಯ ಶಿಕ್ಷಕಿ ಬೈದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಅಸ್ವಸ್ಥಗೊಂಡು ಕುಸಿದು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ, ಶಿಕ್ಷಕಿಯನ್ನು ಈ ಶಾಲೆಯಿಂದ ವರ್ಗಾಯಿಸಲಾಗಿದೆ ಎಂದು ಉಪಾಧ್ಯಕ್ಷ ಅಬ್ಬಾಸ್ ಆಲಿ ಪ್ರಶ್ನೆಗೆ ಶಿಕ್ಷಣಾಧಿಕಾರಿ ಲೋಕೇಶ್ ಉತ್ತರಿಸಿದರು.ಆದರೆ ಶಿಕ್ಷಕಿ ಇನ್ನೂ ಶಾಲೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ ಸಹಿತ ಸದಸ್ಯರು ಸಭೆ ಗಮನ ಸೆಳೆದರು.ಇದಕ್ಕ ಪ್ರತಿಕ್ರಿಯಿಸಿದ ಶಿಕ್ಷಣಾಧಿಕಾರಿ, ಈಗಾಗಲೇ ವರ್ಗಾವಣಾ ಆದೇಶ ಮಾಡಲಾಗಿದ್ದು, ಪ್ರಸ್ತುತ ಶಾಲಾ ಮುಖ್ಯ ಶಿಕ್ಷಕಿ ರಜೆಯಲ್ಲಿ ತೆರಳಿರುವುದರಿಂದ ಶುಕ್ರವಾರ ತೆರವು ಆದೇಶ ಹೊರಬೀಳಲಿದೆ ಎಂದರು.

ಕುಡಿಯುವ ನೀರಿಗೆ ವಿಶೇಷ ಸಭೆ

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ನೀರಿನ ಮೂಲ ಹುಡುಕುವುದು, ಅಂತರ್ಜಲ ವೃದ್ಧಿಪಡಿಸಲು ಕಿಂಡಿ ಅಣೆಕಟ್ಟು ದುರಸ್ತಿ ಹಾಗೂ ನೀರಿನ ಶೇಖರಣೆಯ ಕುರಿತು ಅಧಿಕಾರಿಗಳ ವಿಶೇಷ ಸಭೆಯನ್ನು ಮುಂದಿನ ಮಂಗಳವಾರ ಕರೆಯಲಾಗಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂಡ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.ತಾಲೂಕಿಗೆ ಇಂಜಿನಿಯರುಗಳ ಕೊರತೆ ಇದ್ದು, ಕನಿಷ್ಠ ಇನ್ನೂ ಎಂಟು ಮಂದಿ ಇಂಜಿನಿಯರುಗಳ ನೇಮಕಾತಿಗೆ ನಿರ್ಣಯ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರಬಾಬು ಮನವಿ ಮಾಡಿದರು.

ಸಂಪೂರ್ಣ ಬಯಲುಶೌಚ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರೋಪಾಡಿ ಗ್ರಾಪಂ ವ್ಯಾಪ್ತಿಯ ನಾಲ್ಕು ಎಸ್.ಸಿ. ಕುಟುಂಬದ ಮನೆಗಳಿಗೆ ಇನ್ನೂ ಶೌಚಾಲಯ ವ್ಯವಸ್ಥೆ ಆಗಿಲ್ಲ ಎಂದು ಸದಸ್ಯ ಉಸ್ಮಾನ್ ಕರೋಪಾಡಿ ಗಮನ ಸೆಳೆದರು.ಶೌಚಾಲಯ ಇಲ್ಲದಿದ್ದರೂ ಬಯಲುಮುಕ್ತ ಶೌಚಾಲಯದ  ಗ್ರಾಮ ಎಂಬ ಪ್ರಶಸ್ತಿ ಕರೋಪಾಡಿಗೆ ಬಂದಿದೆ. ಅದನ್ನು ಹೇಗೆ ಕೊಡಲಾಯಿತು ಎಂದು ಉಸ್ಮಾನ್ ಅಚ್ಚರಿ ವ್ಯಕ್ತಪಡಿಸಿದರು.

ಇದಕ್ಕೆ ಕಾರ್ಯನಿರ್ವಹಣಾಧಿಕಾರಿ ತಾಂತ್ರಿಕ ಸಮಸ್ಯೆಯ ಸಮಜಾಯಿಸಿಕೆ ನೀಡಿದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ಉಪಸ್ಥಿತರಿದ್ದರು. ಜಿಪಂ ಸದಸ್ಯ ರವೀಂದ್ರ ಕಂಬಳಿ, ಸದಸ್ಯರಾದ ರಮೇಶ್ ಕುಡ್ಮೇರು, ಆದಂ ಕುಂಞ ಕೆದಿಲ, ಹೈದರ್, ಮಲ್ಲಿಕಾ ಶೆಟ್ಟಿ, ಮಂಜುಳಾ ಕುಶಲ, ನವೀನ್, ಯಶವಂತ ಪೊಳಲಿ, ಪಿಲಾತಬೆಟ್ಟು ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts