ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ಡಿಸಂಬರ್ 11ರಂದು ಭಾನುವಾರ ಸಂಜೆ 6.15ರಿಂದ ನಡೆಯಲಿದೆ.
ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಡಾ.ಧರ್ಮೇಂದ್ರ ಪ್ರಧಾನ್, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶರದ್ ಪವಾರ್, ಕೇಂದ್ರ ಸಂಸದೀಯ ವ್ಯವಹಾರ, ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಸೇರಿದಂತೆ ಹಲವು ರಂಗಗಳ ಗಣ್ಯರು, ಉದ್ಯಮಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿದ್ಯಾಕೇಂದ್ರದ ಸ್ಥಾಪಕ, ವಿವೇಕಾನಂದ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶಾಲ ಮೈದಾನದಲ್ಲಿ ಶಿಶುನೃತ್ಯ, ಘೋಷ್ ಪ್ರದರ್ಶನ, ಜಡೆಕೋಲಾಟ, ದೀಪಾರತಿ, ನಿಯುದ್ಧ, ಯೋಗಾಸನ, ನೃತ್ಯಭಜನೆ, ಮಲ್ಲಕಂಭ, ನೃತ್ಯವೈವಿಧ್ಯ, ಚಕ್ರ ಸಮತೋಲನ, ಬೆಂಕಿ ಸಾಹಸ, ಕಾಲ್ಚಕ್ರ, ಕೂಪಿಕಾ ಸಹಿತ ಹಲವು ಕಸರತ್ತುಗಳು ಹಾಗೂ ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನೀಡಲಿದ್ದಾರೆ. ಶಾಲೆಯ ಎಲ್ಲ ಮಕ್ಕಳೂ ಇದರಲ್ಲಿ ಭಾಗವಹಿಸುವರು ಎಂದು ಡಾ. ಭಟ್ ವಿವರಿಸಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ವಿದ್ಯಾರ್ಥಿಕೇಂದ್ರಿತ ಶಿಕ್ಷಣ ನೀಡುತ್ತಿದ್ದು, ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಮಣ್ಣಿನ ಜ್ಞಾನ ಮೂಡಿಸಲು ಐದು ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರಾಯೋಗಿಕವಾಗಿ ಮಾಡಿಸುವ ಮೂಲಕ ಅನುಭವ ನೀಡಲಾಗುತ್ತದೆ. ಸುಮಾರು 2 ಸಾವಿರ ಮಕ್ಕಳು ಕನ್ನಡದಲ್ಲಿ ಅಧ್ಯಯನ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆ ಇದು ಎಂದು ಭಟ್ ಹೇಳಿದರು.
ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು.