ವಿಟ್ಲ: ಸಾಮಾಜಿಕ ಬದಲಾವಣೆಯಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಪತ್ರಕರ್ತರ ಸ್ಪಂದನೆ ಅತ್ಯವಶ್ಯಕ. ಪಟ್ಟಣ ಪಂಚಾಯಿತಿ ಕಸ ತರಿಗೆ ಇಳಿಸುವಲ್ಲಿ ಇಲ್ಲಿನ ಪತ್ರಕರ್ತರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ ಎಂ ವಿಟ್ಲ ಹೇಳಿದರು.
ಶನಿವಾರ ವಿಟ್ಲ ಪಟ್ಟಣ ಪಂಚಾಯಿತಿ ಕಟ್ಟಣದಲ್ಲಿ ವಿಟ್ಲ ಪ್ರೆಸ್ ಕ್ಲಬ್ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮಾತನಾಡಿ ಮಾಧ್ಯಮಕ್ಕೆ ಸಾಮಾಜಿಕ ಜವಾಬ್ದಾರಿಯೂ ಇದೆ. ವಿಟ್ಲ ಪ್ರೆಸ್ ಕ್ಲಬ್ ಎಲ್ಲಾ ನಿಟ್ಟಿನಿಂದ ನಾಗರೀಕರಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು.
ವಿಟ್ಲ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಮಾತನಾಡಿ ವಿಟ್ಲ ಭಾಗದಲ್ಲಿ ಸಾಮಾಜಿಕ ಶಾಂತಿ ಸಾಮರಸ್ಯ ಕಾಪಾಡುವಲ್ಲಿ ಮಾಧ್ಯiದ ಪಾತ್ರ ಪ್ರಮುಖವಾಗಿದೆ. ಘಟನೆಯ ಸಮಗ್ರ ಮಾಹಿತಿ ಪಡೆದುಕೊಂಡು ವರದಿ ಮಾಡುವ ಮೂಲಕ ಸಮಾಜಕ್ಕೆ ತೊಂದರೆಯಾಗದ ರೀತಿಯಲ್ಲಿ ಸಹಕರಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಮಾತನಾಡಿ ಸಂಘದ ರಜತ ಸಂಭ್ರಮದಲ್ಲಿ ವಿಟ್ಲ ಪ್ರೆಸ್ ಕ್ಲಬ್ ಉದ್ಘಾಟನೆಯಾಗಿರುವುದು ಸಂತಸ ವಿಚಾರ. ಸರ್ವರ ಸಹಕಾರದಿಂದ ವಿಸ್ತೃತ ವಿಟ್ಲ ಪತ್ರಿಕಾ ಭವನ ನಿರ್ಮಾಣವಾಗಲಿ ಎಂದು ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಿಶಾಂತ್ ಬಿಲ್ಲಂಪದವು, ಸದಸ್ಯರಾದ ಜನಾರ್ಧನ ವಿಟ್ಲ, ಚಂದ್ರ ಕಲ್ಮಲೆ, ಮಹಮ್ಮದ್ ಇಂಮ್ತಿಯಾಜ್ ಶಾ ತುಂಬೆ, ಹರೀಶ್ ಮಾಂಬಾಡಿ, ರತ್ನದೇವ ಪುಂಜಲಕಟ್ಟೆ, ಹಮೀದ್ ವಿಟ್ಲ, ವಿ. ಟಿ. ಪ್ರಸಾದ್ ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಉಪಾಧ್ಯಕ್ಷ ವಿಷ್ಣುಗುಪ್ತ ಪುಣಚ ಸ್ವಾಗತಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಉದಯಶಂಕರ ನೀರ್ಪಾಜೆ ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಮಹಮ್ಮದ್ ಆಲಿ ವಂದಿಸಿದರು.