ಕ್ಯೂ ನಿಂತು ಬೆವರು ಹರಿಸಿ, ನಮ್ಮದೇ ಹಣವನ್ನು ಪಡೆದುಕೊಳ್ಳುವವರ ಒತ್ತಾಯವೇನೆಂದರೆ 2 ಸಾವಿರ ನೋಟುಗಳ ಕಾಳಧನಿಕರರಿಗೆ ಕಟ್ಟುನಿಟ್ಟಿನ ಸಜೆಯಾಗಬೇಕು.
…………
2 ಸಾವಿರ ರೂಪಾಯಿ ನೋಟು ನಿಮ್ಮ ಬ್ಯಾಂಕಿನಲ್ಲಿ ಒಂದು ಬಾರಿಗೆ ಎಷ್ಟು ಸಿಗುತ್ತದೆ?
ನಮ್ಮ ಊರಿನ ಬಿ.ಸಿ.ರೋಡ್, ಬಂಟ್ವಾಳದಲ್ಲಿ ದಿನಕ್ಕೆ ನೋಟು ಪಡೆಯುವ ಗರಿಷ್ಠ ಮಿತಿಯನ್ನು ಬ್ಯಾಂಕಿನವರೇ ಹಾಕಿಕೊಂಡಿದ್ದಾರೆ. ಅಬ್ಬಬ್ಬಾ ಎಂದರೆ ಹತ್ತು ಸಾವಿರ ರೂಪಾಯಿ ಪಡೆಯಲು ಸಾಧ್ಯ ಎನ್ನುವವರು ಪೋಸ್ಟ್ ಆಫೀಸ್ ನವರು. ಉಳಿದಂತೆ ಎಟಿಎಂ.
ಎಟಿಎಂಗೆ ಹೋಗಬೇಕಿದ್ದರೆ ಬೆಳಗ್ಗಿನ ಹೊತ್ತೇ ಸರಿ. 2 ಸಾವಿರ ರೂಪಾಯಿ ನೋಟಿಗಿಂತ ಜಾಸ್ತಿಯೂ , ಕಡಿಮೆಯೂ ಅಲ್ಲಿ ಬರೋದೇ ಇಲ್ಲ. ಈ ವ್ಯವಸ್ಥೆಗೆ ಈಗ ನಾವೆಲ್ಲಾ ಒಗ್ಗಿಕೊಳ್ಳುತ್ತಿದ್ದೇವೆ.
ವಿಷಯ ಅದಲ್ಲ, ಈ ಮನುಷ್ಯರ ಬಳಿ ಹೊಸ ಹೊಸ 2 ಸಾವಿರ ರೂಪಾಯಿ ನೋಟು ಹೇಗೆ ಸಿಕ್ಕಿತು ಮಾರಾಯ್ರೇ?
ಕಳೆದ ಎರಡು ದಿನಗಳಿಂದ ಬರುತ್ತಿರುವ ಸುದ್ದಿ ನೋಡಿದರೆ, ಆಶ್ಚರ್ಯವಾಗದೇ ಇರದು.
ಪ್ರಕರಣ 1:
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ಯೋಜನಾಧಿಕಾರಿ ಜಯಚಂದ್ರ ನಿವಾಸಕ್ಕೆ ದಾಳಿ ನಡೆಸಿ 4.7 ಕೋಟಿ ಮೌಲ್ಯದ 2000 ರೂಪಾಯಿ ನೋಟು, ಅಪಾರ ಪ್ರಮಾಣದ 500, 100ರ ನೋಟು ಸೇರಿದಂತೆ ಸುಮಾರು 6 ಕೋಟಿ ನಗದನ್ನು ವಶಪಡಿಸಿಕೊಂಡಿದ್ದರು.
ಪ್ರಕರಣ ಸಂಬಂಧಿಸಿದಂತೆ ತಮಿಳುನಾಡಿನ ಈರೋಡ್‍ನ ಬ್ಯಾಂಕ್ ಸೇರಿದಂತೆ 4 ಬ್ಯಾಂಕ್ ಅಧಿಕಾರಿಗಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣ 2:
ಬೈಲೂರು ಗ್ರಾಮದಲ್ಲಿ ದಾಖಲೆ ಇಲ್ಲದ 2 ಸಾವಿರ ರೂ ಮುಖಬೆಲೆಯ 71 ಲಕ್ಷ ರೂಪಾಯಿ ದೊರಕಿದೆ.
ಪ್ರಕರಣ 3:
ಚಿಕ್ಕಮಗಳೂರು ಜಯನಗರದಲ್ಲಿ ಹೊಸ ನೋಟು ನೀಡಿ ಹಳೆ ನೋಟು ಪಡೆದು ಕಮಿಷನ್ ದಂಧೆ ನಡೆಸುತ್ತಿದ್ದ ಇಬ್ಬರನ್ನು 2000 ರೂಪಾಯಿ ಮುಖಬೆಲೆಯ 46 ಲಕ್ಷ ರೂಪಾಯಿ ಹಣದೊಂದಿಗೆ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಕಾಳಧನಿಕರಿಗೆ ನೋಟು ರದ್ಧತಿ ಬಳಿಕ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕವೂ ಹೊಸ ನೋಟಿನ ಅಷ್ಟೊಂದು ಬಂಡಲ್ಲುಗಳು ಹೇಗೆ ಸಿಕ್ಕಿದವು?
ಇಷ್ಟೊಂದು ದೊಡ್ಡ ಪ್ರಮಾಣದ ಅಕ್ರಮಕ್ಕೆ ಯಾರು ಕಾರಣರಾದರು?
ಐಟಿ ಅಧಿಕಾರಿಗಳ ಕಾರ್ಯಾಚರಣೆಯ ಬಳಿಕ ಕಂಡುಬಂದ ಅಂಶವೇನೆಂದರೆ ಭ್ರಷ್ಟರೊಂದಿಗೆ ಕೆಲ ಬ್ಯಾಂಕ್ ಅಧಿಕಾರಿಗಳೂ ಶಾಮೀಲಾಗಿ ಪ್ರಧಾನಿಯ ಯೋಜನೆಯನ್ನು ಮಣ್ಣು ಮಾಡುವ ಸಂಚು ಹೂಡಿರುವುದು ಸ್ಪಷ್ಟ.
ನೋಟು ವಿನಿಮಯಕ್ಕೆ ಸಂಬಂಧಿಸಿದಂತೆ ಆರ್‌ಬಿಐ ನೀಡಿದ್ದ ನಿರ್ದೇಶಗಳನ್ನು ಈ ಅಧಿಕಾರಿಗಳು ಗಾಳಿಗೆ ತೂರಿ ಅಕ್ರಮವೆಸಗಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯೇ ಹೇಳಿದೆ.
2 ಸಾವಿರ ರೂಪಾಯಿ ನೋಟುಗಳು ಹೀಗೆ ಅಟ್ಟಿ ಅಟ್ಟಿ ದೊರಕುತ್ತವೆ ಎಂದಾದರೆ ಕ್ಯೂ ನಿಂತ ವ್ಯಕ್ತಿ ಪಶು ಸಮಾನ ಎಂದಂತಾಯಿತಲ್ಲವೇ, ಹೀಗಾಗಿ ಇವರ ವಿರುದ್ಧ ಹಾಗೂ ಇವರಿಗೆ ಸಹಕರಿಸಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಈ ಕಾರ್ಯವನ್ನು ಈಗಾಗಲೇ ಆರಂಭಿಸಿದೆ.
ಆರ್‌ಬಿಐ ನಿರ್ದೇಶನಗಳನ್ನು ಸಂಪೂರ್ಣ ಗಾಳಿಗೆ ತೂರಿ ರದ್ದಾದ ಹಳೇ ನೋಟುಗಳನ್ನು 2,000 ರೂ.ಗಳ ಹೊಸ ನೋಟುಗಳಿಗೆ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ವಿನಿಮಯಿಸಿ ಕಾಳಧನಿಕರಿಗೆ ಪೂರೈಸಿರುವ ಆರೋಪದ ಮೇಲೆ ಸಾರ್ವಜನಿಕ ರಂಗದ ವಿವಿಧ ಬ್ಯಾಂಕಗುಳ 27 ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಮತ್ತು ಇನ್ನೂ ಆರು ಮಂದಿ ಹಿರಿಯ ಅಧಿಕಾರಿಗಳನ್ನು ಇತರಡೆಗಳಿಗೆ ವರ್ಗಾಯಿಸಲಾಗಿದೆ. ಆದರೆ ವರ್ಗಾವಣೆ ಒಂದೇ ಶಿಕ್ಷೆಯೇ, ಅಥವಾ ಅಮಾನತುಗೊಂಡರೆ ಅವರು ಏನು ಮಾಡುತ್ತಾರೆ? ಹಾಯಾಗಿ ಮನೆಯಲ್ಲಿರುತ್ತಾರೆ.
ಕ್ಯೂ ನಿಂತು ಬೆವರು ಹರಿಸಿ, ನಮ್ಮದೇ ಹಣವನ್ನು ಪಡೆದುಕೊಳ್ಳುವವರ ಒತ್ತಾಯವೇನೆಂದರೆ 2 ಸಾವಿರ ನೋಟುಗಳ ಕಾಳಧನಿಕರರಿಗೆ ಕಟ್ಟುನಿಟ್ಟಿನ ಸಜೆಯಾಗಬೇಕು.
ನೀವೇನಂತೀರಿ?