ಶೀಘ್ರವೇ ಉನ್ನತ ಮಟ್ಟದ ಅಧಿಕಾರಿಗಳ ಸಭೆ: ಸಚಿವ ರೈ ಭರವಸೆ
ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸ್ಥಳೀಯ ನರಿಕೊಂಬು ಮತ್ತು ಶಂಭೂರು ಗ್ರಾಮಸ್ಥರಿಗೆ ಸುರಕ್ಷಿತವಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ಇಲ್ಲಿನ ಸತ್ಯದೇವತೆ (ಕಲ್ಲುರ್ಟಿ) ಗುಡಿ ಬಳಿ ಅಂಡರ್‌ಪಾಸ್ ರಸ್ತೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಕಾರಣಿಕ ಪ್ರಸಿದ್ಧ ಪಾಣೆಮಂಗಳೂರು ಸತ್ಯದೇವತೆ (ಕಲ್ಲುರ್ಟಿ) ಗುಡಿಗೆ ಸೋಮವಾರ ರಾತ್ರಿ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ಹೆದ್ದಾರಿ ವಿಸ್ತರಣೆಗೆ ಸರ್ವೆ ನಡೆಸಿದ್ದ ಸಂದರ್ಭ ಇಲ್ಲಿನ ಕಾರಣಿಕ ಪ್ರಸಿದ್ಧ ಸತ್ಯದೇವತೆ (ಕಲ್ಲುರ್ಟಿ) ಗುಡಿ ತೆರವುಗೊಳಿಸಲು ಸೂಚಿಸಲಾಗಿತ್ತು. ಇದಕ್ಕಾಗಿ ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು ನೇತೃತ್ವದ ನಿಯೋಗವನ್ನು ಕರೆದೊಯ್ದು ಅಂದಿನ ಭೂಸಾರಿಗೆ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರೊಂದಿಗೆ ಮಾತುಕತೆ ನಡೆಸಿ ತೆರವು ಕಾರ್ಯ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿರುವುದನ್ನು ಅವರು ನೆನಪಿಸಿಕೊಂಡರು.
ಅಂಡರ್‌ಪಾಸ್ ರಸ್ತೆ ನಿರ್ಮಿಸುವ ಬಗ್ಗೆ ಪಿಡಬ್ಲ್ಯುಡಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂಜಿನಿಯರ್‌ಗಳ ಸಲಹೆ ಪಡೆದು, ಶೀಘ್ರವೇ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸುವುದಾಗಿ ಅವರು ಸ್ಥಳೀಯರಿಗೆ ಭರವಸೆ ನೀಡಿದರು.
ಬಂಟ್ವಾಳ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ಹೆದ್ದಾರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಬ್ದುಲ್ ರಹಿಮಾನ್, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ ಭಟ್, ಸಹಾಯಕ ಎಂಜಿನಿಯರ್ ಅರುಣ್ ಪ್ರಕಾಶ್ ಮತ್ತಿತರರು ಇದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…