ಕವರ್ ಸ್ಟೋರಿ

ಇಲ್ಲದ ನೀರನ್ನು ಕೊಂಡೊಯ್ಯುವ ಮುನ್ನ…

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕುರಿತ ರಾಜಕೀಯ ದ್ವೇಷ, ವಿವಾದಗಳು ಏನೇ ಇದ್ದರೂ ಅವರು ಕಾವೇರಿ ನೀರಿಗಾಗಿ ಹೋರಾಡಿದ ಪರಿ ಅದ್ಭುತ. ಅಂಥ ಎಳ್ಳಷ್ಟು ಹಠ ನಮ್ಮ ರಾಜಕಾರಣಿಗಳಿಗಿದ್ದರೆ ಇಂದು ಎತ್ತಿನಹೊಳೆ ಯೋಜನೆ ಅಡ್ರಸ್ಸೇ ಇರುತ್ತಿರಲಿಲ್ಲ

ಅದು 2001ನೇ ಇಸವಿ.

ನಾನಾಗ ಕನ್ನಡಪ್ರಭಕ್ಕೆ ಬಂಟ್ವಾಳದಲ್ಲಿ ವರದಿಗಾರ. ಆಗ ಆಳುವ ಪಕ್ಷದವರೊಬ್ಬರು ಜಿ.ಶಂ.ಪರಮಶಿವಯ್ಯ ಎಂಬ ತಜ್ಞರ ವರದಿಯೊಂದಿದೆ. ತುಂಬಾ ಕುತೂಹಲಕಾರಿ. ನೋಡಿ, ಓದಿ, ವಾಪಾಸ್ ಕೊಡಿ ಎಂದು ನನಗೂ ಹಾಗೂ ಮತ್ತೊಂದು ಪತ್ರಿಕೆಯ ಹಿರಿಯ ಪತ್ರಕರ್ತ ಸ್ನೇಹಿತರಿಗೂ ಕೊಟ್ಟಿದ್ದರು. ಅದರಲ್ಲಿ ಸಮುದ್ರಕ್ಕೆ ನೇತ್ರಾವತಿ ನೀರು ಬಹಳಷ್ಟು ಹರಿದು ವೇಸ್ಟ್ ಆಗುತ್ತದೆ, ಅದರ ಪಾತ್ರವನ್ನೇ ತಿರುಗಿಸಿದರೆ, ಕರ್ನಾಟಕದ ನೀರಿಲ್ಲದ ಭಾಗಕ್ಕೆ ನೀರುಣಿಸಬಹುದು ಎಂದಿತ್ತು. ಅದರ ವರದಿಯನ್ನು ನಾವಿಬ್ಬರೂ ನಮ್ಮ ನಮ್ಮ ಪತ್ರಿಕೆಗಳಿಗೆ ಮಾಡಿದೆವು. ಎರಡೂ ಪತ್ರಿಕೆಗಳಲ್ಲಿ ಸಮಗ್ರ ವರದಿ ಪ್ರಕಟಗೊಂಡಿತು. ನೇತ್ರಾವತಿ ನದಿ ಪಾತ್ರ ಬದಲಿಸಿ ಏಳು ಜಿಲ್ಲೆಗಳಿಗೆ ನೀರು ಪೂರೈಕೆಯಾಗುತ್ತದೆ ಎಂಬುದು ಆ ವರದಿಯಲ್ಲಿನ ಸಾರಾಂಶವಾಗಿತ್ತು.

ಸಾಮಾನ್ಯವಾಗಿ ಪತ್ರಿಕೆ ವರದಿ ಪ್ರಕಟಗೊಂಡ ಬಳಿಕ ಅದರ ಫಾಲೋಅಪ್ ಮಾಡಬೇಕಾದದ್ದು ಕೇವಲ ಪತ್ರಕರ್ತರ ಕೆಲಸವಲ್ಲ. ಜನಸಾಮಾನ್ಯರೊಂದಿಗೆ, ಅಧಿಕಾರಿಗಳು, ರಾಜಕಾರಣಿಗಳು, ಸಂಘ ಸಂಸ್ಥೆಗಳು ಇದರ ಕುರಿತು ಗಮನಹರಿಸಬೇಕು. ದುರದೃಷ್ಟವಶಾತ್ ಆ ಕ್ಷಣದಲ್ಲಿ ಇದು ಅಸಾಧ್ಯವಾದ ಮಾತು ಎಂದು ಎನಿಸಿತ್ತೋ ಏನೋ.  ಯಾವ ದೊಡ್ಡ ಪ್ರತಿಕ್ರಿಯೆಗಳೂ ಬರಲಿಲ್ಲ. ಅದಾಗಿ ನಾಲ್ಕು ವರ್ಷಗಳ ಬಳಿಕ ಪ್ರತಿಯೊಂದು ಪತ್ರಿಕೆಗಳಲ್ಲೂ ಈ ಬಗ್ಗೆ ವಿಶೇಷ ವರದಿಗಳು ಬಂದವು. ಮತ್ತೆ ನೇತ್ರಾವತಿ ತಿರುವು ಯೋಜನೆ ಕುರಿತು ಸರಣಿ ವರದಿಗಳು ಬಂದವು. ಎಲ್ಲ ಮಾಧ್ಯಮಗಳು ಪರಮಶಿವಯ್ಯ ವರದಿಯ ಸಾಧಕ ಬಾಧಕಗಳ ಕುರಿತು ತಜ್ಞರ ವಿಶ್ಲೇಷಣೆಗಳನ್ನು ಪ್ರಕಟಿಸಿದವು. ಅದರ ಫಲವೋ ಏನೋ,  ನಿಧಾನವಾಗಿ ಜಾಗೃತಿ ಕಾರ್ಯಕ್ರಮಗಳು ಆರಂಭವಾದವು. ಆದರೆ ಕಾಲ ಮಿಂಚಿತ್ತು! ಎತ್ತಿನಹೊಳೆ ಯೋಜನೆಗೆ ಮುನ್ನುಡಿ ಬರೆದಾಗಿತ್ತು.

ಚಿತ್ರಗಳು: ಕಿಶೋರ್ ಪೆರಾಜೆ, ನಮ್ಮ ಸ್ಟುಡಿಯೋ ಬಿ.ಸಿ.ರೋಡ್,

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಟ್ಟರೆ ಹೇಗೆ ಮಂಡ್ಯ, ಮೈಸೂರು, ಬೆಂಗಳೂರು ಪ್ರದೇಶಗಳಿಗೆ ತೊಂದರೆ ಆಗುತ್ತದೆಯೋ ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯಿಡೀ ಎತ್ತಿನಹೊಳೆ ಯೋಜನೆಯೇನಾದರೂ ಸಮರ್ಪಕವಾಗಿ ಅನುಷ್ಠಾನವೇನಾದರೂ ಆದರೆ ಮರುಭೂಮಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದವು. ಅದೇ ಹೊತ್ತಿಗೆ ಸಾವಿರಕ್ಕೂ ಅಧಿಕ ಕೋಟಿ ರೂಪಾಯಿ ಯೋಜನೆಗೆ ವೆಚ್ಚವಾದ ಬಗ್ಗೆ ವರದಿಗಳು ಬಂದವು.

ಈಗ ಈ ಕುರಿತು ಹಲವು ವಾದ, ವಿವಾದಗಳು ನಡೆಯುತ್ತಿವೆ. ಯಾವುದು ಸರಿ, ಯಾವುದು ತಪ್ಪು ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ.

ಯಾಕಿಷ್ಟು ಹಠ?

ನೇತ್ರಾವತಿ ನಮ್ಮ ಜೀವಜಲ.  ನೇತ್ರಾವತಿ ಇದ್ದರಷ್ಟೇ ನಾವಿರುತ್ತೇವೆ ಎಂಬುದು ಸೂರ್ಯನ ಬೆಳಕಿನಷ್ಟೇ ಸತ್ಯ.

ಘಟ್ಟದ ತಪ್ಪಲಿನಲ್ಲಿ ಸೃಷ್ಟಿಯಾದ ಈ ನದಿಯಲ್ಲಿ ಶೇ.47ರಷ್ಟು ಮೀನು ಮತ್ತು ಇತರ ಜಲಚರಗಳಿವೆ ಎಂದು ಪರಮಶಿವಯ್ಯ ವರದಿ ಉಲ್ಲೇಖಿಸಿದೆ. ನೇತ್ರಾವದಿ ನದಿ ತಿರುವು ಯೋಜನೆಯಿಂದ ಮುಂದೆ ನದಿ ಬರಡಾಗಿ ಮತ್ಸ್ಯಸಂಕುಲ ನಾಶವಾಗಬಹುದು ಸಮುದ್ರದ ಉಪ್ಪು ನೀರು ಒಳಹರಿದು ಕೃಷಿಗೆ ಇನ್ನಷ್ಟು ಹಾನಿಯಾಗುತ್ತದೆ ಎಂಬುದು ಯೋಜನೆ ಅನುಷ್ಠಾನ ಮಾಡುವವರಿಗೆ ಗೊತ್ತಿರಬೇಕಿತ್ತು.

tumbay – dam

ತುಂಬೆ ಡ್ಯಾಂ ಎಷ್ಟು ಎತ್ತರಕ್ಕೇರಿಸಿದರೂ ನೇತ್ರಾವತಿಯಲ್ಲಿ ನೀರು ಇಲ್ಲದಿದ್ದರೆ ಪ್ರಯೋಜನವೇನೂ ಇಲ್ಲ. ಮಂಗಳೂರಿಗೆ ನೀರಿಲ್ಲದಿದ್ದರೆ ಏನು ತೊಂದರೆ ಎಂಬುದನನ್ನು ಕಳೆದ ಮೇ ತಿಂಗಳಿನ ಭೀಕರ ಬರಗಾಲ ತೋರಿಸಿಕೊಟ್ಟಿದೆ. ಸಮುದ್ರ ಸೇರುವ ಮುನ್ನ ನೇತ್ರಾವತಿಗೆ ಅದೆಷ್ಟು ಉಪನದಿಗಳು ಸೇರುತ್ತವೆ, ನೀರು ಕೊಂಡೊಯ್ಯುವುದು ಸಮುದ್ರದ ಬದಿಯಿಂದಷ್ಟೇ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರಬೇಕು.

ಮಹಾಲಿಂಗ ಭಟ್ಟರು ನಾಣಜ್ಜೆರ್‌ ಸುದೆ ತಿರ್ಗಾಯೆರ್‌ ಎಂಬ ಕಾದಂಬರಿ ಬರೆದಿದ್ದರು. ಅಂದರೆ ನಾಣಜ್ಜ ಎಂಬವರು ನದಿಯ ಪಥವನ್ನೇ ತಿರುಗಿಸಿದರು ಎಂದರ್ಥ. ಪ್ರಕೃತಿಯ ವಿರುದ್ಧ ನದಿ ಪಥವನ್ನೇ ತಿರುಗಿಸುವ ಸಾಹಸಕ್ಕೆ ಕೈಹಾಕಿದ ನಾಣಜ್ಜೆರ್‌ ಕೊನೆಗೆ ದುರಂತವೊಂದಕ್ಕೆ ಸಾಕ್ಷಿಯಾಗುತ್ತಾರೆ ಎಂಬುದು ಈ ಕಥೆಯ ತಿರುಳು. ಇಂಥ ಪ್ರಯತ್ನಕ್ಕೆ ಎತ್ತಿನಹೊಳೆ ಯೋಜನೆ ಬಲಿಯಾಗುತ್ತಿದೆಯೇ?

ಈ ವರ್ಷ ಈಗಲೇ ನದಿ ಬರಡಾಗುವ ಲಕ್ಷಣಗಳು ಕಾಣಿಸುತ್ತಿರುವುದು ಉತ್ಪ್ರೇಕ್ಷೆ ಏನಲ್ಲ. ಆಗ ನೇತ್ರಾವತಿ ನದಿ ನೀರು ಸಮುದ್ರ ಸೇರುವುದಿಲ್ಲ. ಬದಲಿಗೆ ಸಮುದ್ರದ ಉಪ್ಪುನೀರು ನೇತ್ರಾವತಿ ನದಿ ಪ್ರವೇಶಿಸುತ್ತದೆ ಎಂಬುದನ್ನು ನೇತ್ರಾವತಿ ನೀರಷ್ಟೇ ಅಲ್ಲ, ನಮ್ಮ ದಕ್ಷಿಣ ಕನ್ನಡದ ಯಾವುದೇ ಒಡಲಿಂದ ನೀರು ಕುಡಿಯುವ ಜನರಿಗೆ ಗೊತ್ತಿರಬೇಕಾದ ವಿಚಾರ. ಪ್ರಪಂಚದ ಅತ್ಯಂತ ಸೂಕ್ಷ್ಮ  ಸಂಪನ್ಮೂಲ ಇರುವ ಪ್ರದೇಶ ಪಶ್ಚಿಮಘಟ್ಟ.  2000ನೇ ಇಸ್ವಿಯಲ್ಲಿ ಜಿ.ಎಸ್‌.ಪರಮಶಿವಯ್ಯ ಕರ್ನಾಟಕ ಸರಕಾರಕ್ಕೆ ನೀಡಿದ ವರದಿಯಲ್ಲಿ, ರಾಜ್ಯದ 3,440 ಟಿಎಂಸಿ ನೀರಿನಲ್ಲಿ 400 ಟಿಎಂಸಿ ನೀರು ನೇತ್ರಾವತಿಯಲ್ಲಿ ಪಶ್ಚಿಮಕ್ಕೆ ಹರಿದು ವೃಥಾ ಸಮುದ್ರ ಸೇರುತ್ತದೆ ಎಂದು ಹೇಳಿದ್ದರು. ನೇತ್ರಾವತಿ ನೀರು ಸಮುದ್ರ ಸೇರುವ ಜಾಗ ಮಂಗಳೂರಿನ ಬೇಂಗ್ರೆ ಅಳಿವೆ ಎಂಬಲ್ಲಿದೆ. ಜೂನ್‌ -ಜುಲೈ ತಿಂಗಳಿನಲ್ಲಿ ನೇತ್ರಾವತಿ ಪ್ರವಾಹದ ನೀರು ಸಮುದ್ರ ಸೇರುವ ಜಾಗದಲ್ಲಿ 400 ಟಿಎಂಸಿ ನೀರು ಹರಿದರೆ ಏನಾದೀತು ನೀವೇ ಯೋಚಿಸಿ.

ಶ್ಚಿಮಘಟ್ಟವು ತುಳುನಾಡು, ಕನ್ಯಾಕುಮಾರಿ, ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳ ವ್ಯಾಪ್ತಿಯಲ್ಲಿದ್ದು, ನೂರಾರು ನದಿ, ಉಪನದಿಗಳು ಇಲ್ಲಿ ಉಗಮಿಸುತ್ತವೆ. 250 ಕಿ.ಮೀ. ಉದ್ದದ ಕೊಳವೆ ನಿರ್ಮಿಸಿ 200 ಮೀಟರ್‌ ಎತ್ತರದ ಪೂರ್ವಕ್ಕೆ ನೀರನ್ನೇ ತಿರುಗಿಸುವ ಎತ್ತಿನಹೊಳೆ ಯೋಜನೆಯಿಂದ ಸಾವಿರಾರು ಹೆಕ್ಟೇರು ಅರಣ್ಯ ಭೂಮಿ ನಾಶವಾಗಬಹುದು. ಜಗತ್ತಿನ ವಿಶಿಷ್ಟ ಮಳೆಕಾಡು ಪ್ರದೇಶಕ್ಕೆ ಕೊಡಲಿ ಏಟು ಬಿದ್ದು ನದಿ ಮೂಲ ಬರಿದಾಗುತ್ತದೆ. ಇಷ್ಟೆಲ್ಲ ವಾದ, ವಿಚಾರಗಳು ಎತ್ತಿನಹೊಳೆ ಯೋಜನೆ ವಿರೋಧಿಸುವವರ ಬಳಿ ಇವೆ. ಯೋಜನೆಯಿಂದ ಯಾರಿಗೂ ಲಾಭ ಇಲ್ಲ ಎಂದಾದರೆ ಅನುಷ್ಠಾನವಾದರೆ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದೂ ಚಿಂತಿಸಬೇಕಾದ ವಿಚಾರ.

 

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts