ವಿಟ್ಲ: ನವಗ್ರಾಮದ 27 ಮನೆಗಳಿಗೆ ನೀರುಣಿಸುವ ನಿಟ್ಟಿನಲ್ಲಿ ಪೆರುವಾಯಿ ಗ್ರಾಮ ಪಂಚಾಯಿತಿ ಕೊರೆಸಿದ ಕೊಳವೆ ಬಾವಿಯ ನೀರು ಪೆರುವಾಯಿ ಪೇಟೆಗೆ ಕೊಂಡೊಯ್ಯುತ್ತಿರುವುದಕ್ಕೆ ನವಗ್ರಾಮ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಪೆರುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಚ್ಚಿರಪದವಿನಲ್ಲಿ ವಸತಿ ರಹಿತರ ಕಾಲನಿಯಿದ್ದು, ಸುಮಾರು 27ಕ್ಕೂ ಅಧಿಕ ಕುಟುಂಬಗಳು ವಾಸವಾಗಿದೆ. ಎಲ್ಲಾ ಮನೆಗಳಿಗೂ ಪ್ರತ್ಯೇಕ ನೀರಿನ ಸೌಲಭ್ಯವಿಲ್ಲದೆ ಹಿಂದಿನಿಂದಲೂ ಇರುವ ಕೈ ಪಂಪ್ ಮಾತ್ರ ಬಳಸಲಾಗುತ್ತಿತ್ತು.
ಎರಡು ದಿನಗಳಿಂದ ನವ ಗ್ರಾಮ ಜನರಿಗೆ ನೀರು ನೀಡದೆ ಪೆರುವಾಯಿ ಪೇಟೆ ಹಾಗೂ ಮುಚ್ಚಿರಪದವು ರಸ್ತೆ ಬದಿಯ ಮನೆಗಳಿಗೆ ನೀರು ಪೂರೈಕೆಗೆ ಪೆರುವಾಯಿ ಪಂಚಾಯಿತಿ ಮುಂದಾಗಿದೆ ಎಂದು ಆರೋಪಿಸಲಾಗಿದೆ. ಎರಡು ವರ್ಷದಿಂದ ಟ್ಯಾಂಕ್ ಉಪಯೋಗಿಸದೆ ಈಗ ನೀರು ಹಾಕಿದ್ದರಿಂದ ಅದರಲ್ಲೂ ನೀರು ಸೋರಿಕೆಯಾಗುತ್ತಿದೆ.
ಹೊಸ ಕೊಳವೆ ಬಾವಿಯ ಪಂಪ್ ಚಾಲನೆಗೊಳ್ಳುತ್ತಿದ್ದಂತೆ ಕೈ ಪಂಪ್ ಅಳವಡಿಸಿದ ಹಳೆಯ ಕೊಳವೆ ಬಾವಿಯ ನೀರು ಆರುತ್ತಿದೆ ಎಂದು ಹೇಳಿರುವ ನವಗ್ರಾಮ ನಿವಾಸಿಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.