ವಾಸ್ತವ

ರೂಪಾಯಿ ಕೊಡಿ…ಎಲ್ಲ ಸರಿ ಮಾಡ್ತೇವೆ!!

ಬೆಳಗ್ಗೆ ಹತ್ತು ಗಂಟೆ ಆಗುತ್ತಿದ್ದಂತೆ ಸರಕಾರಿ ಕಚೇರಿಗಳ ಹಿಂದೆ, ಮುಂದೆಲ್ಲ ಬ್ರೋಕರುಗಳು ಎಡತಾಕುತ್ತಾರೆ. ಕೆಲವರಿಗೆ ನೂರು ರೂಪಾಯಿ ಕೊಟ್ಟರೂ ಸಾಕು!

ನೀವೇನೂ ಮಾಡಬೇಡಿ, ……. ರೂಪಾಯಿ ಕೊಡಿ, ಸಣ್ಣ ಪುಟ್ಟ ಕೆಲಸ ಅಲ್ಲವಾ, ಚಿಂತೆ ಮಾಡಬೇಡಿ. ಓ ಅಲ್ಲಿ ಕುಳಿತುಕೊಳ್ಳಿ…ಅರ್ಧ ಗಂಟೆಗೊಳಗೆ ನಿಮ್ಮ ಕೆಲಸ ರೆಡಿ!

ಇಂಥ ಮಾತುಗಳು ಸರಕಾರಿ ಕಚೇರಿಯ ಅಕ್ಕಪಕ್ಕದಿಂದ ಕೇಳಿಬರುತ್ತಿಲ್ಲ ಎಂದಾದರೆ ಅಂದು ಭಾನುವಾರ ಎಂದೇ ಅರ್ಥ. ಇಂದು ಬ್ರೋಕರುಗಳ ಹಾವಳಿ ಎಷ್ಟು ಮಿತಿಮೀರಿದೆ ಎಂದರೆ ನಿಮ್ಮ ಕೆಲಸ ಆಗುವುದೇ ಇಲ್ಲ ಎನ್ನುವಲ್ಲಿಯವರೆಗೆ.

500, 1000 ನೋಟುಗಳು ರದ್ದಾಗುವ ಮೊದಲು ಇವರ ಕಾಟ ಅತಿಯಾಗಿಯೇ ಇತ್ತು. ಈಗ ಸ್ವಲ್ಪ ಕಡಿಮೆ.

ಬ್ರೋಕರುಗಳು ಎಲ್ಲಿಲ್ಲ ಹೇಳಿ, ಸಂಧಾನಕಾರನೂ ಒಂಥರಾ ಬ್ರೋಕರ್ರೇ…ನಿಮ್ಮ ಜಾಗವನ್ನು ಇನ್ನೊಬ್ಬನಿಗೆ ಮಾರಿಕೊಡಲು ವ್ಯವಸ್ಥೆ ಮಾಡುವವ ಬ್ರೋಕರ್ ಅಲ್ಲದೆ ಮತ್ತಿನ್ಯಾರು? ಆರ್ ಟಿ ಒ, ಪಿಡಬ್ಲ್ಯುಡಿ, ರೆವೆನ್ಯು… ಹೀಗೆ ಎಲ್ಲಿ ನೋಡಿದರೂ ಬ್ರೋಕರುಗಳದ್ದೇ ಪಾರಮ್ಯ.  ಕೆಲವೊಮ್ಮೆ ಇಲ್ಲಿ ಬ್ರೋಕರುಗಳು ಯಾರು, ಬ್ರೋಕರೇತರರು ಯಾರು ಎಂಬುದನ್ನೂ ಪತ್ತೆಹಚ್ಚಲು ಅಸಾಧ್ಯವಾಗುವಷ್ಟು ದಲ್ಲಾಳಿಗಳು ತುಂಬಿ ಹೋಗಿದ್ದಾರೆ.

ಹಾಗೆ ನೋಡಿದರೆ ದಲ್ಲಾಳಿ ಪದದ ಅರ್ಥ ಹಲವೆಡೆ ಹಲವು ರೂಪಗಳನ್ನು ಪಡೆದುಕೊಳ್ಳುತ್ತದೆ.

ಮದುವೆ ಬ್ರೋಕರ್, ವಾಹನ ಖರೀದಿಗೆ ಬ್ರೋಕರ್, ವಿಮಾ ಕಂತು ಕಟ್ಟಿ ನಿಲ್ಲಲು ಬ್ರೋಕರ್… ಹೀಗೆ ಬ್ರೋಕರುಗಳ ಪಟ್ಟಿಯೇ ಇದೆ.

ನೀವು ಬೆಳೆದ ತರಕಾರಿಯನ್ನು ಮಾರ್ಕೆಟ್ಟಿಗೆ ನೇರ ಮಾರಲು ನಿಮಗೆ ಸಾಧ್ಯವೇ, ಇಲ್ಲವೇ ಇಲ್ಲ. ಹಾಗಾದರೆ ಅದನ್ನು ಗ್ರಾಹಕನಿಗೆ ತಲುಪಿಸುವ ವಿಧಾನ ಹೇಗೆ? ತುಂಬಾ ಸಿಂಪಲ್. ಅಂಗಡಿಯಾತನಿಗೆ ನೀವು ಕೊಟ್ಟರೆ ಆಯಿತು. ಆದರೆ ಅಂಗಡಿಯಾತ ಫಿಕ್ಸ್ ಮಾಡಿದ್ದೇ ರೇಟ್.  ನೀವು 4 ರೂಪಾಯಿಗೆ ಮಾರಿದ ವಸ್ತುವನ್ನು ಅಂಗಡಿಯಾತ 10 ರೂಪಾಯಿಗೆ ಮಾರುತ್ತಾನೆ. ನಿಮಗೆ 4 ರೂ. ಸಿಕ್ಕಿದ ಖುಷಿ. ಅಂಗಡಿಯಾತನಿಗೆ 6 ರೂಪಾಯಿ ದೊರಕಿದ ಸಂಭ್ರಮ. ಮಾರುವುದೂ ಒಂದು ಉದ್ಯೋಗವಲ್ಲವೇ, ಕೊಂಡ ಗ್ರಾಹಕನಿಗೂ 10 ರೂಪಾಯಿ ದೊಡ್ಡ ವಿಚಾರವೇನೂ ಆಗುವುದಿಲ್ಲ. ಅದೇ ಕೃಷಿಕ ಗ್ರಾಹಕನಿಗೆ 4 ರೂಪಾಯಿಗೆ ಮಾರಲು ಹೊರಡುತ್ತಾನೆಯೇ, ಹೊರಟರೆ ಒಳ್ಳೇದು, ಇಲ್ಲವಾದರೆ ಕೃಷಿಕನೂ ಗ್ರಾಹಕನಿಗೆ 10 ರೂಗೆ ಮಾರಿದರೆ ಕೃಷಿಕನಿಗೆ ಲಾಭ. ಮಧ್ಯವರ್ತಿಯಾದ ವ್ಯಾಪಾರಿಗೆ ಚಿಕ್ಕಾಸೂ ಇಲ್ಲ. ಹೀಗಾಗಿ ವ್ಯಾಪಾರಿಯೂ ಮಧ್ಯವರ್ತಿಯೇ ಆಗುತ್ತಾನೆ.

ಇದಾದರೂ ತೊಂದರೆ ಇಲ್ಲ. ಆದರೆ ಸರಕಾರಿ ಕಚೇರಿ ಬಳಿ ಬರುವ ಮುಗ್ಧ ಸಾರ್ವಜನಿಂದ ಅಧಿಕಾರಿಗಳಿಗೆ ತಿನ್ನಿಸಬೇಕು ಎಂದು ಹಣ ವಸೂಲಿ ಮಾಡುವವರು ನಾಚಿಕೆ, ಮಾನ, ಮರ್ಯಾದೆ ಬಿಟ್ಟುಕೊಂಡೇ ಅಲ್ಲಿ ಠಳಾಯಿಸುತ್ತಾರೆ. ಇವರೇನು ಮಾಡುತ್ತಾರೆ?

ಜಿಲ್ಲಾ ಕೇಂದ್ರ ಅಥವಾ ತಾಲೂಕು ಕೇಂದ್ರಗಳಲ್ಲಿ ಸರಕಾರಿ ಕಚೇರಿಗಳು ಇರುತ್ತವೆ. ಬೆಳಗ್ಗೆ ಸುಮಾರು 9.30 ಆದೊಡನೆ ಆ ಕಚೇರಿಗಳ ಸುತ್ತ ಮುತ್ತ ಗೋಚರಿಸಲಾರಂಭಿಸುತ್ತಾರೆ. ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡು ಯಾರೆಲ್ಲ ಕಚೇರಿ ಕಡೆ ಬರುತ್ತಾರೆ ಎಂಬುದನ್ನು ನೋಡುತ್ತಲೇ ಇರುತ್ತಾರೆ. ಯಾರಾದರೂ ಹಳ್ಳಿಯಿಂದ ಬಂದರು ಎಂದಿಟ್ಟುಕೊಳ್ಳಿ. ಅವರಿಗೆ ಯಾವ ಕಚೇರಿ ಎಲ್ಲಿರುತ್ತದೆ ಎಂಬುದೇ ಗೊತ್ತಿರುವುದಿಲ್ಲ. ಯಾವುದೋ ಒಂದು ಅರ್ಜಿಯನ್ನು ಯಾರೋ ಒಬ್ಬ ಗುಮಾಸ್ತನಿಗೆ ಕೊಡಬೇಕಾಗಿರುತ್ತದೆ. ಇಂಥ ಹಳ್ಳಿಗರೇ ಈ ಬ್ರೋಕರುಗಳ ಟಾರ್ಗೆಟ್..

ಹಾಗೆ ಹಿಂದೆ ಮುಂದೆ ನೋಡುವ ಹಳ್ಳಿಗರನ್ನು ಬ್ರೋಕರುಗಳು ಮಾತಿಗೆಳೆಯುತ್ತಾರೆ. ನೀವು ಎಲ್ಲಿಂದ ಬಂದಿದ್ದೀರಿ, ನಿಮಗೆ ಯಾವ ಕೆಲಸ ಆಗಬೇಕು ಎಂಬ ಪ್ರಶ್ನೆಗಳನ್ನೆಸೆಯುತ್ತಾರೆ. ಇವರನ್ನು ನೋಡಿ ಯಾವುದೋ ಕಚೇರಿ ಸಿಬ್ಬಂದಿ ಇರಬಹುದು ಎಂದು ನಂಬಿ ನೀವು ಮಾಹಿತಿ ಕೊಟ್ಟರೆ ಮುಗೀತು. ನಿಮ್ಮ ಎಲ್ಲ ದಾಖಲೆಗಳೂ ಮರುಕ್ಷಣ ಬ್ರೋಕರುಗಳ ಕೈಯಲ್ಲಿರುತ್ತದೆ. ನಾವೆಲ್ಲಾ ಮಾಡಿಕೊಡುತ್ತೇವೆ ಎಂದು ಹೊರಟರೆ, ಮತ್ತೆ ನಿಮ್ಮ ದುಡ್ಡು ಪೀಕಿಸುವವರೆಗೆ ಅವರು ವಿಶ್ರಮಿಸುವುದಿಲ್ಲ.

ಆರ್ ಟಿ ಒ, ಭೂದಾಖಲೆಗಳಿಗೆ ಸಂಬಂಧಿಸಿದ ವಿಚಾರ, ಕಂದಾಯ ಇಲಾಖೆಗಳಲ್ಲಿ ಬ್ರೋಕರುಗಳು ಮಿತಿಮೀರಿದ ಸಂಖ್ಯೆಯಲ್ಲಿ ಇರುತ್ತಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಂತೂ ಬ್ರೋಕರುಗಳಿಗೆ ಜಾಗ ರಿಜಿಷ್ಟ್ರೇಶನ್ ಎಂದರೆ ಹಬ್ಬ. ಈಗ ಬ್ರೋಕರುಗಳ ಕೆಲಸದ ವ್ಯಾಪ್ತಿ ಬದಲಾಗಿದೆ. ಹೈಟೆಕ್ ಬ್ರೋಕರುಗಳು ಬಂದಿವೆ.

ಯಾವಾಗ 500, 1000 ರೂಪಾಯಿ ನೋಟಿಗೆ ಸಂಚಕಾರ ಬಿತ್ತೋ, ಅಂದಿನಿಂದ ಬ್ರೋಕರುಗಳೂ ತಣ್ಣಗಾಗಿಬಿಟ್ಟಿದ್ದಾರೆ.  ಹಳೇ ತಹಸೀಲ್ದಾರುಗಳ ಸೀಲು, ನಕಲುಗಳನ್ನು ಇಟ್ಟುಕೊಂಡವರು, ಡಿಸಿ ನನ್ನ ಕಿಸೆಯೊಳಗೇ ಇದ್ದಾರೆ ಎಂಬ ಧುರೀಣರು, ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕುಳಗಳ ಕೈಕಟ್ಟಿದಂತಾಗಿದೆ. ಈಗ ಏನಿದ್ದರೂ ಮಧ್ಯಮ ವರ್ಗ, ಬಡವರ ಕಾಲ.

ಆದರೂ ನೋಡಿ,

ಗುರುವಾರ ಸಿಎಂ ಆಪ್ತ ಅಧಿಕಾರಿಗಳ ಮನೆಗೆ ಇನ್ ಕಂ ಟ್ಯಾಕ್ಸ್ ರೈಡ್ ಆಯಿತು. ಅಲ್ಲಿ ಕೋಟಿಗಟ್ಟಲೆ ಹಣ ದೊರಕಿತು. ಅವುಗಳಲ್ಲಿ ಅರ್ಧಾಂಶದಷ್ಟು ಹೊಸ ನೋಟುಗಳೇ ಇದ್ದವು ಎಂಬುದು ಸುದ್ದಿ.

ಅದು ಹೇಗೆ ಸಾಧ್ಯ?

ಮೊನ್ನೆ ತಾನೇ ಮಗಳ ಮದುವೆ ಮುಗಿಸಿದ ವ್ಯಕ್ತಿಯೊಬ್ಬರು ಸಿಕ್ಕಿದ್ದರು. ಅವರು ಒಂದು ವಾರ ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ರಜೆ ಹಾಕಿದ್ದರು. ಹೇಗೆ ಮಗಳ ಮದುವೆ ಗೌಜಿಯಾ ಎಂದು ಕೇಳಿದೆ. ಅದಕ್ಕವರು ಇಲ್ಲ, ಇಡೀ ವಾರ ನೋಟಿಗಾಗಿ ಬ್ಯಾಂಕು ಮುಂದೆ ಅಲೆಯುವಂತೆ ಆಯಿತು ಎಂದು ಬೇಸರಪಟ್ಟುಕೊಂಡರು. ಇಡೀ ವಾರ ಕಾದರೂ ಅವರು ಹದಿನೈದು, ಇಪ್ಪತ್ತು ಸಾವಿರ ಒಟ್ಟುಗೂಡಿಸಲು ಆಗಲಿಲ್ಲ. ಆದರೆ ಮೊನ್ನೆ ಬೆಂಗಳೂರಿನ ಅಧಿಕಾರಿಯೊಬ್ಬರ ಮನೆಯಲ್ಲಿ ದೊರಕಿನ ಕೋಟಿ ರೂಪಾಯಿ ನೋಟಿನಲ್ಲಿ ಹೊಸ ನೋಟುಗಳು ಇದ್ದವು ಎಂದಾದರೆ ಅಷ್ಟು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.

ಸಿಎಂ ಆಪ್ತರು, ದೊಡ್ಡ ದೊಡ್ಡ ಗುತ್ತಿಗೆದಾರರು, ಬಿಸಿನೆಸ್ ಜನರು ಇಂಥವರಿಗೆಲ್ಲ ಬೇಕಾದ ಹಾಗೆ ನೋಟುಗಳು ದೊರಕುತ್ತವೆ, ಉಳಿದವರು ಬಿಸಿಲಲ್ಲಿ ಬಳಲುವಷ್ಟು ಕ್ಯೂ ನಿಲ್ಲಬೇಕು ಎಂದಾದರೆ ದಲ್ಲಾಳಿ ಕೆಲಸ ನಡೆಯುತ್ತಿದೆ ಎಂದರ್ಥ.

ಜಗತ್ತು ವೇಗದೆಡೆಗೆ ಹೋಗುತ್ತಿರುವ  ಈ ಕಾಲದಲ್ಲಿ ಮುಗ್ಧ ಜನರನ್ನು ವಂಚಿಸುವ ವ್ಯಕ್ತಿಗಳು ಕಾಣಸಿಗಬಾರದು. ಕೇವಲ ದಲ್ಲಾಳಿ ಕೆಲಸ ಮಾಡಿಕೊಂಡು ಅರಮನೆ ಕಟ್ಟಿಸಿಕೊಂಡವರ ಎದುರು ಜನಸಾಮಾನ್ಯನೂ ಎದ್ದು ನಿಲ್ಲುವಂತಾಗಿದ್ದರೆ, ಅದು 500, 1000 ರೂಪಾಯ ನೋಟು ಬ್ಯಾನ್ ಆದ ಬಳಿಕ.

ಏನಂತೀರಿ?

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.