ಬಂಟ್ವಾಳ: ಅನ್ಯೋನ್ಯತೆಯಿಂದ ಬಾಳ್ವೆ ನಡೆಸುವುದು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಾಗಿದೆ. ಪ್ರೀತಿ, ವಿಶ್ವಾಸದಿಂದ ಸಹಬಾಳ್ವೆ ನಡೆಸಲು ಸಹಕಾರ ನೀಡಲು ಪ್ರಯತ್ನ ಅಗತ್ಯ ಎಂದು ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಅತಿವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು.
ಬಂಟ್ವಾಳ ಸಮೀಪ ಅಗ್ರಾರ್ ನಲ್ಲಿರುವ ದಿ ಮೋಸ್ಟ್ ಹೋಲಿ ಸೇವಿಯರ್ ಚರ್ಚ್ ಆವರಣದಲ್ಲಿ ಅವರ ಗುರುದೀಕ್ಷೆಯ ಸುವರ್ಣ ಸಂಭ್ರಮಾಚರಣೆ ಸಂದರ್ಭ ಗೌರವಾರ್ಪಣೆ ಸ್ವೀಕರಿಸಿ ಅವರು ಸಂದೇಶ ನೀಡಿದರು.
ಸನ್ಮಾನವೆಲ್ಲವನ್ನೂ ದೇವರಿಗೆ ಅರ್ಪಿಸುವೆ, ದೇವರ ಕೃಪೆ, ಆಶೀರ್ವಾದ, ಅನುಗ್ರಹದಿಂದ ನನಗೆ ಜನರ ಸೇವೆ ಮಾಡುವ ಪುಣ್ಯಾವಕಾಶ ಲಭ್ಯವಾಗಿದೆ. ಅಗ್ರಾರ್ ಇಗರ್ಜಿಗೆ ಸುದೀರ್ಘ ಮುನ್ನೂರು ವರ್ಷಗಳಿಗೂ ಅಧಿಕ ಹಿನ್ನೆಲೆ ಇದೆ. ಈ ಇಗರ್ಜಿ ವ್ಯಾಪ್ತಿಯ ನಾಲ್ವರು ಧರ್ಮಾಧ್ಯಕ್ಷರಾಗಿರುವುದು ಇತಿಹಾಸ. ಎಲ್ಲರ ಸಹಕಾರದಿಂದ ಉತ್ತಮ ಸೇವಾ ಕಾರ್ಯ ನಡೆಸಲು ಅವಕಾಶ ಒದಗಿಬಂದಿದೆ ಎಂದು ಬಿಷಪ್ ಹೇಳಿದರು.
ಅಭಿನಂದನಾ ಭಾಷಣ ಮಾಡಿದ ಉಡುಪಿ ಬಿಷಪ್ ಅತಿ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೊ, ಜನರ ಪ್ರೀತಿಗೆ ಪಾತ್ರರಾಗಿರುವ ಗುರುಗಳು ದೇವರಿಗೆ ಹತ್ತಿರದವರು. ಮಂಗಳೂರು ಬಿಷಪ್ ಸರ್ವರ ಏಳಿಗೆಗೆ ಶ್ರಮಿಸಿದವರ. ಸಮಾಜದಲ್ಲಿ ಹಿಂದುಳಿದವರನ್ನು ಗುರುತಿಸಿ ಅವರ ಅಭ್ಯುದಯಕ್ಕೆ ಶ್ರಮಿಸಿದ ಅವರಿಂದಾಗಿ ಭಾರತದ 167 ಧರ್ಮಪ್ರಾಂತಗಳ ಪೈಕಿ ಮಂಗಳೂರು ಆದರ್ಶವಾಗಿ ರೂಪುಗೊಳ್ಳಲು ಸಾಧ್ಯವಾಗಿದೆ ಎಂದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಿಷಪ್ ಅವರ ಒಡನಾಟವನ್ನು ಸ್ಮರಿಸಿದರು. ಬಿಷಪ್ ನಮ್ಮವರು ಎನ್ನಲು ಹೆಮ್ಮೆ. ಪ್ರೀತಿಯಂದ ಜಗತ್ತನ್ನು ಗೆಲ್ಲಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಮಾತನಾಡಿ, ಸತ್ಪ್ರಜೆಯಾಗಲು ಬಿಷಪ್ ಮಾರ್ಗದರ್ಶಿ ಎಂದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಜೆ.ಆರ್.ಲೋಬೊ ಮಾತನಾಡಿದರು.
ಬಳ್ಳಾರಿ ಬಿಷಪ್ ಅತಿವಂದನೀಯ ಡಾ.ಹೆನ್ರಿ ಡಿಸೋಜ, ಮಂಗಳೂರು ಧರ್ಮಪ್ರಾಂತದ ವಿಭಾಗೀಯ ಮುಖ್ಯಸ್ಥೆ ವೆರಿ ರೆವರೆಂಡ್ ಸಿ.ಜೀನಾ, ಕರ್ನಾಟಕ ಕೊಂಕಣಿ ಅಕಾಡಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗದ ಅಧ್ಯಕ್ಷ ಎಂ.ಎ.ಗಫೂರ್, ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಬ್ಲೋಸಂ ಆಸ್ಕರ್ ಫರ್ನಾಂಡಿಸ್ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಕೆಥೋಲಿಕ್ ಧರ್ಮಾಧ್ಯಕ್ಷರ ಸುವರ್ಣ ಮಹೋತ್ಸವ ಆಚರಣಾ ಸಮಿತಿ ಬಂಟ್ವಾಳ ವಲಯ ಪ್ರಧಾನ ಸಂಚಾಲಕ ಪಿಯುಸ್. ಎಲ್. ರೋಡ್ರಿಗಸ್ ಸ್ವಾಗತಿಸಿದರು. ಬಂಟ್ವಾ ವಲಯ ಪ್ರಧಾನ ಧರ್ಮಗುರು ಮ್ಯಾಕ್ಸಿಂ ಎಲ್. ನೊರೊನ್ಹಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಗ್ರಾರ್ ಚರ್ಚ್ ಧರ್ಮಗುರು ರೆ.ಫಾ. ಗ್ರೆಗೊರಿ ಡಿಸೋಜ ಸನ್ಮಾನಪತ್ರ ವಾಚಿಸಿದರು.
ಬಂಟ್ವಾಳ ವಲಯ ಕಾರ್ಯದರ್ಶಿ ವಿಕ್ಟರ್ ಮಿನೇಜಸ್ ವಂದಿಸಿದರು. ಬಿ.ರಾಮಚಂದ್ರ ರಾವ್ ಹಾಗೂ ಜೀಟಾ ಕಾರ್ಯಕ್ರಮ ನಿರೂಪಿಸಿದರು.
ಪೂರ್ವಾಹ್ನ 10 ಗಂಟೆಗೆ ಧರ್ಮಾಧ್ಯಕ್ಷರ ನೇತೃತ್ವದಲ್ಲಿ ನೂರಾರು ಧರ್ಮಗುರುಗಳು, ನಾಲ್ವರು ಬಿಷಪರು, ಸಾವಿರಾರು ಭಕ್ತರೊಂದಿಗೆ ದಿವ್ಯ ಬಲಿಪೂಜೆ ನಡೆಯಿತು. ಈ ಸಂದರ್ಭ ಅಜ್ಮೀರ್ ಧರ್ಮಪ್ರಾಂತದ ಬಿಷಪ್ ಅ.ವಂ.ಡಾ. ಪಿಯುಸ್ ಥೋಮಸ್ ಡಿಸೋಜ , ಬಳ್ಳಾರಿ ಬಿಷಪ್ ಅತಿವಂದನೀಯ ಡಾ.ಹೆನ್ರಿ ಡಿಸೋಜ, ಉಡುಪಿ ಬಿಷಪ್ ಅತಿ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಅತಿವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಜೊತೆಗಿದ್ದರು.